ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ಪರಿಶಿಷ್ಟ ನೌಕರರಿಗೆ ಗೌರವ ಧನ ನೀಡಲು ಕಿರುಕುಳ

Published 28 ಫೆಬ್ರುವರಿ 2024, 14:26 IST
Last Updated 28 ಫೆಬ್ರುವರಿ 2024, 14:26 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರಿಗೆ 5 ತಿಂಗಳಿನಿಂದ ಗೌರವ ಧನ ನೀಡದೇ ತೊಂದರೆ ಕೊಡುತ್ತಿದ್ದಾರೆ ಎಂದು ಮುಖಂಡ ನೀಲಗಿರಿ ಆರೋಪಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅವರು ಆಗ್ರಹಿಸಿದರು.

‘ಗುತ್ತಿಗೆ ಪಡೆದಿರುವ ಕಂಪನಿಗಳಿಂದ ನೇಮಕಗೊಂಡಿರುವ ಕೆಲವರು ಹಾಜರಾತಿ ತೆಗೆದುಕೊಳ್ಳುತ್ತಿದ್ದು, ಕೆಲಸಕ್ಕೆ ಬರುವುದು 10 ನಿಮಿಷ ತಡವಾದರೂ ಮನೆಗೆ ಕಳುಹಿಸುತ್ತಾರೆ. ಕೆಲವರನ್ನು ಕೆಲಸದಿಂದ ತೆಗೆದುಹಾಕಿ ₹50 ಸಾವಿರ ಲಂಚ ಪಡೆದು ಬೇರೆಯವರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.  

‘ನಮಗೆ 3ರಿಂದ 6 ತಿಂಗಳಿಗೊಮ್ಮೆ ಗೌರವ ಧನ ನೀಡುತ್ತಿದ್ದು, ಜೀವನ ನಡೆಸುವುದಾದರೂ ಹೇಗೆ ದಯವಿಟ್ಟು ನಮಗೆ ನ್ಯಾಯ ದೊರೆಕಿಸಿಕೊಡಬೇಕು’ ಎಂದು ಹೊರಗುತ್ತಿಗೆ ನೌಕರರಾದ ಕಮಲಮ್ಮ ಅಳಲು ತೋಡಿಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಮಾತನಾಡಿ, ‘ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದು, ನಗರದ ಹೊರಗಡೆ ನಿರ್ಮಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ನಗರದ ಮಧ್ಯ ಭಾಗದಲ್ಲಿ ಜಾಗ ಖರೀದಿಸಿ ಭೂಮಿ ಪೂಜೆ ನೆರವೇರಿಸಬೇಕು. ಇಲ್ಲದಿದ್ದರೆ ಜಿಲ್ಲೆಯನ್ನು ಬಂದ್ ಮಾಡಲಾಗುವುದು. ಜಿಲ್ಲಾಧಿಕಾರಿಗಳು ಸಭೆ ಕರೆಯುತ್ತಿಲ್ಲ. ಕೂಡಲೇ ಸಭೆ ನಡೆಸಬೇಕು ಎಂದು ಮುಖಂಡ ದುಗ್ಗಪ್ಪ ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ಮಾತನಾಡಿ, ‘ಈಗಾಗಲೇ ಜಿಲ್ಲಾಧಿಕಾರಿಗಳು ಸಂಘಟನೆಯ ಮುಖಂಡರ ಜೊತೆ ಸಭೆ ಕರೆದು ಚರ್ಚಿಸಿದ್ದಾರೆ. ಕೆಲವೊಂದು ತೊಡಕುಗಳು ಇದ್ದು, ಆ ಸಮಸ್ಯೆಗಳು ಬಗೆಹರಿದ ಬಳಿಕ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಹದಡಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಒಬ್ಬರು ದೂರು ಕೊಡಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡ ನಿಂಗಪ್ಪ ಬನ್ನಿಹಟ್ಟಿ ಒತ್ತಾಯಿಸಿದರು.

‘ಪೊಲೀಸರು ಠಾಣೆಗೆ ಬಂದವರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಲೋಪವಾಗಿದ್ದರೆ ‘ಲೋಕ ಸ್ಪಂದನ’ ಆ್ಯಪ್‌ ಮೂಲಕ ದೂರು ನೀಡಬಹುದು. ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ಉಮಾ ಪ್ರಶಾಂತ್ ಭರವಸೆ ನೀಡಿದರು. 

‘ಅಂಬೇಡ್ಕರ್, ಆದಿಜಾಂಬವ, ತಾಂಡಾ ಅಭಿವೃದ್ಧಿ ನಿಗಮದ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಎರಡನೇ ಮಹಡಿಯಲ್ಲಿರುವ ಕಟ್ಟಡವನ್ನು ಹತ್ತಿಕೊಂಡು ಹೋಗಲು ವೃದ್ಧರಿಗೆ ಕಷ್ಟವಾಗಿದೆ. ಅಲ್ಲದೇ ಕೊಳಚೆ ಪ್ರದೇಶದಲ್ಲಿದ್ದು, ಕಟ್ಟಡಕ್ಕೆ ಹೋಗುವವರು ದುರ್ವಾಸನೆ ಕುಡಿಯಬೇಕಿದೆ. ಕಟ್ಟಡಗಳನ್ನು ಸ್ಥಳಾಂತರಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಜಿಲ್ಲಾ ವಿಶೇಷ ವಿಭಾಗ ಪೊಲೀಸ್‌ ನಿರೀಕ್ಷಕ ಇಮ್ರಾನ್ ಬೇಗ್, ಅಬಕಾರಿ ಇಲಾಖೆಯ ಎಸ್‌ಪಿ ರವಿ ಮರಿಗೌಡರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್, ಪರಿಶಿಷ್ಟ ಪಂಗಡದ ಅಧಿಕಾರಿ ಬೇಬಿ ಸುನಿತಾ,ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಸಿ.ಬಸವರಾಜ್, ಆರೋಗ್ಯ ಇಲಾಖೆಯ ಡಿ.ದೇವರಾಜ್. ಉಮೇಶ್ ಇತರರು ಇದ್ದರು.

Cut-off box - ಸುಳ್ಳು ಜಾತಿ ಪ್ರಮಾಣ ಪತ್ರ: ಕ್ರಮಕ್ಕೆ ಆಗ್ರಹ ಕೆಲವರು ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ಶಾಲೆಗೆ ದಾಖಲು ಮಾಡುತ್ತಿದ್ದು ಇದರಿಂದ ನಿಜವಾದ ಬೇಡ ಜಂಗಮರ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡ ಹೆಗ್ಗೆರೆ ರಂಗಪ್ಪ ಆಗ್ರಹಿಸಿದರು. ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ‘ಜಿಲ್ಲೆಯಲ್ಲಿ 8 ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವುದರಿಂದ ತನಿಖಾಧಿಕಾರಿಗಳು ಏನು ಮಾಡಲು ಸಾಧ್ಯವಿಲ್ಲ. ರಾಜ್ಯಮಟ್ಟದ ಸಮಸ್ಯೆಯಾಗಿರುವುದರಿಂದ ಏನು ಮಾಡಲು ಸಾಧ್ಯವಿಲ್ಲ. ನಿಮ್ಮ ಕಡೆಯಿಂದ ಅಫಿಡವಿಟ್ ಸಲ್ಲಿಸಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT