ಮಂಗಳವಾರ, ಸೆಪ್ಟೆಂಬರ್ 27, 2022
27 °C
ಮಂಡಕ್ಕಿ, ಉಪ್ಪು, ಕರಿಮೆಣಸುಗಳನ್ನು ಅರ್ಪಿಸಿ ಸಾಮರಸ್ಯ ಸಾರಿದ ಹಿಂದೂ ಮತ್ತು ಮುಸ್ಲಿಮರು

ದಾವಣಗೆರೆ: ನಗರದಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಿಂದೂ– ಮುಸ್ಲಿಂ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.

ಮೊಹರಂನ ಒಂಬತ್ತನೇ ದಿನವಾದ ಸೋಮವಾರ ರಾತ್ರಿ ಹಲವೆಡೆ ಅಗ್ನಿಕುಂಡ ಹಾಕಿ ಆಲಿ ದೇವರ ಅಲಾವಿ (ಪಂಜಾ) ಹೊತ್ತವರು ಕೆಂಡವನ್ನು ಹಾಯ್ದು ಹರಕೆ ತೀರಿಸಿದರು.

ಕೆಟಿಜೆ ನಗರ, ಹೊಂಡದ ವೃತ್ತ, ಬಂಬೂಬಜಾರ್, ಅಹಮದ್‌ನಗರ, ಬಾಷಾನಗರ ಸೇರಿ 48ಕ್ಕೂ ಹೆಚ್ಚು ಕಡೆಗಳಲ್ಲಿ  ಪಂಜಾಗಳನ್ನು ಸ್ಥಾಪನೆ ಮಾಡಲಾಗಿತ್ತು. ಎಲ್ಲಾ ಕಡೆ ಧಾರ್ಮಿಕ ಗುರುಗಳಿಂದ ಪ್ರವಚನಗಳು ನಡೆದವು. ನಗರದ ಅನೇಕ ಕಡೆಗಳಲ್ಲಿ ಸಿಹಿ ಮತ್ತು ಷರಬತ್ತು ಹಂಚಲಾಯಿತು.

ಆಲಿ ದೇವರ ಅಲಾವಿಗಳು ಮಂಗಳವಾರ ಬೆಳಿಗ್ಗೆ ವಿವಿಧ ಓಣಿಗಳಲ್ಲಿ ಸಂಚರಿಸಿದವು. ತಮ್ಮ ಮನೆ ಎದುರಿಗೆ ಬಂದ ದೇವರನ್ನು ಹಿಂದೂ ಮತ್ತು ಮುಸ್ಲಿಮರು ಸ್ವಾಗತಿಸಿದರು. ಹರಕೆ ಹೊತ್ತ ಭಕ್ತರು ಮಂಡಕ್ಕಿ, ಉಪ್ಪು, ಕರಿಮೆಣಸುಗಳನ್ನು ಅರ್ಪಿಸಿ ಪೂಜೆ ನೆರವೇರಿಸಿ ಸಾಮರಸ್ಯಕ್ಕೆ ಸಾಕ್ಷಿಯಾದರು. ಕೆಲವು ಕಡೆ, ಮಕ್ಕಳು, ಮಹಿಳೆಯರು ಅಲಾವಿ ಬಳಿ ಹರಕೆ ತೀರಿಸಿದರು.

‘ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಮ್ ಹಸನ್ ಹಾಗೂ ಹಝರತ್ ಇಮಾಮ್ ಹುಸೇನ್ ಅವರ ಸ್ಮರಣೆಗಾಗಿ ಹಬ್ಬವನ್ನು ಆಚರಿಸಲಿದ್ದು, ಮುಸ್ಲಿಮರ ಜೊತೆಗೆ ಹಿಂದೂಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ರೋಗ ರುಜಿನ ಸೇರಿ ಇಷ್ಟಾರ್ಥ ಸಿದ್ದಿಗಾಗಿ ಹಬ್ಬದಲ್ಲಿ ಭಕ್ತರು ಹರಕೆಯನ್ನು ತೀರಿಸುತ್ತಾರೆ’ ಎಂದು ಮೊಹರಂ ಸಮಿತಿ ಕಾರ್ಯದರ್ಶಿ ಎಂ.ಡಿ.ತೌಫಿಕ್.

‘ನಗರದ ವಿವಿಧ ಬಡಾವಣೆಗಳಲ್ಲಿರುವ ಅಲಾವಿಗಳು ಹೊಂಡದ ಸರ್ಕಲ್‌ನಲ್ಲಿರುವ ಅಜರತ್ ರತನ್ ಷಾವಲಿ ದರ್ಗಾಕ್ಕೆ ಬಂದು ಬಂದು ಮುಖ ತೊಳೆಸಿ ಹೋದವು’ ಎಂದು ತೌಫಿಕ್ ತಿಳಿಸಿದರು.

‘ಕೆಟಿಜೆ ನಗರ 5ನೇ ಕ್ರಾಸ್‌ನಲ್ಲಿ 5 ಅಲಾವಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. 70 ವರ್ಷಗಳಿಂದಲೂ ಆಚರಿಸುತ್ತಾ ಬಂದಿದ್ದೇವೆ. ದೇವರ ನೈವೇದ್ಯಕ್ಕಾಗಿ ಬೆಲ್ಲದ ಹಚ್ಚು, ಸಕ್ಕರೆ, ಕೆಲವರು ಜೋಳದ ರೊಟ್ಟಿಯನ್ನು ಅರ್ಪಿಸಿದರು’ ಎಂದು ಅಲ್ಲಿನ ದೇವರ ಸೇವಕ ಮೊಹಮ್ಮದ್ ರಫೀಕ್ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು