ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಹಣದಲ್ಲಿ ಹೊಲಗಾಲುವೆ ನಿರ್ಮಾಣಕ್ಕೆ ಮುಂದಾದ ರೈತರು

Last Updated 29 ಡಿಸೆಂಬರ್ 2022, 3:03 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪಟ್ಟಣದ ಹೊರವಲಯಲ್ಲಿ ಹಾದುಹೋಗಿರುವ ಭದ್ರಾ 9ಬಿ ಉಪನಾಲೆ ವಿಭಾಗದ 1ನೇ ಎಡ ಪೈಪ್ ಔಟ್‌ಲೆಟ್ ಕಾಂಕ್ರೀಟ್ ಲೈನಿಂಗ್ ಹಾಳಾಗಿದ್ದು, ರೈತರು ಒಗ್ಗೂಡಿ ಹಣ ಸಂಗ್ರಹಿಸಿ ಬುಧವಾರ ಹೊಲಗಾಲುವೆ ನಿರ್ಮಾಣ ಕಾರ್ಯ ಪ್ರಾರಂಭಿಸಿದರು.

ಸುಮಾರು 600 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಉಪನಾಲೆ ಹೊಲಗಾಲುವೆ ಬಸವಾಪಟ್ಟಣ ಉಪವಿಭಾಗದ ವ್ಯಾಪ್ತಿಗೆ ಸೇರುತ್ತದೆ.

300 ಅಡಿ ಕಾಂಕ್ರೀಟ್ ಲೈನಿಂಗ್ ಅನ್ನು ಮಾಜಿ ಶಾಸಕ ಬಿ.ಪಿ. ಹರೀಶ್ ಅವರು ಕಾಡಾ ಅಧ್ಯಕ್ಷರಾಗಿದ್ದಾಗ ನಿರ್ಮಿಸಲಾಗಿತ್ತು. ಕಾಲಾನಂತರ ಸಂಪೂರ್ಣ ಹಾಳಾಗಿ ಕೆಳಭಾಗದಲ್ಲಿ ನಾಲೆ ನೀರು ಸೋರಿಕೆಯಾಗಿ ಅಚ್ಚುಕಟ್ಟಿನ ಕೊನೆಭಾಗಕ್ಕೆ ನೀರು ತಲುಪುತ್ತಿರಲಿಲ್ಲ. ಪ್ರತಿ ಬಾರಿ ಹತ್ತಾರು ರೈತರು ಒಗ್ಗೂಡಿ ಕಲ್ಲುಮಣ್ಣು ಹುಲ್ಲು ತುಂಬಿ ನೀರನ್ನು ಹರಿಸಬೇಕಾಗಿತ್ತು.

ನಾಲೆ ನವೀಕರಿಸಲು ಕಾಡಾ ಅಧ್ಯಕ್ಷರಿಗೆ ಮನವಿ ಮಾಡಿದ ನಂತರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೊಂದಿಗೆ ಸ್ಥಳ ಪರಿಶೀಲಿಸಿ, ಹೊಸದಾಗಿ ಹೊಲಗಾಲುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಎಇಇ ಮೂಲಕ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.

‘4 ತಿಂಗಳು ಕಳೆದರೂ ನಾಲೆ ದುರಸ್ತಿಯಾಗದಿದ್ದಾಗ ಪುನಃ ಕಾಡಾ ಅಧ್ಯಕ್ಷರನ್ನು ಸಂಪರ್ಕಿಸಿದೆವು. ಅವರುಹಣಕಾಸಿನ ಮಂಜೂರಾತಿ ಸಿಕ್ಕಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಭೇಟಿ ಮಾಡಿದರೆ ಶಾಸಕರ ಕಡೆ ಬೊಟ್ಟು ಮಾಡಿದರು. ಶಾಸಕ ಎಸ್. ರಾಮಪ್ಪ ಅವರನ್ನು ಭೇಟಿ ಮಾಡಿದಾಗ, ಆರ್ಥಿಕ ಬಿಕ್ಕಟ್ಟನ್ನು ತೋರಿಸಿದರು. ಇದರಿಂದ ಬೇಸತ್ತು ಸ್ವಂತ ಹಣ ಹಾಕಿ ನಾಲೆ ದುರಸ್ತಿ ಮಾಡುವ ನಿರ್ಧಾರ ಮಾಡಿದೆವು’ ಎಂದು ಒ.ಜಿ. ಶಿವಕುಮಾರ, ಕುಬೇರಪ್ಪ ಕೆ.ಜಿ. ಭೀಮಣ್ಣ, ಹಲವಾಗಲು ಚಂದ್ರಪ್ಪ, ದೇವೇಂದ್ರಪ್ಪ ಪೂಜಾರ್, ಶಿವನಗೌಡ ತಿಳಿಸಿದರು.

‘ಕಳೆದ ವರ್ಷ ಕ್ರಿಯಾ ಯೋಜನೆಯಲ್ಲಿ ಈ ಕಾಮಗಾರಿಯನ್ನು ಸೇರಿಸಲಾಗಿತ್ತು. ಮಂಜೂರಾತಿ ಸಿಕ್ಕಿಲ್ಲ. ಹೊಲಗಾಲುವೆಗಳು ‘ಕಾಡಾ’ ವ್ಯಾಪ್ತಿಗೆ ಬರುತ್ತವೆ.

- ಧನಂಜಯ, ಬಸವಾಪಟ್ಟಣದ ಎಇಇ

ಭದ್ರಾ ಕಾಡಾಕ್ಕೆ ಹಣ ಮಂಜೂರಾಗಿಲ್ಲ ಎನ್ನುವ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ. ಹೊಲಗಾಲುವೆ ನಿರ್ಮಿಸಲು ರೈತರು ಸ್ವಂತ ಹಣ ಹಾಕುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.

-ಹಂಚಿನ ಮನೆ ಸುರೇಶ್ ಶಾಸ್ತ್ರಿ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT