ಮಂಗಳವಾರ, ಫೆಬ್ರವರಿ 25, 2020
19 °C

ಜಿಎಂಐಟಿಯಲ್ಲಿ ತರಬೇತಿ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇದು ಬದಲಾವಣೆಯ ಯುಗ. ಎಂಜಿನಿಯರ್‌ಗಳ ಸಾಮಾಜಿಕ ಬೆಳವಣಿಗೆ ಹಾಗೂ ಜೀವನಶೈಲಿ ಇಂದು ವ್ಯಾಪಕವಾಗಿ ಬದಲಾಗಿದೆ ಎಂದು ವಿಟಿಯು ಸಂಸ್ಥಾಪಕ ಕುಲಪತಿ ಡಾ.ಎಸ್. ರಾಜಶೇಖರಯ್ಯ ಹೇಳಿದರು.

ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ವಿವಿಧ ತರಬೇತಿ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮಹಾವಿದ್ಯಾಲಯ ಮೂರು ವಿವಿಧ ಕೌಶಲ ತರಬೇತಿ ಕೇಂದ್ರಗಳನ್ನು ಆರಂಭಿಸಿರುವುದು ಶ್ಲಾಘನೀಯ. ಕಾಲೇಜು ಬದಲಾವಣೆಗೆ ತೆರೆದುಕೊಂಡಿದೆ. ಇದು ವಿದ್ಯಾರ್ಥಿಗಳ ನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕೆಪಿಸಿಎಲ್ ಎನ್‍ಟಿಸಿಎಸ್‍ಟಿ ವಿಶ್ರಾಂತ ನಿರ್ದೇಶಕ ಡಾ.ಎಚ್. ನಾಗನಗೌಡ, ‘ಸಾಮಾನ್ಯ ಜನರ ಅವಶ್ಯಕತೆಗೆ ತಕ್ಕಂತೆ ಸರ್ಕಾರದ ನೀತಿಗಳು ಬದಲಾಗಬೇಕು. ಇಂದು ಅಸಂಪ್ರದಾಯಿಕ ಇಂಧನ ಮೂಲಗಳಿಂದ ಶೇ 20 ರಷ್ಟು ಇಂಧನ ಪಡೆಯುತ್ತಿದ್ದು, ಅದನ್ನು ಶೇ 40ಕ್ಕೆ ಹೆಚ್ಚಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ’ ಎಂದರು.

ವೈಮಾನಿಕ ಕೌಶಲ ತರಬೇತಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ಸ್ಕೈಬರ್ಡ್ ಏವಿಯೇಷನ್ ಸಿಇಒ ಎಸ್.ಮನೋಹರ್, ‘ಇಂತಹ ಕೌಶಲಗಳನ್ನು ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಹೇಳುವುದು ಕಷ್ಟ. ಇಂತಹ ತರಬೇತಿ ಕೇಂದ್ರವನ್ನು ಕಾಲೇಜಿನಲ್ಲಿ ಆರಂಭಿಸಿರುವುದು ಉತ್ತಮ ಬೆಳವಣಿಗೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಜಿ.ಎಂ. ಲಿಂಗರಾಜು, ‘ವಿದ್ಯಾರ್ಥಿಗಳು ಕೌಶಲ ಕೇಂದ್ರಗಳ ಸದುಪಯೋಗ ಪಡೆಯಬೇಕು. ವೈಮಾನಿಕ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮಧ್ಯ ಕರ್ನಾಟಕ ಭಾಗದಲ್ಲಿನ ವಿದ್ಯಾರ್ಥಿಗಳು ಪಡೆಯಬೇಕೆಂಬ ಉದ್ದೇಶದಿಂದ ಕೇಂದ್ರ ತೆರೆಯಲಾಗಿದೆ. ವಿದ್ಯಾರ್ಥಿಗಳು ವಿವಿಧ ತರಬೇತಿ ಹಾಗೂ ಕೌಶಲ ಪಡೆದು ಈಗಿನ ತಾಂತ್ರಿಕ ಯುಗದ ಅವಶ್ಯಕತೆಗೆ ಅನುಗುಣವಾಗಿ ವ್ಯಾಸಂಗ ಮಾಡಬೇಕು. ಇದರಿಂದ ಉನ್ನತ ಹುದ್ದೆಗಳನ್ನು ಪಡೆಯಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್, ಕಾಲೇಜಿನ ಗೌರ್ನಿಂಗ್ ಕೌನ್ಸಿಲ್‍ನ ಡಾ.ಕೆ. ದಿವ್ಯಾನಂದ, ಉಪ ಪ್ರಾಂಶುಪಾಲ ಡಾ. ಬಿ ಆರ್. ಶ್ರೀಧರ್, ಪ್ರಾಧ್ಯಾಪಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು