ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಬಾರದ, ಕಿವಿ ಕೇಳದ ಮತದಾರರಿಗೆ ನೆರವು: ಮೊದಲ ಬಾರಿ ರಾಜ್ಯದಲ್ಲಿ ಪ್ರಯೋಗ

ಮೊದಲ ಬಾರಿ ರಾಜ್ಯದಲ್ಲಿ ಪ್ರಯೋಗ, ಚುನಾವಣೆ ಕಾರ್ಯಕ್ಕೆ ‘ಸಂಜ್ಞೆ ಸಂವಹನಕಾರರು’
Last Updated 1 ಜನವರಿ 2023, 20:50 IST
ಅಕ್ಷರ ಗಾತ್ರ

ದಾವಣಗೆರೆ: ಮಾತು ಬಾರದ, ಕಿವಿ ಕೇಳದ ಮತದಾರರ ನೆರವಿಗಾಗಿ ‘ಸಂಜ್ಞೆ ಸಂವಹನಕಾರರನ್ನು ಪೋಲ್‌ ಪ್ಯಾನಲ್‌ ಸಹಾಯಕರನ್ನಾಗಿ ನೇಮಿಸಿಕೊಳ್ಳಬೇಕು’ ಎಂದು ಚುನಾವಣಾ ಆಯೋಗ ಸೂಚಿಸಿದ್ದು, ರಾಜ್ಯ ವಿಧಾನಸಭೆ ಚುನಾವಣೆಯ ಮತಗಟ್ಟೆಗಳಲ್ಲಿ ಸಂಜ್ಞೆ ಸಂವಹನಕಾರರು ಕಾರ್ಯ ನಿರ್ವಹಿಸಲಿದ್ದಾರೆ.

ರಾಜ್ಯದಲ್ಲಿ 2011ರ ಗಣತಿ ಪ್ರಕಾರ ವಾಕ್‌ ಮತ್ತು ಶ್ರವಣದೋಷ ಹೊಂದಿದ 1.66 ಲಕ್ಷ ಜನರಿದ್ದು, ಈಗ ಅವರ ಸಂಖ್ಯೆ 2 ಲಕ್ಷ ದಾಟಿದೆ. ಅವರು ಮತ ಚಲಾಯಿಸಲು ಬಂದಾಗ ಯಾವುದೇ ಸಂಶಯ ಬಂದರೂ ಕೇಳಲು ಅವರಿಗೆ ಮಾತು ಬಾರದು. ಅಲ್ಲಿದ್ದವರಿಗೆ ಇವರ ಸಂಜ್ಞೆ ಅರ್ಥವಾಗದು ಎಂಬ ಕಾರಣದಿಂದ ಸಮಸ್ಯೆ ನಿವಾರಣೆಗಾಗಿ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ನೀಡಿದ ಸೂಚನೆ ಮೇರೆಗೆ ಸರ್ಕಾರ ನೆರವಿನ ಕ್ರಮ ಕೈಗೊಂಡಿದೆ.

ಸಂಜ್ಞೆ ಸಂವಹನ ಸಹಾಯಕರು ಆಯಾ ಮತಗಟ್ಟೆಯಲ್ಲಿ ಇದ್ದರೆ, ಮಾತು ಬಾರದ, ಕಿವಿ ಕೇಳದ ಮತದಾರರಲ್ಲಿನ ಗೊಂದಲ ನಿವಾರಿಸಬಹುದು. ಎಲ್ಲ ಮತಗಟ್ಟೆಯಲ್ಲಿ ಸಂಜ್ಞೆ ಸಂವಹನಕಾರರು ಇರಲಾರರು. ಅದಕ್ಕಾಗಿ ಈ ಸಂವಹನಕಾರರ ಮೊಬೈಲ್‌ ಸಂಖ್ಯೆ ಎಲ್ಲ ಬೂತ್‌ಗಳಲ್ಲಿ ಇರಬೇಕು. ಅಗತ್ಯ ಇರುವವರು ಈ ಸಂಖ್ಯೆಗೆ ವಿಡಿಯೊ ಕಾಲ್‌ ಮಾಡಿ ಸಂಶಯ ನಿವಾರಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಶ್ರವಣದೋಷ ಉಳ್ಳವರಿಗಾಗಿ ತಲಾ ಒಂದು ಪ್ರಾಥಮಿಕ, ಪ್ರೌಢಶಾಲೆ ಇದೆ. ಅದರಲ್ಲಿ 40 ಮಂದಿ ಶಿಕ್ಷಕರು ಇದ್ದಾರೆ. ಬೇರೆಯವರೂ ಸಂಜ್ಞೆ ಸಂವಹನ ಜ್ಞಾನ ಹೊಂದಿದ್ದಾರೆ. ಜಿಲ್ಲೆಯಲ್ಲಿ ಸಂಜ್ಞೆ ಸಂವಹನಕಾರರ ಕೊರತೆ ಇಲ್ಲ. ಯಾವ ಜಿಲ್ಲೆಯಲ್ಲಿ ಶ್ರವಣದೋಷವುಳ್ಳ ವಿದ್ಯಾರ್ಥಿಗಳ ಕಲಿಕೆಗೆ ಸೌಲಭ್ಯ ಇಲ್ಲವೋ ಅಲ್ಲಿ ಕೊರತೆ ಕಾಡಲಿದೆ ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್‌ ತಿಳಿಸಿದರು.

‘ನಮ್ಮಲ್ಲಿ ಎಲ್ಲರಿಗೂ ಸಂಜ್ಞೆ ಭಾಷೆ ಕಲಿಸಲಾಗುತ್ತಿದೆ. ವಿದ್ಯಾವಂತರಾಗಿ ಇರುವುದರಿಂದ ಅವರಿಗೆ ಕನ್ನಡ ಓದಲು ಬರುತ್ತದೆ. ಯಾರಿಗೆ ಮತ ಹಾಕಬೇಕು ಎಂಬುದು ಗೊತ್ತಾಗುತ್ತದೆ. ಇಷ್ಟಾದ ಮೇಲೂ ಸಂಶಯ ಬಂದರೆ ಸಂಜ್ಞೆ ಸಂವಹನಕಾರರು ಸಹಾಯ ಮಾಡುತ್ತಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT