ಶನಿವಾರ, ಏಪ್ರಿಲ್ 4, 2020
19 °C
ಕಾಡಿದ ನಿಷೇಧದ ಭೀತಿ * ಜಾತ್ರೆಯ ಸಿದ್ಧತೆಗಾಗಿ ಹೊರಬಂದ ಮಂದಿ

ಕಾಡಿದ ನಿಷೇಧದ ಭೀತಿ: ಮಾರುಕಟ್ಟೆಗೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಆದೇಶ ಹೊರಡಿಸಲಾಗಿದ್ದು, ದಾವಣಗೆರೆಗೂ ಈ ಭೀತಿ ತಟ್ಟಿದೆ. ಇದರ ಪರಿಣಾಮವಾಗಿ ಜನರು ಸೋಮವಾರ ಮಾರುಕಟ್ಟೆಗೆ ಮುಗಿಬಿದ್ದರು. ಸ್ವತಃ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ನಿಯಂತ್ರಿಸಲು ಪ್ರಯತ್ನಪಟ್ಟರೂ ಜನ ಸಂದಣಿ ಕಡಿಮೆಯಾಗಲಿಲ್ಲ.

ಮಾರ್ಚ್‌ 25ರಂದು ಚಾಂದ್ರಮಾನ ಯುಗಾದಿ ಇರುವುದರಿಂದ ಕೊರೊನಾ ಭೀತಿಯ ನಡುವೆ ಹಬ್ಬ ಆಚರಿಸಲು ಜನ ನಿರ್ಧರಿಸಿರುವುದು ಕೂಡ ಈ ರೀತಿ ಸಂದಣಿ ಉಂಟಾಗಲು ಕಾರಣವಾಯಿತು.

ಗಡಿಯಾರ ಕಂಬದ ಮಾರುಕಟ್ಟೆಯಲ್ಲಿ ಕಾಲು ಹಾಕಲು ಜಾಗವಿಲ್ಲದಷ್ಟು ಜನ ಸೇರಿದ್ದರು. ತರಕಾರಿ ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜನ ಬಂದಿರುವುದರಿಂದ ತರಕಾರಿ ಬೆಲೆಯೂ ದುಪ್ಪಟ್ಟಾಯಿತು.

ಭಾನುವಾರ ಜನತಾ ಕರ್ಫ್ಯೂ ಇದ್ದ ಕಾರಣ ಜನರು ಹೊರಗೆ ಬಂದಿರಲಿಲ್ಲ. ಅದಕ್ಕೆ ಸಿದ್ಧರಾಗಿ ಶನಿವಾರವೇ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿಟ್ಟುಕೊಂಡಿದ್ದರು. ಹಾಗಾಗಿ ಸೋಮವಾರ ಬೆಳಿಗ್ಗೆ ಎಂದಿನಂತೆ ಖರೀದಿ ಇತ್ತು. ಆದರೆ ಭಾರಿ ಜನ ಸೇರಿರಲಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಲಾಕ್‌ಡೌನ್‌ ಅನ್ವಯವಾಗಲಿದೆ. ಕರ್ಫ್ಯೂ ವಿಧಿಸಲಿದ್ದಾರೆ ಎಂಬ ಮಾತುಗಳು ಮಧ್ಯಾಹ್ನದ ಹೊತ್ತಿಗೆ ಹರಿದಾಡಿದ್ದರಿಂದ ಖರೀದಿ ಒಮ್ಮೆಲೇ ಏರಲು ಕಾರಣವಾಯಿತು.

ಗಡಿಯಾರ ಕಂಬ, ಕಾಯಿಪೇಟೆ, ಕೆ.ಆರ್‌. ಮಾರುಕಟ್ಟೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು.

ಇಂಧನಕ್ಕೆ ಕ್ಯೂ

ಜನತಾ ಕರ್ಫ್ಯೂನಿಂದಾಗಿ ಭಾನುವಾರ ಪೆಟ್ರೋಲ್‌ ಬಂಕ್‌ಗಳು ಬಂದಾಗಿದ್ದರಿಂದ ಸೋಮವಾರ ಬೆಳಿಗ್ಗಿನಿಂದಲೇ ಡೀಸೆಲ್‌, ಪೆಟ್ರೋಲ್‌ ಹಾಕಲು ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಕರ್ಫ್ಯೂ ಮುಂದುವರಿಯಲಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಮಧ್ಯಾಹ್ನದ ಬಳಿಕ ಈ ಸರತಿ ಸಾಲು ಇನ್ನೂ ದೊಡ್ಡದಾಯಿತು.

ವಿದೇಶದಿಂದ ಬಂದವರು ಓಡಾಡುವ ವದಂತಿ

ವಿದೇಶದಿಂದ ಬಂದಿರುವ ಇಬ್ಬರು ಅಧಿಕಾರಿಗಳ ಕೈಗೆ ಸಿಗದೇ ಓಡಾಡುತ್ತಿದ್ಆರೆ. ಆ ಕಾರಣಕ್ಕಾಗಿ ಎಲ್ಲ ಕಡೆ ಬಂದ್‌ ಮಾಡಲಾಗುತ್ತಿದೆ ಎಂಬ ವದಂತಿ ಕೆಲವು ಕಡೆ ಹರಿದಾಡಿದೆ.

‘ಅಪಾಯ ಹೆಚ್ಚಿದೆ’

‘ಈ ರೀತಿ ಜನ ಸೇರಿದರೆ ಭಾರಿ ಅಪಾಯ ಇದೆ. ಸೋಂಕಿತರೊಬ್ಬರು ಈ ಸಂತೆಯೊಳಗೆ ಬಂದು ಬಿಟ್ಟರೆ ಸಾವಿರಾರು ಜನರಿಗೆ ಹರಡುವ ಸಾಧ್ಯತೆ ಇರುತ್ತದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತರಕಾರಿ ಮಾರುಕಟ್ಟೆ ನಡೆಯುವ ಪ್ರದೇಶಗಳಿಗೆ ಭೇಟಿ ನೀಡಿ, ಸುತ್ತಮುತ್ತಲು ಇರುವ ಚಿನ್ನಾಭರಣ, ಪ್ಲಾಸ್ಟಿಕ್‌, ಸ್ಟೀಲ್‌ ಅಂಗಡಿಗಳನ್ನು ಬಂದ್‌ ಮಾಡಿಸಿದ ಬಳಿಕ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರೂ ಇದ್ದರು.

ಹೋಮ್‌ ಕ್ವಾರಂಟೈನ್‌ಗಳಿಗೆ ಭೇಟಿ

ವಿದೇಶಗಳಿಂದ ಬಂದಿರುವ ಕಾರಣಕ್ಕಾಗಿ ಪ್ರತ್ಯೇಕವಾಗಿ ಕೊಠಡಿಗಳಲ್ಲಿ ನಿಗಾ ಇರಿಸಲಾದ ಜನರ ಮನೆಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಆ ಮನೆಗಳಿಗೆ ಕ್ವಾರಂಟೈನ್‌ ಹೋಂ ಎಂಬ ಸ್ಟಿಕ್ಕರ್‌ ಅಂಟಿಸಲಾಯಿತು. ಡಿಎಚ್‌ಒ ಡಾ. ರಾಘವೇಂದ್ರ ಸ್ವಾಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು