ಮಂಗಳವಾರ, ಮಾರ್ಚ್ 9, 2021
28 °C
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಸಿ.ಶ್ರೀನಿವಾಸ್ ಭಟ್ ಆಗ್ರಹ

ಬ್ರಾಹ್ಮಣರಿಗೆ 10% ಮೀಸಲಾತಿ ಒದಗಿಸಿ: ಬ್ರಾ‌ಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಕೇಂದ್ರ ಸರ್ಕಾರ ಶೇ 10ರಷ್ಟು ಮೀಸಲಾತಿ ಘೋಷಿಸಿದ್ದು, ರಾಜ್ಯದಲ್ಲೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಸಿ.ಶ್ರೀನಿವಾಸ್ ಭಟ್ ಆಗ್ರಹಿಸಿದರು.

‘ಓಬಿಸಿ ಪಟ್ಟಿಯಲ್ಲಿಲ್ಲದ 144 ಜಾತಿ ಹಾಗೂ ಉಪಜಾತಿಗಳ ಲಕ್ಷಾಂತರ ಜನರಿಗೆ ಮೀಸಲು ಸೌಲಭ್ಯ ದೊರೆಯಲಿದೆ. ಕೇಂದ್ರ ಶೇ 10ರಷ್ಟು ಮೀಸಲಾತಿ ಕಲ್ಪಿಸಿದ್ದರೂ ಬ್ರಾಹ್ಮಣರಿಗೆ ಶೇ 3.50ರಷ್ಟು ಮಾತ್ರ ಸಿಗುತ್ತಿದೆ. ದೇಶದ 9 ರಾಜ್ಯಗಳಲ್ಲಿ ಈಗಾಗಲೇ ಸೌಲಭ್ಯ ನೀಡಲಾಗುತ್ತಿದ್ದು, ರಾಜ್ಯದಲ್ಲಿಯೂ ಜಾರಿಗೆ ತರಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಆರ್ಥಿಕವಾಗಿ ಹಿಂದುಳಿದ ಅರ್ಹ ಬ್ರಾಹ್ಮಣರಿಗೆ ಸರ್ಕಾರ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡುವಂತೆ ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಆಧಾರ್ ಕಾರ್ಡ್ ಹಾಗೂ ಟಿಸಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬಹುದಾಗಿದೆ’ ಎಂದು ಹೇಳಿದರು.

ನಿಗಮದಿಂದ ಹಲವು ಯೋಜನೆ:

ಬ್ರಾಹ್ಮಣರ ಅಭಿವೃದ್ಧಿಗೆ ನಿಗಮದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಿದ್ದು, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್‌ನಂತರದ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ‘ಶಾಂದೀಪನಿ ಶಿಷ್ಯವೇತನ’ ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವ ‘ಆಚಾರ್ಯತ್ರಯ ವೇದ ಶಿಷ್ಯವೇತನ’ ಹಾಗೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’ ಹಾಗೂ ಐಎಎಸ್‌, ಐಪಿಎಸ್ ‍ಪರೀಕ್ಷೆಗಳಿಗೆ ತರಬೇತಿ ನೀಡಲು ‘ಚಾಣಕ್ಯ ಆಡಳಿತ ತರಬೇತಿ ಯೋಜನೆ‘ಯನ್ನು ಜಾರಿಗೆ ತರಲಾಗುವುದು’ ಎಂದು ಹೇಳಿದರು.

ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ‘ಸನ್ನಿಧಿ’ ಯೋಜನೆ, ಬ್ರಾಹ್ಮಣರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ‘ಸರ್‌.ಎಂ. ವಿಶ್ವೇಶ್ವರಯ್ಯ ಕೌಶಲಾಭಿವೃದ್ಧಿ ಯೋಜನೆ’ ಸಮಾಜದ ಮಹಿಳೆಯರಿಗೆ ಕರಕುಶಲ ವಸ್ತುಗಳ ತಯಾರಿಕೆಗೆ ಮಾರುಕಟ್ಟೆ ಒದಗಿಸುವುದು ಹಾಗೂ ಅಲ್ಲದೇ ಬ್ರಾಹ್ಮಣ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗುವುದು’ ಎಂದರು.

‘ಸುಭದ್ರ’ ಯೋಜನೆಯಡಿ ಸಮುದಾಯ ಅಂಗವಿಕಲರಿಗೆ, ವಿಧವೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ನೀಡಲಾಗುವುದು. ‘ಸೌಖ್ಯ’ ಯೋಜನೆಯಡಿ ವೃದ್ಧಾಶ್ರಮಗಳ ಸ್ಥಾಪನೆ ಹಾಗೂ ‘ಕಲ್ಯಾಣ’ ಯೋಜನೆಯಡಿ ಬ್ರಾಹ್ಮಣರಿಗೆ ಸಾಮೂಹಿಕ ವಿವಾಹ, ಉಪನಯನಗಳನ್ನು ಆಯೋಜಿಸುವುದು, ಬ್ರಾಹ್ಮಣ ಕೃಷಿಕರು, ಅಡುಗೆಯವರು ಹಾಗೂ ಪುರೋಹಿತರನ್ನು ಮದುವೆಯಾಗುವ ವಧುವಿನ ಹೆಸರಿನಲ್ಲಿ ವಿತ್ತ ಬಾಂಡ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

 ‘ನವ್ಯೋದ್ಯಮ ಆರಂಭಿಸುವ ಅರ್ಹ ಬ್ರಾಹ್ಮಣ ಉದ್ಯಮಿಗಳಿಗೆ ಪುರುಷೋತ್ತಮ ಯೋಜನೆ, ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ‘ಅನ್ನದಾತಯೋಜನೆ’ ಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಹಾಯಧನ ಪಾವತಿ ಮಾಡುವ ‘ಚೈತನ್ಯ ಉತ್ಸವ’ ಯೋಜನೆಗಳನ್ನು ಜಾರಿಗೆ ತರಲಾಗುವುದು’ ಎಂದು ಹೇಳಿದರು.

ಸತ್ಯನಾರಾಯಣರಾವ್, ಸರೋಜಾ ದೀಕ್ಷಿತ್, ಸುಬ್ರಹ್ಮಣ್ಯ, ಬದರೀಪ್ರಸಾದ್, ಎಂ.ಜಿ. ಶ್ರೀಕಾಂತ್, ಅನಿಲ್ ಬಾರಂಗಳ್  ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು