ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುರ್ಗಾಂಬಿಕಾ ಜಾತ್ರೆ: ಪ್ರಾಣಿ ಬಲಿ ನಿಷೇಧ

Published 14 ಮಾರ್ಚ್ 2024, 7:18 IST
Last Updated 14 ಮಾರ್ಚ್ 2024, 7:18 IST
ಅಕ್ಷರ ಗಾತ್ರ

ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದ್ದು, ಒಂದು ವೇಳೆ ಪ್ರಾಣಿ ಬಲಿ ನಡೆಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಸಿದರು.

ನಗರದ ಶ್ರೀ ದುರ್ಗಾಂಬಿಕಾ ಜಾತ್ರೆ, ಹೋಳಿ ಹಬ್ಬ, ರಂಜಾನ್ ಹಬ್ಬ, ಗುಡ್‌ಫ್ರೈಡೆ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಮೌಢ್ಯಾಚರಣೆ, ಅನಿಷ್ಠ ಪದ್ಧತಿಗಳ ವಿರುದ್ಧವೂ ಸೂಕ್ತ ಕ್ರಮ ವಹಿಸಲಾಗುವುದು’ ಎಂದರು.

‘ಹಬ್ಬದ ವೇಳೆಗೆ ಲೋಕಸಭೆ ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ. ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಹಬ್ಬ ಆಚರಿಸಬೇಕು. ಆ ಮನಸ್ಥಿತಿಯನ್ನು ಇಂದಿನಿಂದಲೇ ರೂಢಿಸಿಕೊಳ್ಳಬೇಕು. ನೀತಿ ಸಂಹಿತೆಗೆ ಅನುಗುಣವಾಗಿ ಏಕಗವಾಕ್ಷಿಯಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುತ್ತದೆ’ ಎಂದು ಹೇಳಿದರು.

‘ದುರ್ಗಾಂಬಿಕಾ ದೇವಾಲಯದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಹಬ್ಬದ ವೇಳೆ ಟ್ರಾಫಿಕ್‌ಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಲಕ್ಷಾಂತರ ಜನರು ಸೇರುವುದರಿಂದ ನೂಕುನುಗ್ಗಲು ಆಗಬಾರದು. ಮಹಿಳೆಯರು ಹಾಗೂ ಮಕ್ಕಳು ನಿಲ್ಲಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

‘ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಯವರು ಎಚ್ಚರ ವಹಿಸಬೇಕು. ಕುಸ್ತಿ ನಡೆಯುವ ಕಡೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳಬೇಕು. ಹಬ್ಬದ ವೇಳೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದರಿಂದ ನಿಯಂತ್ರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದರು.

‘ಹೋಳಿ ಹಬ್ಬದಲ್ಲಿ ಬಲವಂತವಾಗಿ ಬಣ್ಣ ಹಾಕಬಾರದು. ಬಣ್ಣದಲ್ಲಿ ರಾಸಾಯನಿಕ ಮಿಶ್ರಣವಾಗಿದ್ದು, ಇದರಿಂದ ಕಣ್ಣು ಹಾಗೂ ಚರ್ಮಕ್ಕೆ ಹಾನಿಯಾಗಲಿದ್ದು, ಎಚ್ಚರಿಕೆ ವಹಿಸಬೇಕು. ಒತ್ತಾಯವಾಗಿ ಹಣ ವಸೂಲಿ ಮಾಡಬಾರದು. ಸಾರ್ವಜನಿಕ ಜಲಮೂಲಗಳನ್ನು ಕಲುಷಿತಗೊಳಿಸಬಾರದು. ಧ್ವನಿರ್ಧಕ ಬಳಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಬಾರದು’ ಎಂದು ಎಚ್ಚರಿಸಿದರು.

ಪ್ರಾಣಿ ಬಲಿ ಗದ್ದಲ: ‘ದೇವಾಲಯದ ಸುತ್ತಮುತ್ತ ಪ್ರಾಣಿಬಲಿ ನಡೆಯುತ್ತಿದ್ದು, ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು’ ಎಂದು ಮುಖಂಡ ಕೆ.ಬಿ. ಶಂಕರನಾರಾಯಣ ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಸದಸ್ಯ ಗೌಡ್ರ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದರು. ದೇವಸ್ಥಾನದ ಸುತ್ತಮುತ್ತ ಪ್ರಾಣಿಬಲಿ ಎಲ್ಲೂ ನಡೆಯುತ್ತಿಲ್ಲ. ಮನೆಯಲ್ಲಿ ಪ್ರಾಣಿಬಲಿ ಕೊಟ್ಟರೆ ಸಮಿತಿ ಜವಾಬ್ದಾರಿಯಲ್ಲ’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್‌ಕುಮಾರ್ ಎಂ.ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಆರ್‌ಟಿಒ ಪ್ರಮತೇಶ್, ಸ್ಮಾರ್ಟ್‌ಸಿಟಿ ಎಂಡಿ ವೀರೇಶ್ ಕುಮಾರ್ ಇದ್ದರು.

ಪ್ರಚೋದನಾಕಾರಿ ಪೋಸ್ಟ್ ಹಾಕಿದರೆ ನಿರ್ದಾಕ್ಷಿಣ್ಯ ಕ್ರಮ

‘ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಸೋಷಿಯಲ್ ಮಾನಿಟರಿಂಗ್ ಸೆಲ್ ಇದ್ದು ಇದು ಜಾಲತಾಣಗಳ ಮೇಲೆ ನಿಗಾ ವಹಿಸಲಿದೆ. ಹೇಳಿಕೆಗಳನ್ನು ತಿರುಚಿ ಸುಳ್ಳು ಸುದ್ದಿ ಹಬ್ಬಿಸಿ ಪ್ರಚೋದನಾಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದರು.

‘ಇದೊಂದು ದೊಡ್ಡ ಸವಾಲು ಆಗಿದ್ದು ಪ್ರಚೋದನಾಕಾರಿ ಹೇಳಿಕೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತವೆ. ಇದರಿಂದಾಗಿ ಬೇರೆ ಘಟನೆಗಳು ಸಂಭವಿಸುವುದರಿಂದ ಎಚ್ಚರಿಕೆ ವಹಿಸಬೇಕಾಗುತ್ತದೆ’ ಎಂದರು.

ದುರ್ಗಾಂಬಿಕಾ ಜಾತ್ರೆ 5 ವರ್ಷಕ್ಕೊಮ್ಮೆ ನಡೆಯಲಿ

ನಗರದೇವತೆ ದುರ್ಗಾಂಬಿಕಾ ಜಾತ್ರೆಯನ್ನು ಎರಡು ವರ್ಷಗಳ ಬದಲಿಗೆ ಪ್ರತಿ 5 ವರ್ಷಗಳಿಗೊಮ್ಮೆ ನಡೆಸಬೇಕು ಎಂದು ಮುಖಂಡರಾದ ಆವರಗೆರೆ ಉಮೇಶ್ ಸೋಮಲಾಪುರ ಹನುಮಂತಪ್ಪ ಹಾಗೂ ಎಲ್‌.ಡಿ.ಗೋಣೆಪ್ಪ ಸಭೆಯಲ್ಲಿ ಸಲಹೆ ನೀಡಿದರು.

‘ಹಬ್ಬ ಆಚರಿಸಲು ಒಂದು ಕುಟುಂಬಕ್ಕೆ ಕನಿಷ್ಠ ₹50000ದಿಂದ ₹2 ಲಕ್ಷದವರೆಗೂ ಖರ್ಚು ತಗುಲುತ್ತದೆ.  ಸಾಲ ಮಾಡಿ ಹಬ್ಬ ಆಚರಿಸಬೇಕಾಗುತ್ತದೆ. ಆ ಸಾಲ ತೀರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ದೇವಸ್ಥಾನದ ಧರ್ಮದರ್ಶಿ ಸಮಿತಿಯವರಿಗೆ ಸೂಚಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು.

‘ಕೆಲವರು ಎರಡು ವರ್ಷಗಳಿಗೊಮ್ಮೆ ಹಬ್ಬ ಆಚರಿಸಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಹಬ್ಬ ಆಚರಿಸುವವರು ಆಚರಿಸಲಿ. ಇಲ್ಲದಿದ್ದರೆ ಬೇಡ’ ಎಂದು ಬಿ.ಎಚ್.ವೀರಭದ್ರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT