ದಾವಣಗೆರೆ: ‘ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ’ ಕೇಂದ್ರ ಸ್ಥಾಪನೆಗೆ ನಗರಕ್ಕೆ ಹೊಂದಿಕೊಂಡಂತೆ 2 ಎಕರೆ ಭೂಮಿ ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರದ ಏಕಗವಾಕ್ಷಿ ಸಮಿತಿಯ ಸಭೆ ಒಪ್ಪಿಗೆ ನೀಡಿತು. ಭೂಮಿ ಹಸ್ತಾಂತರಕ್ಕೆ ಪ್ರಕ್ರಿಯೆ ಆರಂಭಿಸುವಂತೆ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಮಿತಿಯ ಜಿಲ್ಲಾ ಮಟ್ಟದ 100ನೇ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತು. ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ತ್ವರಿತವಾಗಿ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಸಹಮತ ವ್ಯಕ್ತವಾಯಿತು.
‘ಮಧ್ಯ ಕರ್ನಾಟಕದಲ್ಲಿರುವ ದಾವಣಗೆರೆಯಲ್ಲಿ ಸಾಫ್ಟ್‌ವೇರ್ ಉದ್ಯಮ ಕಾರ್ಯಾರಂಭವಾಗಬೇಕು ಎಂಬುದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಅಪೇಕ್ಷೆ. ಲೋಕಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಅವರು ವಿಸ್ತೃತವಾಗಿ ಚರ್ಚಿಸಿದ್ದಾರೆ. ಉದ್ಯಮ ಸ್ಥಾಪನೆಗೆ ಮುಂದೆ ಬಂದಿರುವವರಿಗೆ ಅಗತ್ಯ ಸಹಕಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
‘ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಉದ್ಯಮಗಳು ಹೆಚ್ಚಾದಂತೆ ಉದ್ಯೋಗಾವಕಾಶ ಸಿಗುತ್ತವೆ. ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಹೊಸ ಉದ್ಯಮಗಳಿಗೆ ಉತ್ತೇಜನ ನೀಡಬೇಕು’ ಎಂದು ತಾಕೀತು ಮಾಡಿದರು.
‘ಸಾಫ್ಟ್‌ವೇರ್ ಟೆಕ್ನಾಲಜಿ ಆಫ್ ಇಂಡಿಯಾ’ ಜೆ.ಎಚ್.ಪಟೇಲ್ ನಗರದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಂಪೆನಿಗೆ ದಾವಣಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ತುರ್ಚಘಟ್ಟ ಗ್ರಾಮದಲ್ಲಿ 2 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಇದು ನಗರದಿಂದ 13 ಕಿ.ಮೀ ದೂರದಲ್ಲಿರುವ ಕಾರಣಕ್ಕೆ ಕಂಪೆನಿ ಹಿಂದೇಟು ಹಾಕಿತ್ತು. ದಾವಣಗೆರೆಗೆ ಹೊಂದಿಕೊಂಡ ಪ್ರದೇಶದಲ್ಲಿ ಸ್ಥಳಾವಕಾಶಕ್ಕೆ ಮನವಿ ಮಾಡಿಕೊಂಡಿತ್ತು.
ಪ್ಲಾಸ್ಟಿಕ್, ಚಪ್ಪಲಿ, ಬಾಟಲಿ ಸೇರಿ ಇತರ ತ್ಯಾಜ್ಯದ ಮರುಬಳಕೆಗೆ ₹ 9.53 ಕೋಟಿ ವೆಚ್ಚದ ಘಟಕ ಸ್ಥಾಪಿಸಲು ‘ಎಚ್‌ಪಿಸಿ ಎಕೊ ರಿಸೈಕ್ಲನರ್’ ಕಂಪೆನಿ ಮುಂದೆಬಂದಿದ್ದು, ಕರೂರು ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ಕಾಯ್ದಿರಿಸಿದ ನಿವೇಶನ ಹಂಚಿಕೆಗೆ ಸಭೆ ಸಹಮತ ವ್ಯಕ್ತಪಡಿಸಿತು.
‘ನಗರದಲ್ಲಿ ತಾಜ್ಯ ನಿರ್ವಹಣೆ ದೊಡ್ಡ ಸವಾಲಾಗುತ್ತಿದೆ. ಇ–ತ್ಯಾಜ್ಯ ಹೊಸ ಸಮಸ್ಯೆಗಳನ್ನು ಸೃಷ್ಟಿಸುವ ಅಪಾಯಗಳಿವೆ. ಸೋಲಾರ್ ಪ್ಯಾನಲ್, ಎಲೆಕ್ಟ್ರಿಕಲ್ ವಾಹನದ ಲೀಥಿಯಂ ಬ್ಯಾಟರಿಗಳು ವಿಷಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಇಂತಹ ತ್ಯಾಜ್ಯ ನಿರ್ವಹಣೆಗೆ ಗಮನ ಹರಿಸುವ ಅಗತ್ಯವಿದೆ. ಮರುಬಳಕೆಗೆ ಸಾಧ್ಯವಿರುವ ತ್ಯಾಜ್ಯಕ್ಕೆ ಸಂಬಂಧಿಸಿದ ಘಟಕ ನಿರ್ಮಿಸಲು ಮುಂದೆಬಂದಿರುವ ಸಂಸ್ಥೆಗೆ ಅಗತ್ಯ ಸಹಕಾರ ನೀಡಿ’ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣ ನಾಯ್ಕ, ಉದ್ಯಮಿಗಳಾದ ಸಿದ್ದನಗೌಡ, ಟಿ.ಎಂ.ಪ್ರಸಾದ್, ಪಿ.ಆರ್.ನಾಯ್ಡು, ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.