ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಹರಳಹಳ್ಳಿ ಕೆರೆಗೆ ಕಾಯಕಲ್ಪ ನೀಡಿದ ಧರ್ಮಸ್ಥಳ ಯೋಜನೆ

ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಮಿತಿ ಸಹಯೋಗ
Last Updated 11 ಫೆಬ್ರುವರಿ 2023, 3:59 IST
ಅಕ್ಷರ ಗಾತ್ರ

ಮಲೇಬೆನ್ನೂರು: ಜಾಲಿ ಮುಳ್ಳು, ಲಂಟನ್ ಗಿಡಗಳು ಹಾಗೂ ಹೂಳಿನಿಂದ ತುಂಬಿದ್ದ ಸಮೀಪದ ಹರಳಹಳ್ಳಿ ಗ್ರಾಮದ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಕಡಿಮೆ ವೆಚ್ಚದಲ್ಲಿ ನಡೆದ ಅಭಿವೃದ್ಧಿ ಕಾರ್ಯ ಜನಮನ ಸೆಳೆದಿದೆ.

‘₹ 10 ಲಕ್ಷ ವೆಚ್ಚದ ಯೋಜನೆಯ ಕಾಮಗಾರಿಗೆ ಜ. 6ರಂದು ಚಾಲನೆ ನೀಡಲಾಗಿದೆ. ಯೋಜನೆಯ ಮುಖ್ಯ ಉದ್ದೇಶ ಕೆರೆ ಹೂಳು ಎತ್ತಿಸಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಿ ಅಂತರ್ಜಲ ಪ್ರಮಾಣ ಹೆಚ್ಚಿಸುವುದು’ ಎಂದು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾಹಿತಿ ನೀಡಿದರು.

‘ಈಗಾಗಲೇ ರಾಜ್ಯದಾದ್ಯಂತ 427 ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಈ 14 ಎಕರೆ ವಿಸ್ತೀರ್ಣದ ಕೆರೆಯಲ್ಲಿ 579.60 ಗಂಟೆ ಕೆಲಸ ಮಾಡಿ 18,760 ಲೋಡ್ ಮಣ್ಣನ್ನು ಜೆಸಿಬಿ ಬಳಸಿ ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗಿದೆ. ಇದಕ್ಕೆ ₹ 8,54,910 ವ್ಯಯಿಸಲಾಗಿದೆ. ಸುತ್ತಮುತ್ತಲ ಗ್ರಾಮಗಳಾದ ಮಲೇಬೆನ್ನೂರು, ಹಾಲಿವಾಣ, ಕೊಪ್ಪ, ಮಲ್ಲನಾಯ್ಕನಹಳ್ಳಿ, ಕೆ. ಬೇವಿನಹಳ್ಳಿಯ 987 ರೈತರು ಮಣ್ಣನ್ನು ಹೊಲಕ್ಕೆ ಸಾಗಿಸಿದ್ದಾರೆ. ಬಾಕಿ ಕೆಲಸ ಕೆರೆಯ ಕೋಡಿ ಕಟ್ಟೆ ನಿರ್ಮಿಸಿ ಗೇಟ್ ಅಳವಡಿಸಬೇಕಿದೆ. ಕೆರೆ ಏರಿ ಅಭಿವೃದ್ಧಿ, ಪಾದಚಾರಿಗಳ ಓಡಾಟಕ್ಕೆ ರಸ್ತೆ, ಗಿಡ ನೆಡುವುದು, ಕಲ್ಲಿನ ಕುರ್ಚಿ, ಮಕ್ಕಳಿಗೆ ಜೋಕಾಲಿ, ಜಾರುಬಂಡಿ ಕೆಲಸ ಆಗಬೇಕಿದೆ’ ಎಂದು ಮಾಹಿತಿ ನೀಡಿದರು.

‘ಕೆರೆ ಕಲ್ಕಟ್ಟಣೆ ಹಾಗೂ ಇತರ ಕಾಮಗಾರಿಗೆ ಉದ್ಯೋಗ ಖಾತರಿ ಯೋಜನೆಯ ಅಡಿ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಾಂತಪ್ಪ ತಿಳಿಸಿದರು. ಮೀನು ಸಾಕಣೆಗಾಗಿ, ಕುಡಿಯುವ ನೀರಿನ ಯೋಜನೆಗೆ ಕೆರೆಯ ಸದ್ಬಳಕೆಯ ಉದ್ದೇಶವಿದೆ’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ವೈಖರಿಯನ್ನು ಕೆರೆ ಅಭಿವೃದ್ಧಿ ಸಮಿತಿ ಅದ್ಯಕ್ಷ ಮುದ್ದೆರ ಕರಿಬಸಪ್ಪ ಪ್ರಶಂಸಿಸಿದ್ದಾರೆ. ಗ್ರಾಮಸ್ಥರಾದ ಚಿಕ್ಕೊಳ್ ಕೃಷ್ಣಪ್ಪ, ಎಳೂರ ಕರಿಬಸಪ್ಪ, ಕೃಷಿ ಅದಿಕಾರಿ ಗಂಗಾಧರ, ಶಿವಕ್ಕಳ ಅಂಜನೇಯ, ರಂಗನಾಥ್, ಕೃಷ್ಣಪ್ಪ, ಅಣ್ಣಪ್ಪ, ರವಿಕುಮಾರ್, ಬೆಳ್ಳೂಡಿ ರಾಜಪ್ಪ ಇದ್ದರು.

..........

ಸರ್ಕಾರ ಕೆರೆ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಿರುವುದು ಲೆಕ್ಕದಲ್ಲಿ ಮಾತ್ರ ಇದೆ. ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರದಿಂದ ಆಗದ ಕೆಲಸ ಈ ಯೋಜನೆಯಿಂದ ಆಗಿದೆ.

-ಹನುಮಂತಪ್ಪ, ಹರಳಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT