ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಮತಿ: ಕಾಯಕಲ್ಪಕ್ಕೆ ಕಾದಿರುವ ಆರುಂಡಿಯ ಶಾಲೆ

1912ರಲ್ಲಿ ಆರಂಭವಾಗಿದ್ದ ಶಾಲೆಗೆ ಮೂಲ ಸೌಕರ್ಯಗಳ ಕೊರತೆ
Last Updated 31 ಜನವರಿ 2023, 2:52 IST
ಅಕ್ಷರ ಗಾತ್ರ

ನ್ಯಾಮತಿ: ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ 110 ವರ್ಷಗಳ ಹಿಂದೆ ಆರಂಭವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಹಲವು ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ.

1912ರಲ್ಲಿ ಆರಂಭವಾಗಿದ್ದ ಈ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 4 ದಶಕಗಳ ಹಿಂದೆ ಗ್ರಾಮದ ಮುಖಂಡರಾದ ಪುಟ್ಟಮಂಜಪ್ಪ ಮತ್ತಿತರರು ಗ್ರಾಮದ ಹೊರಭಾಗದಲ್ಲಿ ಕಟ್ಟಡ ನಿರ್ಮಿಸಿ ಸ್ಥಳಾಂತರ ಮಾಡಿಸಿ‌ದ್ದರು.

ಪ್ರಸ್ತುತ 1ರಿಂದ 7ನೇ ತರಗತಿವರೆಗೆ 146 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಿಕ್ಷಕರ 7 ಹುದ್ದೆಗಳು ಮಂಜೂರಾಗಿದ್ದು, ನಾಲ್ವರು ಕಾಯಂ, ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎ. ಹಾಲಪ್ಪ ಸೇರಿ ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಶಿಕ್ಷಕರು, ಪೊಲೀಸ್‌, ಎಂಜಿನಿಯರ್ ಆಗಿದ್ದಾರೆ.

ಶಾಲೆಯಲ್ಲಿ 3 ಕೊಠಡಿಗಳು ಮಾತ್ರ ಆರ್‌.ಸಿ.ಸಿ ಹೊಂದಿದ್ದು, ಉಳಿದವು ಹೆಂಚು ಹೊದಿಸಿರುವ ಮಣ್ಣಿನ ಹಳೆಯ ಕೊಠಡಿಗಳಾಗಿವೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ಮತ್ತು ಶೌಚಾಲಯದ ಅವಶ್ಯಕತೆ ಇದೆ. ಶಾಲಾ ಕಟ್ಟಡ ಮತ್ತು ಆಟದ ಮೈದಾನ ತಗ್ಗು ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಗೆ ಬರಲು, ಹೋಗಲು ತೀವ್ರ ತೊಂದರೆಯಾಗುತ್ತಿದೆ. ಶಾಲೆಯ ಆವರಣದೊಳಗೆ ನೀರು ಹರಿಯದಂತೆ ತಡೆಗೋಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜಪ್ಪ ಆಚಾರ್, ಶಿಕ್ಷಕರಾದ ಕೆ.ಪಿ. ಪರಮೇಶ್ವರಪ್ಪ, ಮಂಜುನಾಥ ಪಾಟೀಲ, ಸಿ.ಎಸ್. ರೇಣುಕಾ,
ಡಿ.ಬಿ. ವಿಶಾಲಾಕ್ಷಿ ಮನವಿ ಮಾಡಿದ್ದಾರೆ.

‘ನಾನು 1ರಿಂದ 7ನೇ ತರಗತಿಯವರೆಗೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಮುಖ್ಯೋಪಾಧ್ಯಾಯನಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವೆ. ನನಗೀಗ 83 ವರ್ಷ. ಸ್ಮಾರ್ಟ್ ತರಗತಿ, ಎಲ್‌ಕೆಜಿ ಆರಂಭಿಸಿ, ಎರಡು ವರ್ಷಗಳ ಕಾಲ ವೈಯಕ್ತಿಕವಾಗಿ ಶಿಕ್ಷಕರಿಗೆ ವೇತನ ನೀಡಿದ್ದೇನೆ’ ಎಂದು ಹಿರಿಯರಾದ ಎ. ಹಾಲಪ್ಪ ಮಾಸ್ತರ್ ಮಾಹಿತಿ ನೀಡಿದರು.

‘ಶಾಲೆಯ ಪಕ್ಕದಲ್ಲಿ ಕೆಲವರು ತಿಪ್ಪೆ ಗುಂಡಿಗಳನ್ನು ಹಾಕುತ್ತಿದ್ದರು. ಅವುಗಳನ್ನು ತೆರವುಗೊಳಿಸಲಾಗಿದೆ. ಶಾಲೆಯ ಶತಮಾನೋತ್ಸವ ಆಚರಣೆ ಮಾಡುವ ಉದ್ದೇಶ ಇದೆ’ ಎಂದು ಹಳೆಯ ವಿದ್ಯಾರ್ಥಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಬಿ. ಪ್ರಕಾಶ ತಿಳಿಸಿದರು.

‘ತಾಲ್ಲೂಕಿನಲ್ಲಿ ಶತಮಾನ ಕಂಡಿರುವ ಶಾಲೆಗಳಿಗೆ ಸರ್ಕಾರ ಅನುದಾನ ನೀಡುವ ಮೂಲಕ ಶಾಲೆಗಳನ್ನು ಅಭಿವೃದ್ಧಿಪಡಿಸಲು ಗಮನಹರಿಸಬೇಕು’ ಎಂದು ಹಳೆಯ ವಿದ್ಯಾರ್ಥಿ, ನಿವೃತ್ತ ಶಿಕ್ಷಕ ಡಿ. ದೇವೇಂದ್ರಪ್ಪ, ಯುವಕರಾದ ಎ. ಈಶಾ ಆಚಾರ್, ಎ. ಶಶಿಧರ, ಜಿ.ಪಿ. ಮಲ್ಲಿಕಾರ್ಜುನ, ಗ್ರಂಥಪಾಲಕ ರಾಜಪ್ಪ ಅವರು ಒತ್ತಾಯಿಸಿದ್ದಾರೆ.

ಈ ಶಾಲೆಗಳ ಅಭಿವೃದ್ಧಿಯೂ ಅಗತ್ಯ

ನ್ಯಾಮತಿ ತಾಲ್ಲೂಕಿನಲ್ಲಿ ಆರುಂಡಿ ಗ್ರಾಮವೂ ಸೇರಿ ಶತಮಾನ ಕಂಿರುವ ಒಟ್ಟು 6 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಕಾಲಮಾನಕ್ಕೆ ತಕ್ಕಂತೆ ಅಭಿವೃದ್ಧಿಪಡಿಸುವ ಅಗತ್ಯವಿದೆ.

ತಾಲ್ಲೂಕಿನ ಕೆಂಚಿಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ 1882ರಲ್ಲಿ ಆರಂಭಗೊಂಡಿದ್ದು, ಶಾಲೆಗೆ ನಲಿ–ಕಲಿ ತರಗತಿಗಳಿಗೆ ಪೀಠೋಪಕರಣ, ವಿದ್ಯುಚ್ಛಕ್ತಿ, ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಬೆಳಗುತ್ತಿ ಸರ್ಕಾರಿ ಪ್ರಾಥಮಿಕ ಶಾಲೆ 1908ರಲ್ಲಿ ಮತ್ತು ಜೀನಹಳ್ಳಿ ಗ್ರಾಮದ ಸರ್ಕಾರಿ ಶಾಲೆ 1909ರಲ್ಲಿ ಆರಂಭಗೊಂಡಿದ್ದು, ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳು ಒಳಗೊಂಡಂತೆ ಮೂಲಸೌಲಭ್ಯಗಳ ಅವಶ್ಯಕತೆ ಇದೆ.

ದೊಡ್ಡೆತ್ತಿನಹಳ್ಳಿಯಲ್ಲಿ 1910ರಲ್ಲಿ ಆರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2022ರಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಅದ್ಧೂರಿಯಾಗಿ ಶತಮಾನೋತ್ಸವ ಆಚರಿಸಿಕೊಂಡಿತು. ಉತ್ತಮ ಶಿಕ್ಷಕರಿದ್ದು, ಹಳೆ ವಿದ್ಯಾರ್ಥಿಗಳ ಕೊಡುಗೆಯಿಂದ ಶಾಲೆಗೆ ಪೀಠೋಪಕರಣ, ಪಾಠೋಪಕರಣ ನೀಡಲಾಗಿದೆ. ಮಕ್ಕಳ ದಾಖಲಾತಿ ಹೆಚ್ಚಬೇಕಾಗಿದೆ. ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1914ರಲ್ಲಿ ಆರಂಭಗೊಂಡು, 2014ರಲ್ಲಿ ಶತಮಾನೋತ್ಸವ ಆಚರಣೆ ಕಂಡಿದೆ. ಶಾಲೆಗೆ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇದೆ. ಶಾಲೆಯ ಮುಂಭಾಗದಲ್ಲಿರುವ ಚರಂಡಿ ಹಾಗೂ ಪಕ್ಕದಲ್ಲಿ ಹರಿಯುವ ರಾಜಕಾಲುವೆ ದುರಸ್ತಿ ಮಾಡಿಸಬೇಕಿದೆ.

ಆಟದ ಕ್ರೀಡಾಂಗಣವನ್ನು ಎತ್ತರ ಮಾಡಬೇಕು. ಶೌಚಾಲಯ ಹಾಗೂ ಹೆಚ್ಚುವರಿ ಕೊಠಡಿಗಳು ಬೇಕಿವೆ. ಕೊರತೆ ಇರುವ ಶಿಕ್ಷಕರ ನೇಮಕಕ್ಕೆ ಹಿರಿಯ ಅಧಿಕಾರಿಗಳು ಕ್ರಮ ವಹಿಸಬೇಕು.
ಎಚ್.ಜಿ. ಪವನ ಮತ್ತು ಕೆ.ಆರ್. ಅನು, 7ನೇ ತರಗತಿ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT