ಮಂಗಳವಾರ, ಸೆಪ್ಟೆಂಬರ್ 28, 2021
22 °C
ಜಿಲ್ಲೆಯಲ್ಲಿ ದಾಖಲಾಗದ ಮಲೇರಿಯಾ, ಆನೆಕಾಲು ರೋಗ ಪ್ರಕರಣ

ಮಳೆ ಬಿಸಿಲಿಗೆ ಹೆಚ್ಚಿದ ಡೆಂಗಿ, ಚಿಕೂನ್‌ಗುನ್ಯ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಳೆ, ಬಿಸಿಲು ಹೆಚ್ಚಾದಂತೆ ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯ ಹೆಚ್ಚಾಗಿದೆ. ಐದು ವರ್ಷಗಳ ಪ್ರಮಾಣ ನೋಡಿದರೆ ಈ ವರ್ಷ ಕಡಿಮೆ ಇದ್ದರೂ ಅಪಾಯದಿಂದ ಇನ್ನೂ ಪಾರಾಗಿಲ್ಲ. ಈ ಬಾರಿ ಮಲೇರಿಯಾ ಒಂದೂ ಪ್ರಕರಣ ದಾಖಲಾಗದೇ ಇರುವುದು ಸಮಾಧಾನದ ಸಂಗತಿಯಾಗಿದೆ.

ಸೊಳ್ಳೆಗಳಿಂದ ಬರುವ ರೋಗ ಯಾವಾಗಲೂ ಜುಲೈ ತಿಂಗಳಲ್ಲಿಯೇ ಅಧಿಕ ಇರುತ್ತದೆ. ಜೂನ್‌ನಲ್ಲಿ ಮಳೆ ಆರಂಭಗೊಂಡರೆ ಅಲ್ಲಲ್ಲಿ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಲು 8ರಿಂದ 10 ದಿನಗಳು ಬೇಕಾಗುತ್ತದೆ. ಹಾಗಾಗಿ ಜುಲೈಯಲ್ಲಿ ಪ್ರಕರಣಗಳು ಹೆಚ್ಚಿರುತ್ತವೆ. ಈ ವರ್ಷ ಜುಲೈತಿಂಗಳಲ್ಲಿ 39 ಡೆಂಗಿ, 20 ಚಿಕೂನ್‌ಗುನ್ಯ ಪ್ರಕರಣಗಳು ಕಂಡು ಬಂದಿವೆ. ಜನವರಿಯಿಂದ ಜುಲೈ ಅಂತ್ಯದ ವರೆಗೆ ಒಟ್ಟು 91 ಡೆಂಗಿ ಪ್ರಕರಣಗಳು ಹಾಗೂ 40 ಚಿಕೂನ್‌ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಚಿಕೂನ್‌ಗುನ್ಯ ಮಾತ್ರ ಕಳೆದ ವರ್ಷಕ್ಕಿಂತ ಈ ಬಾರಿ ಅಧಿಕವಾಗಿದೆ ಎಂದು  ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ. ನಟರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 14 ಡೆಂಗಿ, 2 ಚಿಕೂನ್‌ಗುನ್ಯ, ಹರಿಹರ ತಾಲ್ಲೂಕಿನಲ್ಲಿ 18 ಡೆಂಗಿ, 3 ಚಿಕೂನ್‌ಗುನ್ಯ, ಚನ್ನಗಿರಿ ತಾಲ್ಲೂಕಿನಲ್ಲಿ 19 ಡೆಂಗಿ, 11 ಚಿಕೂನ್‌ಗುನ್ಯ, ಹೊನ್ನಾಳಿ ತಾಲ್ಲೂಕಿನಲ್ಲಿ 30 ಡೆಂಗಿ, 14 ಚಿಕೂನ್‌ಗುನ್ಯ, ಜಗಳೂರು ತಾಲ್ಲೂಕಿನಲ್ಲಿ 10 ಡೆಂಗಿ, 10 ಚಿಕೂನ್‌ಗುನ್ಯ ಪತ್ತೆಯಾಗಿದೆ.

ಡೆಂಗಿ, ಚಿಕೂನ್‌ಗುನ್ಯ ಅಲ್ಲದೇ ಮೆದುಳುಜ್ವರ, ಮಲೇರಿಯಾ, ಫೈಲೇರಿಯಾ (ಆನೆಕಾಲು ರೋಗ) ರೋಗಗಳು ಕೀಟಗಳಿಂದ ಬರುವಂಥವು. ಫೈಲೇರಿಯಾ ಐದು ವರ್ಷಗಳಿಂದ ಕಂಡು ಬಂದಿಲ್ಲ. ಮೆದುಳುಜ್ವರ (ಜಪಾನೀಸ್‌ ಎನ್ಸೆಫಾಲಿಟಿಸ್‌) 2019ರಲ್ಲಿ ಎರಡು ಪ್ರಕರಣಗಳು ‍ಪತ್ತೆಯಾಗಿದ್ದು, ಆಮೇಲೆ ಕಂಡು ಬಂದಿಲ್ಲ.

ಮಲೇರಿಯಾ ಹರಡಲು ಕಾರಣವಾಗುವ ಅನಾಫಿಲೀಸ್‌ ಸೊಳ್ಳೆಯು ರೋಗ ಇರುವವರಿಗೆ ಕಚ್ಚಿ ಬೇರೆವರಿಗೆ ಕಚ್ಚಿದಾಗ ರೋಗ ಹರಡುತ್ತದೆ. ಆದರೆ ಡೆಂಗಿಗೆ ಕಾರಣವಾಗುವ ಈಡೀಸ್‌ ಈಜಿಪ್ಟೈ ಸೊಳ್ಳೆಯು ಇದಕ್ಕಿಂತ ಅಪಾಯಕಾರಿಯಾಗಿದೆ. ಅದು ಒಬ್ಬ ಡೆಂಗಿ ರೋಗಿಗೆ ಕಚ್ಚಿ ರಕ್ತ ಹೀರಿ ಇನ್ನೊಬ್ಬರಿಗೆ ಕಚ್ಚಿದಾಗ ಹರಡುವುದಷ್ಟೇ ಅಲ್ಲ. ತಾನು ಇಡುವ ಮೊಟ್ಟೆಗಳಿಗೂ ರವಾನೆ ಮಾಡುತ್ತದೆ. ಆ ಮೊಟ್ಟೆ ಲಾರ್ವವಾಗಿ ಮತ್ತೆ ಸೊಳ್ಳೆಗಳಾಗುವಾಗ ಸೋಂಕನ್ನು ಹಾಗೇ ಇಟ್ಟುಕೊಂಡಿರುತ್ತವೆ ಎಂದು ಡಾ. ನಟರಾಜ್‌ ತಿಳಿಸಿದ್ದಾರೆ.

ಸೊಳ್ಳೆ ನಿಯಂತ್ರಣಕ್ಕೆ ಕ್ರಮ

ಲಾರ್ವ ಸರ್ವೆ ಮಾಡಲಾಗಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಸಮೀಕ್ಷೆಗೆ ಮೀಸಲಿಡಲಾಗಿದೆ. ಎಲ್ಲ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು, ಪ್ರಾಥಮಿಕ ಕೇಂದ್ರಗಳಲ್ಲಿ ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲದೇ ಇತರ ಇಲಾಖೆಗಳು ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಮಹಾಂತೇಶ ಬೀಳಗಿ ಸೂಚನೆ ನೀಡಿದ್ದಾರೆ. ಅದರಂತೆ ಆರೋಗ್ಯ ಎಂಜಿನಿಯರಿಂಗ್‌ ವಿಭಾಗ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ವಿಭಾಗ, ನಗರಾಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಜತೆಗೆ ಸಮನ್ವಯ ಸಭೆ ಮಾಡಲಾಗಿದೆ. ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳೂ ಈ ಕಾರ್ಯದಲ್ಲಿ ಕೈ ಜೋಡಿಸಿವೆ ಎಂದು ಡಾ. ನಟರಾಜ್‌ ತಿಳಿಸಿದ್ದಾರೆ.

ವಹಿಸಬೇಕಾದ ಎಚ್ಚರಿಕೆಗಳು

* ರಾಸಾಯನಿಕ ಸಿಂಪಡಿಸಿ ಸೊಳ್ಳೆ, ಲಾರ್ವ ನಾಶಪಡಿಸಬಹುದು.

* ನಿರಂತರ ನೀರು ನಿಲ್ಲುವ ಕೆರೆ, ಬಾವಿ, ಹಳ್ಳ, ತೊಟ್ಟಿಗಳಿಗೆ, ಗದ್ದೆ ಬಯಲಿನ ನೀರು, ಜೌಗು ಪ್ರದೇಶಗಳಿಗೆ ಲಾರ್ವಾಗಳನ್ನು ತಿನ್ನುವ ಗಪ್ಪಿ, ಗಾಂಬೂಸಿಯ ಮೀನುಗಳನ್ನು ಬಿಡಬೇಕು. ರಾಜ್ಯದಲ್ಲಿ ಇಂಥ 2070 ಕಡೆ ಮೀನು ಬಿಡಲಾಗಿದೆ.

* ನೀರನ್ನು ಸರಾಗವಾಗಿ ಹರಿಯುವಂತೆ ಮಾಡಬೇಕು. ಇಲ್ಲವೇ ನೀರು ನಿಲ್ಲುವ ಜಾಗವನ್ನು ಮುಚ್ಚಬೇಕು.

* ಸಿಮೆಂಟ್‌ ತೊಟ್ಟಿ, ಡ್ರಮ್‌, ಬ್ಯಾರಲ್‌, ಮಣ್ಣಿನ ಮಡಕೆ, ಕಲ್ಲಿನ ಬಾನು, ಫ್ರಿಜ್‌, ಏರ್‌ಕೂಲರ್‌, ಹೂವಿನ ಕುಂಡ, ನಿರುಪಯುಕ್ತ ಟೈರ್‌, ತೆಂಗಿನ ಕಾಯಿ ಚಿಪ್ಪು, ಟಿ ಕಪ್‌, ಪ್ಲಾಸ್ಟಿಕ್‌ ವಸ್ತುಗಳಲ್ಲಿ ನೀರು ನಿಲ್ಲುವ ಅವಕಾಶ ಇದೆ. ಅಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

* ಕಸ ವಿಲೇವಾರಿ ಸರಿಯಾಗಿ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸೊಳ್ಳೆ ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕು.

* ಮನೆಯಲ್ಲಿ ಕಿಟಕಿಗಳಿಗೆ ಜಾಲರಿ ಅಳವಡಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಮೈ ತುಂಬಾ ಬಟ್ಟೆ ಹಾಕಬೇಕು. ಸೊಳ್ಳೆ ನಿರೋಧಕಗಳನ್ನು ಬಳಸಬೇಕು.

ಅಂಕಿ ಅಂಶ

ವರ್ಷ  ಮಲೇರಿಯಾ  ಡೆಂಗಿ ಚಿಕೂನ್‌ಗುನ್ಯ

2017   10   818   204

2018   9   121   118

2019   8   322   105

2020   5   114    28

2021 (ಜುಲೈ ಅಂತ್ಯಕ್ಕೆ)   0   91   40

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು