ಗುರುವಾರ , ಫೆಬ್ರವರಿ 27, 2020
19 °C

ಪುರೋಹಿತಶಾಹಿಗೆ ಹೊಡೆತ ನೀಡಿದ್ದ ಕುವೆಂಪು: ಡಾ. ದಾದಾಪೀರ್‌ ನವಿಲೇಹಾಳ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪುರೋಹಿತಶಾಹಿ ವ್ಯವಸ್ಥೆಗೆ ಕುವೆಂಪು ನೀಡದ ಹೊಡೆತವನ್ನು ಮತ್ಯಾವ ಕವಿ, ಸಾಹಿತಿಯೂ ನೀಡಿಲ್ಲ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ದಾದಾಪೀರ್‌ ನವಿಲೇಹಾಳ್‌ ಹೇಳಿದರು.

ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನನ್ನ ಅರಿವಿನ ಕುವೆಂಪು’ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ಎರಡು ಕಾದಂಬರಿಗಳು ಜಗತ್ತಿನ ಶ್ರೇಷ್ಠ ಕಾದಂಬರಿಗಳ ಸಾಲಲ್ಲಿ ನಿಲ್ಲುವಂಥವುಗಳಾಗಿವೆ. ಅವರು ತಮ್ಮ ಕೃತಿಗಳ ಮೂಲಕ ಮಾತ್ರ ಒಳಗೊಂಡಿದ್ದಲ್ಲ, ಸಾಂಸ್ಕೃತಿಕವಾಗಿಯೂ ಒಳಗೊಂಡವರು. ಭಾರತೀಯ ಪರಂಪರೆಗೆ ಹೊಸ ಆಯಾಮ, ಹೊಸ ದೃಷ್ಟಿಕೋನ ನೀಡಿದವರು ಅವರು ಎಂದು ವಿವರಿಸಿದರು.

ಆಳುವವರಿಗೆ ಎಂದೂ ಜೈ ಅಂದವರಲ್ಲ. ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯ ಬಂದ ಬಳಿಕವೂ ಅವರು ಕಾಯಂ ಪ್ರತಿಪಕ್ಷದಂತೆ ಇದ್ದವರು. ‘ಬೆರಳಿಗೆ ಕೊರಳ್‌’ ಮೂಲಕ ನಾವು ನೀಡುತ್ತಿರುವ ಶಿಕ್ಷಣ ಎಂಥದ್ದು ಎಂಬುದನ್ನು ದ್ರೋಣ, ಅರ್ಜುನ, ಏಕಲವ್ಯರ ಮೂಲಕ ತೋರಿಸಿದ್ದರು. ‘ಸ್ಮಶಾನ ಕುರುಕ್ಷೇತ್ರ’ದ ಮೂಲಕ ಯುದ್ಧದ ಪರಿಣಾಮವನ್ನು ವಿವರಿಸಿದ್ದಾರೆ ಎಂದರು.

ಮಹಾಕಾವ್ಯ ಇನ್ನು ಹುಟ್ಟಲು ಸಾಧ್ಯವೇ ಇಲ್ಲ ಎಂಬ ಕಾಲದಲ್ಲಿ ಅವರು ಮಹಾಕಾವ್ಯ ಬರೆದರು. ವಿಶ್ವಮಾನವ ತತ್ವ ಅವರ ಎಲ್ಲ ಕೃತಿಗಳಲ್ಲಿ ಇವೆ. ಎಲ್ಲ ಸೋಗಲಾಡಿತನಗಳನ್ನು ಬಯಲುಗೊಳಿಸಿದರು. ಯಾವ ಸ್ವಾಮಿ, ಪಾದ್ರಿ, ಮುಲ್ಲಾಗಳ ಕಾಲಿಗೂ ಬೀಳದ ಕುವೆಂಪು ಒಂದು ಯುಗದ ಮನೋಧರ್ಮವನ್ನು ಸೃಷ್ಟಿಸಿದ, ಚಿಂತನೆಗೆ ಹಚ್ಚಿದ ಚೇತನ ಅವರು. ಮೊಬೈಲ್‌ ಹಿಂದೆ ಓಡಿ ಅನಾಥವಾಗುತ್ತಿರುವ ಇಂದಿನ ಯುವಪೀಳಿಗೆಯನ್ನು ಮತ್ತೆ ಮಾನವೀಯತೆಯೆಡೆಗೆ ಕರೆತರುವ ಶಕ್ತಿ ಅವರ ಕೃತಿಗಳಲ್ಲಿದೆ ಎಂದು ವಿಶ್ಲೇಷಿಸಿದರು.

ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯ 800 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲು ಕುವೆಂಪು ಕಾರಣ. ಅವರು ವಿಶ್ವವಿದ್ಯಾಲಯದ ಸಮಸ್ಯೆಯನ್ನು ಹೇಳಿಕೊಳ್ಳಲು ಆಗಿನ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರಿಗೆ ಪತ್ರಬರೆದು ಅವಕಾಶ ಕೇಳಿದಾಗ ನಿಜಲಿಂಗಪ್ಪ ಅವರೇ ಶಿಕ್ಷಣ ಮಂತ್ರಿಯನ್ನು ಕುವೆಂಪು ಬಳಿ ಕಳುಹಿಸಿದ್ದರು. ಬಳಿಕ ಆ ಜಾಗ ಮಂಜೂರಾಗಿತ್ತು. ಅಂಥ ಎತ್ತರ ಕುವೆಂಪು ಅವರದ್ದಾಗಿತ್ತು. ಅಂಥ ಉದಾತ್ತ ನಿಲು ಆಗಿನ ಮುಖ್ಯಮಂತ್ರಿಯವರದ್ದಾಗಿತ್ತು. ಈಗಿನ ಸಾಹಿತಿ ಮತ್ತು ರಾಜಕಾರಣಿಗಳಲ್ಲಿ ಈ ಎರಡನ್ನೂ ಈಗ ಕಾಣಲು ಸಾಧ್ಯವಿಲ್ಲ ಎಂದು ವಿಮರ್ಶಿಸಿದರು.

ಸಂವಾದದ ನೇತೃತ್ವ ವಹಿಸಿದ್ದ ಅರುಣ ಕುಮಾರಿ ಬಿರಾದರ್‌, ‘ಸಾಮಾಜಿಕ ತಾರತಮ್ಯಗಳ ಬಗ್ಗೆ ಬರೆದು ಆಗಿನ ಸಾಂಸ್ಕೃತಿಕ ಜಗತ್ತಿಗೆ ಉತ್ತರವನ್ನು ನೀಡಿದ ಶೂದ್ರ ಕವಿ ಅವರು. ಸಂಸ್ಕೃತವು ಶೂದ್ರರ ನಾಲಗೆಯಲ್ಲಿ ಹೊರಲಾಡದು ಎಂದು ಅಪಮಾನಿಸಿದಾಗ ಹಠಕ್ಕೆ ಬಿದ್ದು ಸಂಸ್ಕೃತ ಕಲಿತವರು ಕುವೆಂಪು. ಹಾಗಾಗಿ ಅವರ ಕೃತಿಗಳು ಬಹುತೇಕ ಸಂಸ್ಕೃತ ಭೂವಿಷ್ಠವಾಗಿವೆ’ ಎಂದು ಹೇಳಿದರು.

‘ಮತಗಳು ಎಂದರೆ ಒಬ್ಬ ಬೆಪ್ಪ ಮತ್ತು ಒಬ್ಬ ಠಕ್ಕ ಸೇರಿದಾಗ ಹುಟ್ಟಿಕೊಂಡವುಗಳು ಎಂದು ಕುವೆಂಪು ಹೇಳಿದ್ದಲ್ಲದೇ, ಮತಗಳ ಬದಲು ಮತಿ ಬೆಳೆಸಿಕೊಳ್ಳಿ, ನಿರಂಕುಶಮತಿಗಳಾಗಿ ಎಂಬುದು ಅವರ ಆಶಯ. ಅದನ್ನು ಯುವಜನರು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ಕಾವ್ಯಶ್ರೀ, ಎಚ್‌.ಕೆ. ಫಾಲಾಕ್ಷಪ್ಪ ಗೋ‍ಪನಾಳ್‌, ಬಿ.ಎಂ. ಮುರಿಗಯ್ಯ ಕುರ್ಕಿ, ಮಾಗನೂರು ರಾಜಶೇಖರ ಗೌಡ್ರು, ಷಡಕ್ಷರಪ್ಪ ಬೇತೂರುಮ ಎಸ್‌.ಎಂ. ಮಲ್ಲಮ್ಮ, ರಾಘವೇಂದ್ರ ನಾಯರಿ, ಸಾಲಿಗ್ರಾಮ ಗಣೇಶ್‌ ಶೆಣೈ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಮಾಳವಿಕಾ, ಕಿರಣ, ಪ್ರಕೃತಿ, ನಾಗವೇಣಿ, ಸಂಗೀತಾ, ಕವನಾ, ಭೂಮಿಕಾ, ಛಾಯಾ, ಪ್ರೇಕ್ಷಿತಾ, ಕಾವ್ಯಾ ಸಂವಾದದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು