ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಗೆ ವಲಸೆ ಬಂದವರ ಆರೋಗ್ಯದ ಮೇಲೆ ತೀವ್ರ ನಿಗಾ

ಕೊರೊನಾ ಪರೀಕ್ಷೆ ಹೆಚ್ಚಿಸಲು ನಿರ್ದೇಶನ
Last Updated 10 ಏಪ್ರಿಲ್ 2020, 11:46 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸೋಂಕಿನ ಸಮಸ್ಯೆ,ಜ್ವರ ಕಾಣಿಸಿಕೊಳ್ಳುವ ಎಲ್ಲಾ ರೋಗಿಗಳ ಮಾದರಿಗಳನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೊಳಪಡಿಸಲು ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ನಿರ್ದೇಶನ ಬಂದಿದೆ.

‘ಕೋವಿಡ್‌–19’ ರೋಗ ಇರುವವರನ್ನು ಆರಂಭದಲ್ಲೇ ಪತ್ತೆ ಮಾಡುವ ಮೂಲಕ ಕೊರೊನಾ ಸೋಂಕಿನ ಕೊಂಡಿಯನ್ನು ಆರಂಭದಲ್ಲೇ ತುಂಡರಿಸಲು ಆರೋಗ್ಯ ಇಲಾಖೆಯು ಸಮರೋಪಾದಿಯಲ್ಲಿ ಕೊರೊನಾ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ. ಸೋಂಕಿತರಿಂದ ಮತ್ತೊಬ್ಬರಿಗೆ ಈ ಸಾಂಕ್ರಾಮಿಕ ರೋಗ ಹರಡುವನ್ನು ತಡೆಯಲು ಈ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸುತ್ತಿದ್ದ ವೇಳೆ ಜ್ವರ, ಉಸಿರಾಟದ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಚಿಕಿತ್ಸೆ ಕೊಡಿಸಲು ಮುಂದಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 11 ಸಾವಿರ ಮನೆಗಳ ಸಮೀಕ್ಷೆಗಳನ್ನು ಮಾಡಲಾಗಿದೆ. ಕ್ಷೇತ್ರಕಾರ್ಯ ಮಾಡಿದಾಗ ಕೋವಿಡ್‌ ಮಾರ್ಗಸೂಚಿಯಲ್ಲಿ ಸೂಚಿಸಿದಂತೆ ಕೊರೊನಾ ಸೋಂಕಿನ ಲಕ್ಷಣವಿರುವ 24 ಜನ ಪತ್ತೆ ಮಾಡಲಾಗಿತ್ತು. ಅವರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿಯಲ್ಲಿರುವ ಎಲ್ಲಾ ಮಾನದಂಡಗಳಿಗೆ ಹೊಂದಾಣಿಕೆಯಾಗದಿದ್ದರೂ ರೋಗ ಲಕ್ಷಣವಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಲು ಆದೇಶಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಇದುವರೆಗೆ 72 ಜನರ ಗಂಟಲಿನ ದ್ರಾವಣದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇವುಗಳ ಪೈಕಿ 67 ಜನರಿಗೆ ಕೊರೊನಾ ನೆಗೆಟಿವ್‌ ಎಂದು ಬಂದಿದೆ. ಉಸಿರಾಟದ ಗಂಭೀರ ಸಮಸ್ಯೆ ಇರುವವರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೊರೊನಾ ಪರೀಕ್ಷೆ ನಡೆಸಲು ಶಿವಮೊಗ್ಗದ ವಿ.ಆರ್‌.ಡಿ.ಎಲ್‌. ಪ್ರಯೋಗಾಲಯವನ್ನು ಇದೀಗ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಮಾತ್ರ ಮೀಸಲಿಡಲಾಗಿದೆ. ಇದರಿಂದ ಹೆಚ್ಚಿನ ರೋಗಿಗಳ ಪರೀಕ್ಷೆಯನ್ನು ನಡೆಸಿ, ಬೇಗನೆ ವರದಿಯನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ.

ವಲಸಿಗರ ಮೇಲೆ ನಿಗಾ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ಸುಮಾರು 19,500 ಜನ ಹೊರಗಿನಿಂದಜಿಲ್ಲೆಗೆ ಬಂದಿದ್ದರು. ಯುಗಾದಿ ಹಬ್ಬದ ಹಿಂದಿನ ದಿನವೇ 3,500 ಜನ ವಲಸೆ ಬಂದಿದ್ದರು. ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಪಿಡಿಒ, ಸದಸ್ಯರ ಸಹಕಾರದಿಂದ ಅವರನ್ನೆಲ್ಲ ಗುರುತಿಸಿ ಮೊದಲ ಹಂತದ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಬೆಂಗಳೂರು ಸೇರಿ ಸೋಂಕಿತ ಪ್ರದೇಶಗಳಿಂದ ಜಿಲ್ಲೆಗೆ ಯಾರೆಲ್ಲ ವಲಸಿಗರು ಬಂದಿದ್ದಾರೋ ಅವರೆಲ್ಲರೂ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲೇ ಇರುವಂತೆ ಸೂಚಿಸಲಾಗಿತ್ತು.

‘ಎರಡು–ಮೂರು ದಿನಗಳಿಗೆ ಒಮ್ಮೆ ಆರೋಗ್ಯ ಕಾರ್ಯಕರ್ತೆಯರು ವಲಸೆ ಬಂದವರ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದಾರೆ. ರೋಗ ಲಕ್ಷಣ ಕಂಡು ಬಂದರೆ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ಕೋವಿಡ್‌ ಮಾರ್ಗಸೂಚಿಯ ಪ್ರಕಾರ ಲಕ್ಷಣ ಕಂಡುಬಂದರೆ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ವಿಶೇಷ ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಡುತ್ತಾರೆ. ಲಾಕ್‌ಡೌನ್‌ ಘೋಷಣೆಯಾದ ಒಂದೆರಡು ದಿನಗಳಲ್ಲಿ ಹೊರಗಿನಿಂದ ಜಿಲ್ಲೆಗೆ ಬಂದವರು 14 ದಿನಗಳ ನಿಗಾ ಪೂರೈಸಿದ್ದಾರೆ. ಯಾರಲ್ಲೂ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಲಾಕ್‌ಡೌನ್‌ ಇರುವವರೆಗೂ ಸಮಸ್ಯೆ ಇಲ್ಲ. ಆದರೆ, ಲಾಕ್‌ಡೌನ್‌ ತೆರವಾದ ಬಳಿಕ ಬೇರೆ ಊರಿನಿಂದ ಬಂದವರಿಂದ ಈ ರೋಗ ಜಿಲ್ಲೆಯ ಜನರಿಗೆ ಬಾರದಂತೆ ನೋಡಿಕೊಳ್ಳುವ ಸವಾಲು ಎದುರಾಗಲಿದೆ’ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಸೋಂಕಿತರ ‘ಸೆಕೆಂಡರಿ ಕಾಂಟೆಕ್ಟ್‌’ಗೂ ಪರೀಕ್ಷೆ
‘ಜಿಲ್ಲೆಯಲ್ಲಿನ ಕೊರೊನಾ ಸೋಂಕಿತರ ಮನೆಯೊಂದಿಗೆ ಸಂಪರ್ಕ ಹೊಂದಿದ್ದ (ಸೆಕೆಂಡರಿ ಕಾಂಟೆಕ್ಟ್‌) ಎಲ್ಲಾ ವ್ಯಕ್ತಿಗಳನ್ನೂ ಗುರುತಿಸಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿದ್ದು, ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ತೀವ್ರ ಉಸಿರಾಟದ ತೊಂದರೆ ಕಾಯಿಲೆಯುಳ್ಳವರ (ಎಸ್‌.ಎ.ಆರ್‌.ಐ) ಮಾದರಿಯನ್ನೂ ಪರೀಕ್ಷೆಗೊಳಪಡಿಸುವಂತೆ ಆದೇಶ ಬಂದಿದ್ದು, ಆರೋಗ್ಯ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದೇಶದಿಂದ ಬಂದವರ ಹೋಂ ಕ್ವಾರಂಟೈನ್‌ ಪೂರ್ಣ
ವಿದೇಶದಿಂದ ಜಿಲ್ಲೆಗೆ ಬಂದಿದ್ದ 300ಕ್ಕೂ ಹೆಚ್ಚು ಜನರ 14 ದಿನಗಳ ಹೋಂ ಕ್ವಾರಂಟೈನ್‌ ಅವಧಿ ಪೂರ್ಣಗೊಂಡಿದೆ. ಅವರ ಮೇಲೆ 28 ದಿನಗಳ ನಿಗಾ ವಹಿಸಲಾಗುತ್ತಿದೆ. 14 ದಿನಗಳ ನಂತರ ಕೊರೊನಾ ವೈರಸ್‌ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ವಿದೇಶದಿಂದ ಬಂದವರಿಂದ ಸ್ಥಳೀಯರಿಗೆ ಈ ಸೋಂಕು ಹರಡುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

ವಿದೇಶದಿಂದ ಚಿತ್ರದುರ್ಗ ಹಾಗೂ ದಾವಣಗೆರೆಗೆ ಬಂದಿದ್ದ ಮೂವರು ಕೊರೊನಾ ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ್ದ 18 ಜನರ ಆರೋಗ್ಯದ ಮೇಲೂ ನಿಗಾ ವಹಿಸಲಾಗುತ್ತಿದ್ದು, ಅವರಲ್ಲೂ ಕೊರೊನಾ ರೋಗ ಲಕ್ಷಣ ಕಂಡುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT