ಗುರುವಾರ , ಫೆಬ್ರವರಿ 25, 2021
19 °C
ಸ್ಲಂ ಜನರ ಸಮಾವೇಶದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಭರವಸೆ

ಉಚಿತ ಸೂರು, ನೀರು ಪೂರೈಕೆ ಸರ್ಕಾರದ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸೂರಿಲ್ಲದವರಿಗೆ ಉಚಿತ ಸೂರು ಮತ್ತು ಸರ್ವರಿಗೂ ನೀರು ಪೂರೈಕೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಸರ್ವರಿಗೂ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಡಲು ಮತ್ತು ನೀರಿನ ಸಮರ್ಪಕ ಪೂರೈಕೆಗೆ ಒತ್ತು ನೀಡುವ ಮೂಲಕ ಅವುಗಳ ಸಂಪೂರ್ಣ ಅನುಷ್ಠಾನಕ್ಕೆ ಶ್ರಮಿಸುವುದಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಭರವಸೆ ನೀಡಿದರು.

ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿಯಿಂದ ಮಾಗಾನಹಳ್ಳಿ ರಸ್ತೆಯಲ್ಲಿರುವ ಎ.ಆರ್.ಮಹಾರಾಜ ಶಾದಿಮಹಲ್‍ನಲ್ಲಿ ಮಂಗಳವಾರ ನಡೆದ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ -2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಲಂ ನಿವಾಸಿಗಳ ಬೇಡಿಕೆ ಕುರಿತು ಮಾತನಾಡಿದ ಅವರು, ‘ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರದ ಜೊತೆಗೆ ಮಾಲೀಕತ್ವದ ಪತ್ರ, 10 ಲೀಟರ್‌ವರೆಗೆ ಉಚಿತವಾಗಿ ನೀರು ಪೂರೈಸುವುದು, ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವ ಸಂಬಂಧ ಸರ್ಕಾರದ ಗಮನಕ್ಕೆ ತಂದು ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

‘ಪಿ.ಬಿ.ರಸ್ತೆಯನ್ನು ಅಭಿವೃದ್ಧಿಪಡಿಸುವ ರೀತಿಯಲ್ಲಿಯೇ ರಿಂಗ್‍ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಬಡವರಿಗೆ ನಿವೇಶನ, ಉಚಿತ ನೀರು ಪೂರೈಕೆ ಮತ್ತು ನಗರವನ್ನು ಸ್ವಚ್ಛವಾಗಿರಿಸಲು ಮೊದಲ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಸರ್ಕಾರ ಈಗಾಗಲೇ ಮನೆಯಿಲ್ಲದವರಿಗೆ ಠೇವಣಿ ಇಟ್ಟು ಮನೆ ಕಟ್ಟಿಕೊಳ್ಳಲು ಯೋಜನೆ ರೂಪಿಸಿದ್ದು, ಠೇವಣಿ ರಹಿತವಾಗಿ ಬಡವರಿಗೆ ಸೂರು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ‘ಇದೊಂದು ಶ್ರಮ ಸಂಸ್ಕೃತಿಯನ್ನು ಗೌರವಿಸುವ ಮತ್ತು ಹಕ್ಕೊತ್ತಾಯದ ಸಮಾವೇಶವಾಗಿದೆ. ಸ್ಲಂ ನಿವಾಸಿಗಳ ಮಾನವ ಸಂಪತ್ತಿನಿಂದಲೇ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಕಾರ್ಮಿಕರ ಸಂಪತ್ತಿನಿಂದ ನಗರಗಳು ಪ್ರಬಲವಾಗುತ್ತಿವೆ’ ಎಂದು ತಿಳಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ‘ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಪೌರ ಸೇವಾ ನೌಕರರು, ಬೀದಿ ವ್ಯಾಪಾರಿಗಳು ಮತ್ತು ಇತರ ಶ್ರಮಿಕ ವರ್ಗದವರು ಹೆಚ್ಚಾಗಿ ಸ್ಲಂಗಳಲ್ಲೇ ವಾಸ ಮಾಡುತ್ತಿದ್ದು, ಅವರ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಸರ್ಕಾರಗಳು ಪ್ರಥಮ ಪ್ರಾಶಸ್ತ್ಯ ನೀಡಲೇಬೇಕು’ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳನ್ನು ಕುರಿತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಂಜಿನಿಯರ್ ಎಸ್.ಎಲ್.ಆನಂದಪ್ಪ, ಕಾರ್ಮಿಕ ನಿರೀಕ್ಷಕರಾದ ಮಮ್ತಾಜ್ ಬೇಗಂ ಮಾಹಿತಿ ನೀಡಿದರು. ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಬಿ.ಎಂ.ಹನುಮಂತಪ್ಪ, ಸ್ಲಂ ಜನಾಂದೋಲನದ ಮಹಿಳಾ ಸಂಚಾಲಕರಾದ ಚಂದ್ರಮ್ಮ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಅಧ್ಯಕ್ಷ ಶಬ್ಬೀರ್ ಸಾಬ್, ಕಾರ್ಯದರ್ಶಿ ಮೊಹ್ಮದ್ ಮೌಸಿನ್, ಮಹಾನಗರ ಪಾಲಿಕೆಯ ಸದಸ್ಯ ಎ.ಬಿ. ರಹೀಮ್ ಸಾಬ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಲ್ಲೇಶ್‌ ಕುಕ್ಕವಾಡ, ದಲಿತ ಸಂಘಟನೆ ಒಕ್ಕೂಟಗಳ ರಾಜ್ಯ ಉಪಾಧ್ಯಕ್ಷ ಸಿ. ಬಸವರಾಜ್, ವಕೀಲರಾದ ಅನೀಫ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.