ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಚನ ಸಂಗ್ರಹಕ್ಕೆ ಹಳಕಟ್ಟಿ ತ್ಯಾಗ ಅವಿಸ್ಮರಣೀಯ: ದಾವಣಗೆರೆ DC ಎಂ.ವಿ.ವೆಂಕಟೇಶ್‌

ಫ.ಗು.ಹಳಕಟ್ಟಿ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ ಅಭಿಮತ
Published 2 ಜುಲೈ 2024, 14:06 IST
Last Updated 2 ಜುಲೈ 2024, 14:06 IST
ಅಕ್ಷರ ಗಾತ್ರ

ದಾವಣಗೆರೆ: ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿದವರು ಫ.ಗು.ಹಳಕಟ್ಟಿ. ಈ ಪರಿಶ್ರಮದ ಫಲವಾಗಿ ಅಮೂಲ್ಯ ವಚನ ಭಂಡಾರ ಎಲ್ಲರಿಗೂ ತಲುಪಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದ ವಚನ ಸಾಹಿತ್ಯ ಸುಲಭವಾಗಿ ಸಿಗಲು ಹಳಕಟ್ಟಿ ಕಾರಣ. ಅಮೂಲ್ಯ ತಾಳೆಗರಿಗಳನ್ನು ಸಂಗ್ರಹಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ರಾಜ್ಯದ ಮೂಲೆಗಳನ್ನು ಸುತ್ತಿ ವಚನಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ನೀಡಿದ್ದಾರೆ. ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಅವರ ತ್ಯಾಗ ಅವಿಸ್ಮರಣೀಯ’ ಎಂದು ಕೊಂಡಾಡಿದರು.

‘ಶರಣರು ತಮ್ಮ ಜೀವನದ ಅನುಭವಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ವಚನ ರಚಿಸಿದ್ದಾರೆ. ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂಬುದನ್ನು ಹಳಕಟ್ಟಿಯವರು ಅರಿತಿದ್ದರು. ವಚನಗಳು ಮಾನವೀಯ ಮೌಲ್ಯ, ಜೀವನ ಸಂದೇಶ, ವಿಶ್ವಶಾಂತಿ, ವಿಶ್ವಪ್ರೇಮ ಮೂಡಿಸುತ್ತವೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ, ‘ಹಳಕಟ್ಟಿ ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಯಾವುದಕ್ಕೂ ಧೃತಿಗೆಡದ ಅವರು ತಾಳೆಗರಿ ಹಸ್ತಪ್ರತಿಗಳಲ್ಲಿದ್ದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಅವುಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು’ ಎಂದರು.

‘ಎಲ್ಲೆಡೆ ಸುತ್ತಿ ತಾಳೆಗರಿಯ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. 1923 ರಲ್ಲಿ ಬೆಳಗಾವಿಯ ಮಹಾವೀರ ಮುದ್ರಣಾಲಯದಲ್ಲಿ ವಚನ ಸಾಹಿತ್ಯ ಸಂಪುಟ- ಪ್ರಕಟಿಸಿದರು. 1925 ರಲ್ಲಿ ಹಿತ ಸಾಹಿತ್ಯ ಮುದ್ರಣಾಲಯ ಸ್ಥಾಪಿಸಿ ಸುಮಾರು 175 ಕೃತಿ ಹಾಗೂ ಹರಿಹರನ 42 ರಗಳೆಗಳನ್ನು ಮುದ್ರಣ ಮಾಡಿದರು’ ಎಂದು ಮಾಹಿತಿ ನೀಡಿದರು

ವಚನ ಸಾಧಕರಾದ ಶಿವಾನಂದ ಗುರೂಜಿ, ಚಿಕ್ಕೋಳ್ ಈಶ್ವರಪ್ಪ, ಎಂ.ಕೆ.ಬಕ್ಕಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT