ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಶಸ್ಸಿಗೆ ಅಧ್ಯಯನದಷ್ಟೇ ತಾಳ್ಮೆಯೂ ಮುಖ್ಯ: ಯುಪಿಎಸ್‌ಸಿ ಸೌಧಕಿ ಸೌಭಾಗ್ಯ ಬಿಳಗಿಮಠ

Published 25 ಜೂನ್ 2024, 14:34 IST
Last Updated 25 ಜೂನ್ 2024, 14:34 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ನಾಗರಿಕ ಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಅಧ್ಯಯನದಷ್ಟೇ ತಾಳ್ಮೆಯೂ ಮುಖ್ಯ. ಕಾಲಮಿತಿ ನಿಗದಿಪಡಿಸಿಕೊಂಡು ನಿರಂತರವಾಗಿ ಪ್ರಯತ್ನಿಸಬೇಕು. ನಿರೀಕ್ಷಿತ ಪ್ರತಿಫಲ ಸಿಗದಿದ್ದರೆ ಬೇರೆ ಕ್ಷೇತ್ರದತ್ತ ಹೊರಳುವುದು ಸೂಕ್ತ ಎಂದು ಯುಪಿಎಸ್‌ಸಿ ಸಾಧಕಿ ಸೌಭಾಗ್ಯ ಬಿಳಗಿಮಠ ಸಲಹೆ ನೀಡಿದರು.

ನಗರದ ವಿನ್ನರ್ಸ್‌ ಕೆರಿಯರ್‌ ಅಕಾಡೆಮಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಧಕಿಯೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.

‘ಎಷ್ಟೇ ವ್ಯಾಸಂಗ ಮಾಡಿದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ವಿಚಲಿತರಾಗದೇ ತಾಳ್ಮೆಯಿಂದ ಪ್ರಯತ್ನಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಹಲವು ವರ್ಷಗಳ ಕಾಲ ನಿರಂತರವಾಗಿ ಸಿದ್ಧತೆ ನಡೆಸಬೇಕು ಎಂಬುದನ್ನು ನಾನು ಒಪ್ಪುವುದಿಲ್ಲ. 30 ವರ್ಷದ ಒಳಗಿನ ವ್ಯಕ್ತಿಯಲ್ಲಿ ಸಾಕಷ್ಟು ಸಾಮರ್ಥ್ಯ ಇರುತ್ತದೆ. ಜೀವನದ ಪ್ರಮುಖ ಕಾಲಘಟ್ಟವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸೀಮಿತಗೊಳಿಸಿಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದರು.

‘ಐಎಎಸ್‌ ಅಧಿಕಾರಿಯಾದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಬಹುದು. ನೀವು ಒಬ್ಬ ವಿಜ್ಞಾನಿಯಾಗುವ ಅವಕಾಶ ಇದರಿಂದ ತಪ್ಪಿಹೋಗಬಹುದು. ಪೋಷಕರ ಒತ್ತಾಯಕ್ಕೆ, ಮತ್ತೊಬ್ಬರ ಸಲಹೆಗೆ ನಾಗರಿಕ ಸೇವೆಗೆ ಬರಬೇಡಿ. ಸೇವಾ ಗುಣ ಹೊಂದಿದವರಿಗೆ ಮಾತ್ರ ಇದು ಸೂಕ್ತ ಆಯ್ಕೆ. ಎಂಬಿಬಿಎಸ್‌, ಐಐಟಿಯಲ್ಲಿ ವ್ಯಾಸಂಗ ಮಾಡಿದವರು ಕೂಡ ಯುಪಿಎಸ್‌ಸಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ನಾಯಕತ್ವ ಗುಣ ಇರುವವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ‘ ಎಂದರು.

‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಚಿಕ್ಕ ತ್ಯಾಗಗಳಿಗೂ ಸಿದ್ಧರಿರಬೇಕು. ಆರು ವರ್ಷಗಳಿಂದ ಕುಟುಂಬದ ಯಾವುದೇ ಮದುವೆ ಸಮಾರಂಭದಲ್ಲಿ ನಾನು ಭಾಗವಹಿಸಿರಲಿಲ್ಲ. ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮೂರು ವರ್ಷ ಯಾವುದೇ ಹಬ್ಬಗಳಿಗೆ ಮನೆಗೆ ಬಂದಿರಲಿಲ್ಲ. ಪ್ರವಾಸದ ನೆಪದಲ್ಲಿ ಕಾಲಾಹರಣ ಮಾಡಲಿಲ್ಲ. ವಿದ್ಯಾರ್ಥಿ ದಿಸೆಯಿಂದಲೇ ಸಿದ್ಧತೆ ಆರಂಭಿಸಿದ್ದೆ. ವಾರದಲ್ಲಿ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಸುಮ್ಮನೆ 15 ಗಂಟೆ ಓದುವುದು ವ್ಯರ್ಥ. ಗಮನವಿಟ್ಟು ಓದಿದರೆ ಮನದಟ್ಟಾಗುತ್ತದೆ’ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಉಪನ್ಯಾಸಕಿ ಅನಿತಾ ಎಚ್‌.ದೊಡ್ಡಗೌಡರ್‌, ವಿನ್ನರ್ಸ್‌ ಸಮೂಹ ಸಂಸ್ಥೆ ಅಧ್ಯಕ್ಷ ಶಿವರಾಜ್‌ ಕಬ್ಬೂರು ಇದ್ದರು.

‘ಪಠ್ಯದಷ್ಟೇ ದಿನಪತ್ರಿಕೆ ಓದಿ’

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪಠ್ಯದಷ್ಟೇ ದಿನಪತ್ರಿಕೆ ಓದು ಮುಖ್ಯವಾಗುತ್ತದೆ. ಪಠ್ಯಕ್ಕೆ ಸೀಮಿತವಾಗಿ ಅಧ್ಯಯನ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಯುಪಿಎಸ್‌ಸಿ ಸಾಧಕಿ ಸೌಭಾಗ್ಯ ಬಿಳಗಿಮಠ ಸಲಹೆ ನೀಡಿದರು. ‘ಪ್ರಚಲಿತ ವಿದ್ಯಮಾನಗಳನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ದಿನಪತ್ರಿಕೆ ಸಹಕಾರಿಯಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಉತ್ಸಾಹ ಇರುವವರು ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆ ಓದನ್ನು ರೂಢಿಸಿಕೊಳ್ಳಬೇಕು. ಸಂಪಾದಕಿಯವನ್ನು ತಪ್ಪದೇ ಓದಬೇಕು’ ಎಂದು ಕವಿಮಾತು ಹೇಳಿದರು.

‘ಪಠ್ಯವೇ ಭಗವದ್ಗೀತೆ’

ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಹಾಗೂ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆ ಎದುರಿಸುವರಿಗೆ ಪಠ್ಯವೇ ಭಗವದ್ಗೀತೆ ಇದ್ದಂತೆ. ಪಠ್ಯವನ್ನು ಅರ್ಥ ಮಾಡಿಕೊಳ್ಳದೇ ಅಧ್ಯಯನದಲ್ಲಿ ತೊಡಗಿದರೆ ಪ್ರಯೋಜನವಾಗದು ಎಂದು ಸೌಭಾಗ್ಯ ಅನುಭವ ಹಂಚಿಕೊಂಡರು. ‘ಅನೇಕರು ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್‌) ಉತ್ತೀರ್ಣರಾಗುವವರೆಗೂ ಮುಖ್ಯ ಪರೀಕ್ಷೆಗೆ (ಮೇನ್ಸ್‌) ಸಿದ್ಧತೆ ನಡೆಸುವುದಿಲ್ಲ. ಪ್ರಿಲಿಮ್ಸ್‌ ಮತ್ತು ಮೇನ್ಸ್‌ ನಡುವೆ ಗರಿಷ್ಠ 90 ದಿನಳ ಅಂತರವಿರುತ್ತದೆ. ಸಮಾಜಶಾಸ್ತ್ರ ಮಾನವಶಾಸ್ತ್ರ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡವರು ಮೂರು ತಿಂಗಳಲ್ಲಿ ಸಿದ್ಧತೆ ನಡೆಸುವುದು ಕಷ್ಟ’ ಎಂದು ಹೇಳಿದರು.

ಪ್ರಾಥಮಿಕ ಶಾಲೆಯಲ್ಲಿ ನಾನೊಬ್ಬ ಸಾಮಾನ್ಯ ವಿದ್ಯಾರ್ಥಿನಿ. ಪ್ರೌಢಶಾಲೆಯಲ್ಲಿದ್ದ ‘ಟಾಪರ್ಸ್‌ ಬ್ಯಾಡ್ಜ್‌’ ಮೇಲಿನ ವ್ಯಾಮೋಹಕ್ಕೆ ಓದತೊಡಗಿದೆ. ಸಾಧನೆ ಮಾಡಲು ಎಲ್ಲರಿಗೂ ಸಾಧ್ಯವಿದೆ.
–ಸೌಭಾಗ್ಯ ಬಿಳಗಿಮಠ, ಯುಪಿಎಸ್‌ಸಿ ಸಾಧಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT