ಬುಧವಾರ, ಸೆಪ್ಟೆಂಬರ್ 29, 2021
20 °C
ಸರ್ಕಾರಿ ಶಾಲೆಯ ಒಂದನೇ ತರಗತಿಗೆ 102 ವಿದ್ಯಾರ್ಥಿಗಳು ದಾಖಲು

ಹರಪನಹಳ್ಳಿ: ಮೇಗಳಪೇಟೆ ಸರ್ಕಾರಿ ಶಾಲೆಯ 1ನೇ ತರಗತಿಗೆ ಸೇರಿದ 102 ಮಕ್ಕಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ನಗರ ಪ್ರದೇಶದಲ್ಲಿ ಖಾಸಗಿ ಶಾಲೆಗಳ ಪ್ರಭಾವದ ನಡುವೆ ಸರ್ಕಾರಿ ಶಾಲೆಗಳು ಉಳಿಯುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಆದರೆ, ಶತಮಾನದ ಹೊಸ್ತಿಲಲ್ಲಿರುವ ಇಲ್ಲಿನ ಸರ್ಕಾರಿ ಶಾಲೆಯ ಒಂದನೇ ತರಗತಿಗೆ 102 ವಿದ್ಯಾರ್ಥಿಗಳನ್ನು ದಾಖಲಿಸುವ ಮೂಲಕ ವಿಜಯನಗರ ಜಿಲ್ಲೆಗೇ ಮಾದರಿಯಾಗಿದೆ.

ಹರಪನಹಳ್ಳಿ ಪಟ್ಟಣದ ಮೇಗಳಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ಬರೋಬ್ಬರಿ 102 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ದಾಖಲಾತಿ ಹೆಚ್ಚಳದ ಸಂಭ್ರಮಾಚರಣೆಯನ್ನು ಸೆ.1ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 1ರಿಂದ 8ನೇ ತರಗತಿವರೆಗಿನ ಶಾಲೆಯಲ್ಲಿ ಒಟ್ಟು 630 ವಿದ್ಯಾರ್ಥಿಗಳಿದ್ದಾರೆ. ವಿವಿಧ ಶಾಲೆಗಳಿಂದ 22 ವಿದ್ಯಾರ್ಥಿಗಳು ಬೇರೆ ಬೇರೆ ತರಗತಿಗೆ ವರ್ಗಾವಣೆ ಪಡೆದು ಬಂದಿದ್ದಾರೆ.

1922ರಲ್ಲಿ ಆರಂಭವಾಗಿರುವ ಶಾಲೆಗೆ 2022ಕ್ಕೆ ಶತಮಾನದ ಸಂಭ್ರಮ. ಈಗ ಶಾಲೆಯಲ್ಲಿ 14 ಜನ ಶಿಕ್ಷಕರಿದ್ದು, 6 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಒಂದನೇ ತರಗತಿಗೆ ಇನ್ನೂ 15 ವಿದ್ಯಾರ್ಥಿಗಳು ಬರುವ ನಿರೀಕ್ಷೆಯಿದೆ ಎಂದು ಮುಖ್ಯಶಿಕ್ಷಕ ಎಚ್. ಸಲೀಂ ತಿಳಿಸುತ್ತಾರೆ.

ಶಾಲಾ ಆರಂಭದ ಪೂರ್ವದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಾಲೆಯ ಶತಮಾನೋತ್ಸವ ಆಚರಣೆ ಸಮಿತಿ ಮತ್ತು ಮುಖ್ಯೋಪಾಧ್ಯಾಯರು, ಶಿಕ್ಷಕರ ನೇತೃತ್ವದ ತಂಡ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡು, ಪೋಷಕರಲ್ಲಿ ಸರ್ಕಾರಿ ಶಾಲೆಗಳ ಸೌಲಭ್ಯ, ಗುಣಮಟ್ಟದ ಶಿಕ್ಷಣದ ಭರವಸೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಇದರ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಸೇರುತ್ತಿದ್ದಾರೆ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಂಜಿನಪ್ಪ ತಿಳಿಸಿದರು.

2019-20ನೇ ಸಾಲಿನಲ್ಲಿ ಒಟ್ಟು 530 ವಿದ್ಯಾರ್ಥಿಗಳಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ 635ಕ್ಕೆ ಏರಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು