ಮಂಗಳವಾರ, ಏಪ್ರಿಲ್ 20, 2021
27 °C

ಬೃಹತ್ ಕೈಗಾರಿಕೆ ಆರಂಭಿಸಲು ಹೆಚ್ಚಿನ ಪ್ರೋತ್ಸಾಹ: ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹೊಸ ಕೈಗಾರಿಕಾ ನೀತಿಯನ್ವಯ ದಾವಣಗೆರೆಯಂತಹ ನಗರಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಉದ್ಯಮಿಗಳನ್ನು ತಂದು ಕೂರಿಸುವ ಕೆಲಸ ನಮ್ಮದಲ್ಲ. ಆದರೆ ಉದ್ಯಮ ಆರಂಭಿಸಲು ಬೇಕಾದ ಎಲ್ಲ ಪ್ರೋತ್ಸಾಹ, ಸೌಲಭ್ಯಗಳನ್ನು ನಾವು ಒದಗಿಸುತ್ತೇವೆ. ವಿದ್ಯುತ್‌, ನೀರು, ರಸ್ತೆ, ಚರಂಡಿ ಮುಂತಾದ ಮೂಲ ಅವಶ್ಯಕಗಳನ್ನು ಒದಗಿಸಲಾಗುವುದು. ಅಗತ್ಯ ಬದ್ದರೆ 500ರಿಂದ 1000 ಎಕರೆವರೆಗೆ ಭೂಮಿ ಸ್ವಾಧೀನ ಮಾಡಿ ಕೊಡಲಾಗುವುದು’ ಎಂದು ತಿಳಿಸಿದರು.

‘ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದವು. ಹಾಗಾಗಿ ಅಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಬಂದಿವೆ. ಅದನ್ನು 2 ಮತ್ತು 3ನೇ ಸ್ಥರದ ನಗರಗಳಿಗೂ ವಿಸ್ತರಿಸಬೇಕು ಎಂದು ಕೈಗಾರಿಕಾ ನೀತಿ 2020–2025 ಎಂದು ತಂದಿದ್ದೇವೆ. ಐದು ವರ್ಷಗಳ ಅವಧಿಯಲ್ಲಿ ಎಲ್ಲ ನಗರಗಳಿಗೆ ಕೈಗಾರಿಕೆಗಳು ವಿಸ್ತರಣೆಗೊಳ್ಳಬೇಕು ಎಂಬುದು ನಮ್ಮ ಯೋಜನೆ’ ಎಂದು ವಿವರಿಸಿದರು.

ಪ್ರತಿ ಜಿಲ್ಲೆಗೆ ಭೇಟಿ ನೀಡುವುದರಿಂದ ಅಲ್ಲಿನ ಸ್ಥಳೀಯ ಸಮಸ್ಯೆಗಳು ಅರಿವಾಗುತ್ತಿವೆ. ಹಲವಾರು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸರಿಪಡಿಸಲು ಸಾಧ್ಯವಾಗಿದೆ. ಹಿಂದುಳಿದ ಪ್ರದೇಶಗಳು ಕೂಡ ಅಭಿವೃದ್ಧಿಯಾಗಿ ಜನರಿಗೆ ಉದ್ಯೋಗವಕಾಶಗಳು ಹೆಚ್ಚಳವಾಗಬೇಕು ಎಂದರು.

ಬೆಂಗಳೂರು–ಮುಂಬಯಿ ಇಂಡಸ್ಟ್ರಿಯಲ್‌ ಕಾರಿಡಾರ್‌ ಎಂದು ಈಗಾಗಲೇ ಗುರುತಿಸಲಾಗಿದೆ. ಜತೆಗೆ ಸ್ಪೆಷಲ್‌ ಇಂಡಸ್ಟ್ರೀ ರೀಜನ್‌ (ಎಸ್‌ಐಆರ್‌) ಎಂಬ ಯೋಜನೆ ತಯಾರಿಸುತ್ತಿದ್ದೇವೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗಗಳು ಈ ಎಸ್‌ಐಆರ್‌ ಅಡಿಯಲ್ಲಿ ಬರಲಿವೆ ಎಂದು ತಿಳಿಸಿದರು.

20 ವರ್ಷಗಳಿಂದ ಸರಿಪಡಿಸಲಾಗದ ಸಮಸ್ಯೆಗಳನ್ನು ಈಗ ಒಂದೊಂದಾಗಿ ಸರಿಪಡಿಸುತ್ತಿದ್ದೇವೆ. ಕರೂರು ಸಮಸ್ಯೆ ಸಹಿತ ಎಲ್ಲವುಗಳನ್ನು ಮುಂದೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಉದ್ಯಮ ಆರಂಭಿಸಲೆಂದು ಭೂಮಿ ಪಡೆದು ಅದರಲ್ಲಿ ಯಾವುದೇ ಕೆಲಸ ಮಾಡದೇ ಇದ್ದವುಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮಾಡಲಾಗುವುದು. ಉದ್ಯಮ ಆರಂಭಿಸದೇ ಹಾಗೇ ಇಟ್ಟಿದ್ದರೆ ವಾಪಸ್‌ ಪಡೆಯಲಾಗುವುದು ಎಂದು ರಿಯಲ್‌ ಎಸ್ಟೇಟ್‌ ದಂಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್‌ ಮನೋಹರ್‌ ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು