ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ವೈದ್ಯ ದಂಪತಿಯ ಪರಿಸರ ಕಾಳಜಿ

Published 4 ಜೂನ್ 2023, 23:37 IST
Last Updated 4 ಜೂನ್ 2023, 23:37 IST
ಅಕ್ಷರ ಗಾತ್ರ

ಬಸವಾಪಟ್ಟಣ: ವೈದ್ಯ ವೃತ್ತಿ ನಡೆಸುತ್ತ ಅಪಾರ ಜನಪ್ರಿಯತೆ ಪಡೆದಿರುವ ಡಾ.ಬಸವನಗೌಡ ಕುಸಗೂರ್‌ ಅವರು ವೃತ್ತಿಯೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ನೂರಾರು ಗಿಡ– ಮರಗಳನ್ನು ಬೆಳೆಸುವ ಮೂಲಕ ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಇಲ್ಲಿನ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಅವರು ಬೆಳೆಸಿರುವ ವಿವಿಧ ಜಾತಿಯ ಸುಮಾರು 150 ಗಿಡಮರಗಳು ಅವರ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿ ನಿಂತಿವೆ. ಹೊಂಗೆ, ಗಸಗಸೆ, ಹಲಸು, ಕಾಡು ಬಾದಾಮಿ, ನೇರಳೆಯೊಂದಿಗೆ ಹಲವಾರು ಕಾಡು ಜಾತಿಯ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ.

1977ರಲ್ಲಿ ರಾಣೇಬೆನ್ನೂರು ತಾಲ್ಲೂಕು ಸುಣಕಲ್‌ಬಿದರಿ ಗ್ರಾಮದಿಂದ ಬಸವಾಪಟ್ಟಣಕ್ಕೆ ಬಂದು ಇಲ್ಲಿ ಖಾಸಗಿ ಕ್ಲಿನಿಕ್‌ ತೆರೆದು ವೈದ್ಯ ವೃತ್ತಿ ಮುಂದುವರಿಸಿದ ಅವರು ಪರಿಸರ ಕಾಳಜಿಯನ್ನೂ ಮೆರೆದರು.

‘ಮರಗಳ ಬೀಜಗಳನ್ನು ತಂದು ಸಸಿಗಳನ್ನು ಬೆಳೆಸಿ, ಇಲ್ಲಿನ ಮುಖ್ಯರಸ್ತೆಯ ಎರಡೂ ಕಡೆಗಳಲ್ಲಿ ನೆಟ್ಟಿದ್ದೇನೆ. ಇಲ್ಲಿನ ಸಾಮಿಲ್‌ನಲ್ಲಿ ಸಿಗುವ ಮರದ ತುಂಡುಗಳನ್ನು ಗಿಡಗಳ ಸುತ್ತಲೂ ನೆಟ್ಟು ಅವುಗಳಿಗೆ ಮುಳ್ಳಿನ ಗಿಡಗಳನ್ನು ಸುತ್ತಿ ದನಕರುಗಳು ತಿನ್ನದಂತೆ ಮಾಡಿದ್ದೇನೆ. ವರ್ಷದವರೆಗೆ ಪ್ರತಿ ದಿನ ಎಡೆಬಿಡದೇ ನೀರನ್ನು ಹಾಕಿದ್ದು, ಗಿಡಗಳು ಹುಲುಸಾಗಿ ಬೆಳೆದಿವೆ. ನಂತರ ಚರಂಡಿಯ ನೀರಿನ ಪಸೆಗೆ ಗಿಡಗಳು ಉತ್ತಮವಾಗಿ ಬೆಳೆದು ನಿಂತಿವೆ’ ಎನ್ನುತ್ತಾರೆ ಬಸವನಗೌಡ ಕುಸಗೂರ್‌.

ಅಲ್ಲದೇ ಗ್ರಾಮದ ಬಾಬಾಬುಡೇನ್‌ ದರ್ಗಾದ ಹಿಂಬದಿಯ ಗುಡ್ಡದಲ್ಲಿ ವಿವಿಧ ಜಾತಿಯ ಮರಗಳ ಬೀಜಗಳನ್ನು ಮಣ್ಣಿನ ಉಂಡೆಯಲ್ಲಿ ಹಾಕಿ ಬಿತ್ತನೆ ಮಾಡಲಾಗಿದೆ. ಅಲ್ಲಿ ನೂರಕ್ಕೂ ಹೆಚ್ಚು ಗಿಡಗಳು ಬೆಳೆದು ನಿಂತಿವೆ. ನನ್ನೊಂದಿಗೆ ವೈದ್ಯ ವೃತ್ತಿ ಕೈಗೊಂಡಿರುವ ಪತ್ನಿ ಡಾ.ವಿಜಯಲಕ್ಷ್ಮಿ ಕುಸಗೂರ್‌ ನನ್ನ ಪರಿಸರ ಪ್ರೇಮಕ್ಕೆ ಸಾಥ್‌ ನೀಡುತ್ತಿದ್ದು, ನಾವಿಬ್ಬರೂ ಬಿಡುವಿನ ವೇಳೆಯನ್ನು ವ್ಯರ್ಥ ಮಾಡದೆ ಗ್ರಾಮದ ರಸ್ತೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕಾಯಕ ಕೈಗೊಂಡಿದ್ದೇವೆ’ ಎನ್ನುವರು.

‘ಡಾ.ಕುಸಗೂರರು ತಮ್ಮ ತೋಟದಲ್ಲಿ ದನದ ಕೊಟ್ಟಿಗೆ ನಿರ್ಮಿಸಿ ಸುಮಾರು 70 ಬರಡು ಹಸುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸಾಕುತ್ತಾ ಅವುಗಳಿಗೆ ಮರು ಜೀವ ನೀಡಿದ್ದಾರೆ’ ಎನ್ನುತ್ತಾರೆ ಇಲ್ಲಿನ ವೈದ್ಯ ಡಾ.ಬಿ.ಎನ್‌. ರಂಗಪ್ಪ.

ಬಸವಾಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಡಾ.ಬಸವನಗೌಡ ಕುಸಗೂರ್ ಬೆಳೆಸಿರುವ ಗಿಡಗಳು ಈ ಬೇಸಿಗೆಯಲ್ಲಿಯೂ ನಳನಳಿಸುತ್ತಾ ನೆರಳು ನೀಡುತ್ತಿವೆ
ಬಸವಾಪಟ್ಟಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಡಾ.ಬಸವನಗೌಡ ಕುಸಗೂರ್ ಬೆಳೆಸಿರುವ ಗಿಡಗಳು ಈ ಬೇಸಿಗೆಯಲ್ಲಿಯೂ ನಳನಳಿಸುತ್ತಾ ನೆರಳು ನೀಡುತ್ತಿವೆ
ಬಸವಾಪಟ್ಟಣದ ತಮ್ಮ ತೋಟದಲ್ಲಿ ಪತ್ನಿ ಡಾ.ವಿಜಯಲಕ್ಷ್ಮಿ ಕುಸಗೂರ್ ಅವರೊಂದಿಗೆ ಡಾ.ಬಸವನಗೌಡ ಕುಸಗೂರ್
ಬಸವಾಪಟ್ಟಣದ ತಮ್ಮ ತೋಟದಲ್ಲಿ ಪತ್ನಿ ಡಾ.ವಿಜಯಲಕ್ಷ್ಮಿ ಕುಸಗೂರ್ ಅವರೊಂದಿಗೆ ಡಾ.ಬಸವನಗೌಡ ಕುಸಗೂರ್

ಬಸವನಗೌಡ ಕುಸಗೂರ್‌ ಅವರು ಹಲವಾರು ವರ್ಷಗಳಿಂದ ಪ್ರತಿ ಶನಿವಾರ ಮತ್ತು ಭಾನುವಾರ ಮುಂಜಾನೆ ಇಲ್ಲಿನ ಬೈಪಾಸ್‌ ರಸ್ತೆಯಲ್ಲಿ ಬಿದ್ದಿರುವ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಗೊಳಿಸುತ್ತ ಎಲ್ಲರಲ್ಲಿ ಪರಿಸರ ಪ್ರೇಮ ಬಿತ್ತುತ್ತಿದ್ದಾರೆ.

- ಎಂ.ಎಸ್‌.ಸಂಗಮೇಶ್‌ ನಿವೃತ್ತ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT