ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡಿಸೌತೆ ರಫ್ತು ಸಮಸ್ಯೆ ಸರಿಪಡಿಸಿ: ಉದ್ಯಮಿಗಳ ಆಗ್ರಹ

ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ
Last Updated 11 ಆಗಸ್ಟ್ 2021, 3:47 IST
ಅಕ್ಷರ ಗಾತ್ರ

ದಾವಣಗೆರೆ: ಮಿಡಿ ಸೌತೆಕಾಯಿಯನ್ನು ಬೇರೆ ದೇಶಗಳಿಗೆ ರಫ್ತು ಮಾಡಬೇಕಿದ್ದರೆ ವರ್ಷದ ಹಿಂದೆ ಶಿಪ್ಪಿಂಗ್‌ಗೆ 500 ಡಾಲರ್‌ ಕಟ್ಟಬೇಕಿತ್ತು. ಈಗ ಒಮ್ಮೆಲೇ 3,500 ಡಾಲರ್‌ಗೆ ಏರಿಕೆಯಾಗಿದೆ. ಇದರಿಂದ ಸಣ್ಣ ಉದ್ಯಮಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಅವುಗಳನ್ನು ಸರ್ಕಾರಕ್ಕೆ ಪತ್ರ ಬರೆದು ಕಡಿಮೆ ಮಾಡಿಸಿಕೊಡಿ ಎಂದು ಉದ್ಯಮಿಗಳು ಅಹವಾಲು ತೋಡಿಕೊಂಡರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಏಕಗವಾಕ್ಷಿ ಸಭೆಯಲ್ಲಿ ಈ ಬೇಡಿಕೆ ಇಟ್ಟರು.

ಹಿಂದೆ ಚೆನ್ನೈ ಮೂಲಕ ಹಡಗುಗಳಲ್ಲಿ ರಫ್ತು ಮಾಡಬೇಕಿತ್ತು. ಈಗ ಮಂಗಳೂರು ಮೂಲಕ ರಫ್ತಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆದಾಯವೂ ಬರುತ್ತಿದೆ. ಮಂಗಳೂರಿಗೆ ಉತ್ಪನ್ನ ತುಂಬಿದ ಲಾರಿಗಳು ಮಳೆಗಾಲದಲ್ಲಿ ಹೋಗಲು ಅಡ್ಡಿಯಾಗಿದೆ. ಹುಲಿಕಲ್‌ ಘಾಟಿ ಹತ್ತಿರ ದಾರಿ. ಶಿರಾಡಿ ಘಾಟಿ 100 ಕಿಲೋಮೀಟರ್‌ ಸುತ್ತಿಕೊಂಡು ಹೋಗಬೇಕು. ಅಂಕೋಲಕ್ಕಾಗಿ ಹೋದರೆ 350–400 ಕಿಲೋಮೀಟರ್‌ ಹೆಚ್ಚಾಗುತ್ತದೆ. ಈಗ ಈ ಮೂರೂ ಘಾಟಿ ರಸ್ತೆಗಳಲ್ಲಿಯೂ ಲಾರಿಗಳಿಗೆ ಪ್ರವೇಶವಿಲ್ಲ. ಚೆನ್ನೈಗೇ ಹೋಗಬೇಕಿದೆ ಎಂದು ಉದ್ಯಮಿ ಗಿರೀಶ್‌ ದೂರಿದರು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳ ಉತ್ಪನ್ನಗಳನ್ನು ಅಮೆಜಾನ್ ಪ್ಲಾಟ್‍ಫಾರಂನಲ್ಲಿ ರಫ್ತು ಮಾಡಲು ಇರುವ ಸದಾವಕಾಶವನ್ನು ಜಿಲ್ಲೆಯ ಉದ್ಯಮಿಗಳು ಹಾಗೂ ಕುಶಲಕರ್ಮಿಗಳು ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ಸಿದ್ದ ಉಡುಪುಗಳು, ಸ್ಥಳೀಯ ಆಟಿಕೆಗಳು, ವೈದ್ಯಕೀಯ ಉಪಕರಣಗಳು, ಆಹಾರ ಸಂಸ್ಕರಣ ಉತ್ಪನ್ನಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಉಪಕರಣಗಳು, ಇತರ ವಸ್ತುಗಳನ್ನು ರಫ್ತು ಮಾಡಬಹುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಬ್ಯಾಂಕ್‍ಗಳು ಕೋಲ್ಯಾಟರಲ್ ಠೇವಣಿ ಇಡುವಂತೆ ಒತ್ತಾಯಿಸುತ್ತಾರೆ. ವಿನಾಕಾರಣ ವಿಳಂಬ ಮಾಡುತ್ತಾರೆ ಎಂದು ಉದ್ಯಮಿಗಳು ಆರೋಪಿಸಿದರು. ಯೋಜನೆಯಡಿ ಸಾಲ ಸೌಲಭ್ಯ ಮಂಜೂರು ಮಾಡಲು ಬ್ಯಾಂಕ್‍ಗಳು ಠೇವಣಿ ಇಡುವಂತೆ ಒತ್ತಾಯಿಸುವಂತಿಲ್ಲ. ಈ ಕುರಿತು ನಿರ್ದಿಷ್ಟ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೈಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸರ್ಕಾರ ಕೈಗಾರಿಕಾ ನೀತಿ 2020-25 ಅನ್ನು ರೂಪಿಸಲಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಆಯಾ ತಾಲ್ಲೂಕುಗಳ ಹಿಂದುಳಿದಿರುವಿಕೆಗೆ ಅನುಗುಣವಾಗಿ ವಲಯ-1, 2 ಮತ್ತು 3 ಎಂದು ವಿಭಾಗಿಸಲಾಗಿದೆ. ಅದರನ್ವಯ ಆಯಾ ತಾಲ್ಲೂಕುಗಳ ಕೈಗಾರಿಕಾ ಕ್ಷೇತ್ರಕ್ಕೆ ಅನುದಾನ, ಸಹಾಯಧನ, ಸಬ್ಸಿಡಿ ನೀಡಲಾಗುತ್ತದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ವಲಯ–1 ಎಂದು ಗುರುತಿಸಬೇಕು ಎಂದು ಉದ್ಯಮಿಗಳು ಒತ್ತಾಯಿಸಿದರು.

ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಬಳಿ ಮೆಕ್ಕೆಜೋಳ, ಅಡಿಕೆ, ಶೇಂಗಾಸಿಪ್ಪೆ ಮುಂತಾದ ಕೃಷಿ ತ್ಯಾಜ್ಯ ಬಳಸಿಕೊಂಡು ಕಾರ್ಖಾನೆಗಳಲ್ಲಿನ ಬಾಯ್ಲರ್‌ಗಳಿಗೆ ಬಳಸಲಾಗುವ ನೈಸರ್ಗಿಕ ಉರುವಲು ವಸ್ತು ತಯಾರಿಸುವ ₹ 50 ಲಕ್ಷ ಬಂಡವಾಳದ ಬ್ರಿಕ್ ಬರ್ನ್ ಉದ್ಯಮಕ್ಕೆ ಸಮಿತಿ ಅನುಮೋದನೆ ನೀಡಲಾಯಿತು. ದಾವಣಗೆರೆ ತಾಲ್ಲೂಕು ಕಂದನಕೋವಿ ಗ್ರಾಮ ಬಳಿ ₹ 1.2 ಕೋಟಿ ವೆಚ್ಚದಲ್ಲಿ ಸೀಡ್‍ಲಿಂಗ್ ಟ್ರೇ ತಯಾರಿಸುವ ಪಯೋನೀರ್ ಎಂಟರ್‍ಪ್ರೈಸಸ್ ಉದ್ಯಮಕಕ್ಕೂ ಅನುಮೋದನೆ ನೀಡಲಾಯಿತು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಎಚ್.ಎಸ್. ಜಯಪ್ರಕಾಶ್ ನಾರಾಯಣ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್, ಕೆಐಎಡಿಬಿ ಅಧಿಕಾರಿ ಶ್ರೀಧರ್, ಕೈಗಾರಿಕೋದ್ಯಮಿಗಳು, ಚೇಂಬರ್ ಆಫ್ ಕಾಮರ್ಸ್‍ನ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT