ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಗ್ಗಮ್ಮನ ಜಾತ್ರೆ: ನಗರದಲ್ಲಿ ಕುರಿಗಳ ಭರಾಟೆ

ಹಸಿ ಹುಲ್ಲಿಗೂ ಬಂತು ಬೇಡಿಕೆ, ನಗರದೆಲ್ಲೆಡೆ ಮಾಂಸದೂಟಕ್ಕೆ ಸಿದ್ಧತೆ
Last Updated 29 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ದಾವಣಗೆರೆ: ನಗರ ದೇವತೆ ದುಗ್ಗಮ್ಮನ ಜಾತ್ರೆ ಕಳೆಕಟ್ಟಿದೆ. ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ. ದುರ್ಗಾಂಬಿಕಾ ದೇವಿ ದೇವಾಲಯದಲ್ಲಿ ಜಾತ್ರೆ ಸಂಭ್ರಮ ಮನೆಮಾಡಿದೆ.

ದೇವಾಲಯದ ಎದುರು ಮಂಟಪ, ಪೂಜೆಯ ಸಿದ್ಧತೆ ನಡೆದಿದೆ. ದೇವಾಲಯಕ್ಕೆ ಭಕ್ತರ ದಂಡು ಹರಿಸು ಬರುತ್ತಿದೆ. ಆಟಿಕೆ ಸಾಮಗ್ರಿಗಳು, ಅಲಂಕಾರ ವಸ್ತುಗಳು ಸೇರಿ ಹಲವು ಅಂಗಡಿಗಳು ಲಗ್ಗೆ ಇಟ್ಟಿವೆ. ದೇವಾಲಯದ ಸುತ್ತ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ನಾಗರಾಜ

ಜಾತ್ರೆ ಅಂಗವಾಗಿ ಮಾರ್ಚ್‌ 4ರಂದು ನಡೆಯುವ ಮಾಂಸದೂಟಕ್ಕಾಗಿ ನಗರದೆಲ್ಲೆಡೆ ಭರ್ಜರಿ ಸಿದ್ಧತೆ ನಡೆದಿದೆ. ಎಲ್ಲಿ ನೋಡಿದರೂ ಮನೆಗಳ ಮುಂದೆ ಕುರಿಗಳು ಕಾಣುತ್ತಿವೆ. ನಗರದ ಬಹುತೇಕ ಕಡೆ ಮಾಂಸದೂಟದ ತಯಾರಿ ಘಮಲು ಬರುತ್ತಿದೆ. ತಳವಾರ ಕೇರಿ, ಹೊಂಡದ ಸರ್ಕಲ್‌, ಗಾಂಧಿನಗರ, ಎಸ್‌ಕೆಪಿ ರಸ್ತೆ, ಶಿವಾಜಿನಗರ, ಬೂದಾಳ್‌ ರಸ್ತೆ, ಜಾಲಿನಗರ, ವಿನೋಬ ನಗರ, ದೇವರಾಜ್‌ ಅರಸ್‌ ಬಡಾವಣೆ, ನಿಟುವಳ್ಳಿ ಸೇರಿ ಮನೆಗಳ ಮುಂದೆ ಕುರಿಗಳು, ಮೇವು ಕಾಣುವುದು ಸಾಮಾನ್ಯ ಎಂಬಂತಾಗಿದೆ.

ಜನರು ಭಾರಿ ಗಾತ್ರದ, ಸಣ್ಣ ಗಾತ್ರದ ಕುರಿಗಳನ್ನು ಈಗಾಗಲೇ ಖರೀದಿಸಿ ತಂದಿದ್ದಾರೆ. ದುಗ್ಗತ್ತಿ, ಹಾವೇರಿ, ರಾಣೆಬೆನ್ನೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ ಸೇರಿ ಎಲ್ಲೆಲ್ಲಿ ಕುರಿ ಸಂತೆ ನಡೆಯುತ್ತದೆಯೋ ಅಲ್ಲಿಂದ ಕುರಿಗಳನ್ನು ಖರೀದಿಸಿ ತಂದಿದ್ದಾರೆ.

₹ 8 ಸಾವಿರದಿಂದ ಹಿಡಿದು ₹ 35 ಸಾವಿರದವರೆಗಿನ ಕುರಿಗಳು ಕಾಣಸಿಗುತ್ತಿವೆ. ದೂರದೂರಿನ ಬಂಧುಗಳಿಗೆ ಅಕ್ಕಪಕ್ಕದವರಿಗೆ ಹಬ್ಬಕ್ಕೆ ಬರುವಂತೆ ಆಹ್ವಾನ ಹೋಗಿದೆ.

‘ಸಣ್ಣ ಮರಿ, ದೊಡ್ಡ ಮರಿಗೆ ಒಂದೊಂದು ದರ ಇರುತ್ತದೆ. 10 ಕೆ.ಜಿ ತೂಗುವ ಕುರಿಗೆ ₹ 8 ರಿಂದ ₹ 9 ಸಾವಿರ, 16 ಕೆ.ಜಿಗೆ ₹ 32, ₹ 35 ಹೀಗೆ ದರ ಹೇಳುತ್ತಾರೆ. ದುಗ್ಗತ್ತಿ ಜಾತ್ರೆಯಿಂದ ಈಗತಾನೇ ₹ 35 ಸಾವಿರ ಕೊಟ್ಟು ಕುರಿ ಖರೀದಿಸಿ ತಂದಿದ್ದೇನೆ. ಭಾಳ ನೆಂಟರು ಇದ್ದಾರೆ. ದೊಡ್ಡ ಮರಿಯೇ ಬೇಕು’ ಎಂದು ನಗುತ್ತಲೇ ಹೇಳಿದರು ತಳವಾರ ಕೇರಿಯ ಅಶೋಕ್.

ಹುಲ್ಲಿಗೂ ಬೇಡಿಕೆ:

ಕುರಿ ಊಟಕ್ಕೆ 15, 20 ದಿನಗಳ ಹಿಂದೆಯೇ ಕುರಿಗಳನ್ನು ಖರೀದಿಸಿ ತಂದ ಕಾರಣ ಜನರು ಅವುಗಳಿಗೆ ಮೇವಿಗಾಗಿ ಹುಲ್ಲು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಇಲ್ಲಿನ ಹೊಂಡದ ಸರ್ಕಲ್‌, ಡಾಂಗೆ ಪಾರ್ಕ್ ಸೇರಿ ಅಲ್ಲಲ್ಲಿ ಹುಲ್ಲಿನ ರಾಶಿ ಹಾಕಿ ರೈತರು ಮಾರಾಟ ಮಾಡುತ್ತಿದ್ದಾರೆ. ದುಗ್ಗಮ್ಮನ ದೇವಸ್ಥಾನದ ಸುತ್ತಲಿನ ಬಡಾವಣೆಗಳಲ್ಲಿ ಬೈಕ್‌ನಲ್ಲಿ, ಕೈಯಲ್ಲಿ ಹುಲ್ಲು ಹಿಡಿದು ಹೋಗುವ ಜನರೇ ಕಾಣಸಿಗುತ್ತಿದ್ದಾರೆ. ಪಿಂಡಿಗೆ ₹ 10 ರಂತೆ ಹುಲ್ಲಿನ ಮಾರಾಟ ಭರ್ಜರಿಯಾಗಿದೆ.

ಆವರಗೊಳ್ಳ, ಕಕ್ಕರಗೊಳ್ಳ, ಕುಂದವಾಡ, ಕೊಂಡಜ್ಜಿ, ಕೊಕ್ಕನೂರು, ಬೇತೂರು, ಕೆಂಚನಹಳ್ಳಿ ಸೇರಿ ಸುತ್ತಲಿನ ಹಳ್ಳಿಗಳ ಹೊಲಗಳಿಂದ ಹುಲ್ಲು ತಂದು ಮಾರಾಟ ಮಾಡುತ್ತಿದ್ದಾರೆ. ಮುಂಜಾನೆ ಹೊಲಕ್ಕೆ ಹೋಗುವ ಕೃಷಿಕರು ಬೆಳಿಗ್ಗೆ 10 ರ ಹೊತ್ತಿಗೆ ಹುಲ್ಲು ಕೊಯ್ದು ತಂದು ಇಲ್ಲಿ ಕೂರುತ್ತಿದ್ದಾರೆ.

‘15 ದಿನಗಳಿಂದ ಹುಲ್ಲಿನ ವ್ಯಾಪಾರ ಮಾಡುತ್ತಿದ್ದೇನೆ. ಬೆಳಿಗ್ಗೆಯಿಂದ ಸಂಜೆವರೆಗೆ ವೃತ್ತದ ಬಳಿ ಹುಲ್ಲಿನ ರಾಶಿ ಹಾಕುತ್ತಿದ್ದೇವೆ. ದಿನಕ್ಕೆ 10, 20 ಪಿಂಡಿ ಹುಲ್ಲು ಮಾರಾಟ ಮಾಡುತ್ತೇವೆ. ₹300ರಿಂದ ₹ 500 ವ್ಯಾಪಾರವಾಗುತ್ತಿದೆ. ಇನ್ನೆರಡು ದಿನ ಮಾರಾಟ ನಡೆಯುತ್ತದೆ’ ಎಂದು ಕೊಂಡಜ್ಜಿಯ ಭೀಮ ಹೇಳಿದರು.

ಸದ್ದು ಮಾಡುತ್ತಿವೆ ರುಬ್ಬುವ ಯಂತ್ರಗಳು:

ನಗರದ ಹಲವೆಡೆ ಕಾರದ ಪುಡಿ, ಗೋಧಿ, ರಾಗಿ, ಜೋಳದ ಹಿಟ್ಟು ಮಾಡುವ ರುಬ್ಬುವ ಯಂತ್ರಗಳ ಸದ್ದು ಕೇಳುತ್ತಿದೆ. ಜಾತ್ರೆ ಹಿನ್ನೆಲೆಯಲ್ಲಿ ಮಾಂಸದ ಊಟಕ್ಕೆ ಕಾರದ ಪುಡಿ, ಮಸಾಲೆ, ರೊಟ್ಟಿ, ಜಪಾತಿ ಅಡುಗೆಗಾಗಿ ಜನರು ಹಿಟ್ಟು ಮಾಡಲು ಗಿರಣಿಗಳತ್ತ ಮುಖ ಮಾಡಿದ್ದಾರೆ.

ಕಲ್ಲಿನ ಯಂತ್ರಗಳು, ವಿದ್ಯುತ್‌ ಚಾಲಿತ ಯಂತ್ರಗಳ ಸದ್ದು, ಮಸಾಲೆ, ಕಾರದ ಪುಡಿ ಘಮ ಬಡಿಯುತ್ತಿದೆ.

ಜಾತ್ರೆ ಅಂಗವಾಗಿ ಗಿರಣಿಗಳ ಬಳಿ ಸರತಿ ಇದೆ. ನೆಂಟರು ಬರುವ ಕಾರಣ ಭಾರಿ ಭೋಜನಕ್ಕಾಗಿ ಮಸಾಲೆ ತಯಾರಿಗೆ ಪುಡಿ ಮಾಡಿಸಲು ಬರುತ್ತಿದ್ದಾರೆ. ಶಾಮಿಯಾನಕ್ಕೂ ಬೇಡಿಕೆ ಬಂದಿದೆ ಎಂದು ನಿಟುವಳ್ಳಿಯ ಮಂಜುನಾಥ ಹಿಟ್ಟಿನ ಗಿರಣಿಯ ರಮೇಶ್‌ ಹೇಳಿದರು.

ಇಂದು ಸಾರು ಹಾಕುವ ಕಾರ್ಯಕ್ರಮ:

ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಮಾ. 1ರಂದು ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ನಡೆಯಲಿದೆ. ರಾತ್ರಿ ಸಾರು ಹಾಕುವ ಕಾರ್ಯಕ್ರಮ ನಡೆಯಲಿದ್ದು, ಜನಸಾಗರವೇ ಹರಿದು ಬರಲಿದೆ. ಅದಕ್ಕಾಗಿ ದೇವಾಲಯದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT