ಬುಧವಾರ, ಜನವರಿ 27, 2021
20 °C
‘ಕಾಡ ಮಲ್ಲಿಗೆ’ ಬಿಡುಗಡೆ ಕಾರ್ಯಕ್ರಮ

‘ಕವನ ರಚನೆಗೆ ಭಾವ ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕವಿತೆ ರಚನೆಗೆ ಭಾವ ಮುಖ್ಯ. ಗದ್ಯ ಒಂದು ಓದಿನಲ್ಲಿ ಅರ್ಥವಾಗಿ ಬಿಡುತ್ತದೆ. ಕಾವ್ಯ ನಾನಾ ಓದಿನಲ್ಲಿ ನಾನಾ ಅರ್ಥಗಳನ್ನು ಹೊಮ್ಮಿಸುತ್ತದೆ ಎಂದು ಹಿರಿಯ ಸಾಹಿತಿ ಡಾ. ವಸಂತಕುಮಾರ್‌ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗಮ್ಯ ಪ್ರಕಾಶನದಿಂದ ಸುರೇಂದ್ರ ವಾಂಕ್ಡೋತ್‌ ಅವರ ‘ಕಾಡ ಮಲ್ಲಿಗೆ’ ಕೃತಿಯನ್ನು ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಒಂದು ಕವಿತೆ 20ನೇ ವಯಸ್ಸಿಗೆ ಹೊಮ್ಮಿಸುವ ಅರ್ಥ 50 ವರ್ಷ ತುಂಬಿದಾಗ ಬದಲಾಗಬಹುದು. ಹಾಗಾಗಿ ಒಂದು ಕವಿತೆ ಒಬ್ಬನೇ ವ್ಯಕ್ತಿಗೆ ಬೇರೆ ಬೇರೆ ವಯಸ್ಸಲ್ಲಿ ಬೇರೆ ಬೇರೆ ಅರ್ಥಗಳು ಕಾಣಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ ಭಿನ್ನವಾಗಿ, ಕಾಲಘಟ್ಟದಿಂದ ಕಾಲಘಟ್ಟಕ್ಕೆ ಭಿನ್ನವಾಗಿ ಅರ್ಥ ಹೊಮ್ಮಬಹುದು. ಅದಕ್ಕೆ ಕಾವ್ಯವೇ ಅದ್ಭುತ ಸಾಹಿತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾಷೆಯ ಮೂಲಕ ಲೋಕಾನುಭವವನ್ನು ಹೇಳಲು ಸಾಧ್ಯವಾಗುವವನು ಉತ್ತಮ ಕವಿಯಾಗುವನು. ತನ್ನ ಅನುಭವವನ್ನು ನೆಪವಾಗಿಟ್ಟುಕೊಂಡು ಲೋಕಾನುಭವವನ್ನು ಹೇಳುತ್ತಾನೆ. ಕವಿ ಎಲ್ಲ ಹೊತ್ತಿನಲ್ಲಿ ಋಷಿಯಾಗಿರುವುದಿಲ್ಲ. ಕವಿತೆ ಬರೆಯುವ ಹೊತ್ತಿನಲ್ಲಿ ಋಷಿ ಆಗಿರುತ್ತಾನೆ. ಹಾಗಾಗಿ ಕವಿ ಸುಳ್ಳು ಬರೆಯಲಾರ. ಸತ್ಯನಿಷ್ಠನಾಗಿರುತ್ತಾನೆ ಎಂದು ವಿಶ್ಲೇಷಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕುರ್ಕಿ ಮಾತನಾಡಿ, ‘ಸಾಹಿತ್ಯದ ಸೃಷ್ಟಿ ಒಂದು ಕಾಲದಲ್ಲಿ ಪಾಂಡಿತ್ಯದ ಸೊತ್ತಾಗಿತ್ತು. ಅರಮನೆಯಲ್ಲಿ ರಾಜರನ್ನು ವೈಭವೀಕರಿಸಲು ಬಳಕೆಯಾಗುತ್ತಿತ್ತು. 12ನೇ ಶತಮಾನದಲ್ಲಿ ಅರಮನೆಯಿಂದ ಹೊರ ಬಂದು ಜನಸಾಮಾನ್ಯರ ಕೈಗೆ ತಲುಪಿತು. ಸಾಹಿತ್ಯದ ಸೃಷ್ಟಿ ಎನ್ನುವುದು ಕೆಲವರ ಸೊತ್ತು ಅಲ್ಲ. ಸಮಾಜದ ಆಗು ಹೋಗುಗಳನ್ನು ಗ್ರಹಿಸುವ, ಅವಲೋಕಿಸುವ, ವಿವೇಚನೆ ಇರುವ ಪ್ರಜೆಯುಳ್ಳವರ ಸೊತ್ತು.  ಅಂತರಂಗದ ಅರಿವು, ವಿವೇಕ ಇರುವವರು ಸಾಹಿತ್ಯ, ಸಂಸ್ಕೃತಿಗೆ ಕೊಡುಗೆಯನ್ನು ನೀಡಬಲ್ಲರು’ ಎಂದು ತಿಳಿಸಿದರು.

ವೃತ್ತಿ ಮತ್ತು ಪ್ರವೃತ್ತಿಗಳು ಬರಹದಲ್ಲಿ ಪರಿಣಾಮ ಬೀರುತ್ತವೆ. ಪೊಲೀಸ್‌ ಒಬ್ಬ ಸಾಹಿತಿಯಾದರೆ ಅವರ ಕವಿತೆಗಳಲ್ಲಿ ಲಾಟಿ, ಬೂಟುಗಳು ಬರುತ್ತವೆ. ಸುರೇಂದ್ರ ಅವರ ಕವಿತೆಗಳು ಆಗ ತಾನೆ ಅರಳಿದ ಹೂವಿನಂತೆ, ಮುಂಜಾನೆ ಎಲೆಯ ಮೇಲೆ ನಿಂತ ಮಂಜಿನ ಹನಿಯಂತೆ ತಾಜವಾಗಿದೆ. ತಾನಾಗಿಯೇ ಹುಟ್ಟುವ ಕವಿತೆ ಮತ್ತು ಕಟ್ಟುವ ಕವಿತೆ ಬೇರೆ ಬೇರೆ ಎಂದು ಪತ್ರಕರ್ತ ಬಿ.ಎನ್‌. ಮಲ್ಲೇಶ್ ವಿಶ್ಲೇಷಿಸಿದರು.

ಸಾಹಿತಿ ಪ್ರಕಾಶ್ ಕೊಡಗನೂರು ಪ್ರಾಸ್ತವಿಕವಾಗಿ ಮಾತನಾಡಿದರು. ಡಯಟ್ ಪ್ರಾಚಾರ್ಯ ಎಚ್.ಕೆ. ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಕೊಟ್ರೇಶ್, ಸಾಹಿತಿ ಡಾ. ಎನ್. ಚಂದ್ರೇಗೌಡ, ವಾಣಿಜ್ಯ ತೆರಿಗೆ ಇಲಾಖೆಯ ಉಪ ವಿಭಾಗಾಧಿಕಾರಿ ಎಂ. ಸತೀಶ್, ಬಿ.ಆರ್. ಮಂಜುನಾಥ್, ಎಚ್‌. ಕೃಷ್ಣ ನಾಯ್ಕ್, ಬದ್ಯಾನಾಯ್ಕ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ. ಆರ್. ಆರಾಧ್ಯ, ಗಮ್ಯ ಪ್ರಕಾಶನದ ಕೆ. ರಾಜೇಶ್ವರಿ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು