ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಭತ್ತ, ರಾಗಿ, ಜೋಳ ಖರೀದಿಗೆ ನೋಂದಣಿಗೆ ಆಹ್ವಾನ

Published 19 ಡಿಸೆಂಬರ್ 2023, 5:46 IST
Last Updated 19 ಡಿಸೆಂಬರ್ 2023, 5:46 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಭತ್ತ ಮತ್ತು ರಾಗಿ ಖರೀದಿಸಲು ರೈತರಿಂದ ನೋಂದಣಿಗೆ ಆಹ್ವಾನಿಸಲಾಗಿದೆ.

ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿ ಮತ್ತು ಭತ್ತವನ್ನು ನೇರವಾಗಿ ರೈತರಿಂದ ಖರೀದಿಸಲು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿಸಿದ್ದು, ರೈತರು ಭತ್ತ ಮತ್ತು ರಾಗಿಯ ಗುಣಮಟ್ಟವನ್ನು ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಪರಿಶೀಲಿಸಬೇಕು.

ನಂತರ ರೈತರು ಕೃಷಿ ಇಲಾಖೆ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ರಾಗಿ ಪ್ರತಿ ಕ್ವಿಂಟಲ್‍ಗೆ ₹3,846 ಮತ್ತು ಭತ್ತ ಪ್ರತಿ ಕ್ವಿಂಟಲ್‍ಗೆ ಸಾಮಾನ್ಯ ₹2,183, ಗ್ರೇಡ್-‘ಎ’ಗೆ ₹2,203 ಗಳ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ರೈತರ ನೋಂದಣಿ ಪ್ರಕ್ರಿಯೆ ಕಡ್ಡಾಯವಾಗಿದೆ.

ಫ್ರೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆಗೆ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು 'ಫೂಟ್ಸ್' ದತ್ತಾಂಶದಲ್ಲಿ ದಾಖಲಿಸಿರುವ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಐ(ಎನ್‌ಪಿಸಿಐ) ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನೀಡಬೇಕು.

ಕೃಷಿ ಇಲಾಖೆಯಿಂದ ನೇಮಿಸಲ್ಪಟ್ಟ ಗುಣಮಟ್ಟ ಪರೀಕ್ಷಕರು ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು (ಎಫ್.ಎ.ಕ್ಯೂ) ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿ ಇಲ್ಲದೇ ಇದ್ದರೆ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.

ಯಾವುದೇ ದೂರುಗಳನ್ನು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು, ಉಪನಿರ್ದೇಶಕರು (ಆಹಾರ), ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು.  ದೂರುಗಳನ್ನು ದೂ.ಸಂ: 08192-296770, 9448496020 ನೀಡಬಹುದು ಎಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಅಧ್ಯಕ್ಷ ಡಾ.ವೆಂಕಟೇಶ್.ಎಂ.ವಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT