ಮಂಗಳವಾರ, ಡಿಸೆಂಬರ್ 1, 2020
17 °C

PV Web Exclusive: ಐಟಿ ಕಂಪನಿ ಬಿಟ್ಟ ಉದ್ಯೋಗಿ ಕೈಹಿಡಿದ ‘ಅಡಿಕೆ ಖೇಣಿ’

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಕಾರಣದಿಂದ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಹಲವರು ಕೆಲಸ ಕಳೆದುಕೊಳ್ಳಬೇಕಾಯಿತು. ಹಲವು ಮಂದಿ ಕೈಯಲ್ಲಿ ಕಾಸಿಲ್ಲದೆ ಜೀವನ ನಿರ್ವಹಣೆ ಸೇರಿ ತುತ್ತು ಅನ್ನಕ್ಕೂ ಪರದಾಡುವಂತಾಯಿತು. ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳ ಪರಿಸ್ಥಿತಿಯೂ ಇದಕ್ಕೆ ಹೊರತೇನಲ್ಲ. ಉದ್ಯೋಗ ಕಳೆದುಕೊಂಡಿದ್ದರಿಂದ ಕೈಕಟ್ಟಿ ಕೂರಲಿಲ್ಲ. ಬದಲಾಗಿ ಕೃಷಿಯತ್ತ ಮುಖ ಮಾಡಿದ್ದಾರೆ.  ಸ್ವಗ್ರಾಮಗಳಿಗೆ ಹೊಸ ಜೀವನ ಕಂಡುಕೊಂಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಶಿವಕುಮಾರ್.

ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಗ್ರಾಮದವರಾದ ಎಂ.ವಿ. ಶಿವಕುಮಾರ ಅವರು ಮೆಕ್ಯಾನಿಕಲ್ ಡಿಪ್ಲೊಮಾ ಓದಿ 15 ವರ್ಷ ಬೆಂಗಳೂರಿನಲ್ಲಿ ಮೂರು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಕೆಲಸ ಬಿಡುವ ವೇಳೆ ಕಂಪನಿಯೊಂದರಲ್ಲಿ ಚೀಫ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಿಂಗಳಿಗೆ ₹35 ಸಾವಿರ ಸಂಬಳವೂ ಸಿಗುತ್ತಿತ್ತು. ಲಾಕ್‌ಡೌನ್ ಕಾರಣ ಉದ್ಯೋಗ ಕಳೆದುಕೊಂಡರು. ಇದರಿಂದಾಗಿ ಕುಟುಂಬ ಸಮೇತ ಸ್ವಗ್ರಾಮಕ್ಕೆ ಹಿಂದಿರುಗಬೇಕಾಯಿತು.  

ಲಾಕ್‌ಡೌನ್ ವೇಳೆ ತೋಟ ಹೊಲಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್‌ಡೌನ್ ಸಡಿಲಿಕೆಯಾದಂತೆ ಮರಳಿ ಕೆಲಸಕ್ಕೆ ಕಂಪನಿಯಿಂದ ಕರೆ ಬಂತು. ಉದ್ಯೋಗ ಮರು ಪಡೆಯುವ ಖುಷಿಯಲ್ಲಿದ್ದ ಇವರಿಗೆ ಕಚೇರಿಗೆ ಹೋದಾಗ ಒಂದು ವಿಷಯ ಅಘಾತ ನೀಡಿತ್ತು. ಅರ್ಧ ಸಂಬಳಕ್ಕೆ ದುಡಿಯಬೇಕು ಎಂದು ಮಾಲೀಕರು ಹೇಳಿದರು. ಈ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟ ಎಂಬುದನ್ನು ಅರಿತ ಶಿವಕುಮಾರ್ ಮರು ಮಾತನಾಡದೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮರಳಿ ಸ್ವಗ್ರಾಮ ತುರ್ಚಘಟ್ಟಕ್ಕೆ ಬಂದರು.

ಇದನ್ನೂ ಓದಿ: 

ಗ್ರಾಮದಲ್ಲಿ ಏನಾದರೂ ಸಾಧನೆ  ಮಾಡಬೇಕು ಎಂದು ದೃಢನಿಶ್ಚಯ ಮಾಡಿದ ಶಿವಕುಮಾರ್ ಅವರಿಗೆ ಅಡಿಕೆ ಖೇಣಿ ಮಾಡುವ ಆಲೋಚನೆ ಬಂತು. ತುರ್ಚಘಟ್ಟ ಗ್ರಾಮದಲ್ಲಿ 2,500–3,000 ಕುಟುಂಬಗಳು ಇದ್ದು, ಅಡಿಕೆ  ಬೆಳೆದಿದ್ದಾರೆ. ಅವರಿಂದ ಅಡಿಕೆ ಖರೀದಿಸಿ ಒಣಗಿಸಿ ಮಾರಾಟ ಮಾಡುವುದು. ಅಡಿಕೆಯ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಹೊಂದಿದ್ದ ಶಿವಕುಮಾರ್ ಕೂಡಿಟ್ಟ ಹಣದ ಜೊತೆಗೆ ಸಾಲ ಮಾಡಿ ಅಡಿಕೆ ಖೇಣಿ ಮಾಡಲು ಸಿದ್ಧತೆ ಮಾಡಿಕೊಂಡರು.

ಅಡಿಕೆ ಖೇಣಿ ಎಂದರೆ?

ತೋಟಗಳ ಬಳಿಯೇ ಹೋಗಿ ಅಡಿಕೆ ಫಸಲನ್ನು ನೋಡಿ ಇಂತಿಷ್ಟು ಬೆಲೆ ನೀಡಿ ಖರೀದಿಸುವುದೇ ಅಡಿಕೆ ಖೇಣಿ. ಅಡಿಕೆಯನ್ನು ಕೊಯ್ದು ಅದನ್ನು ಒಣಗಿಸಿ ಮಾರುಕಟ್ಟೆಗೆ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುವುದು ನಂತರದ ಪ್ರಕ್ರಿಯೆ.

ತುರ್ಚಘಟ್ಟ ಗ್ರಾಮದಲ್ಲಿ ಇವರೊಬ್ಬರೇ ಖೇಣಿ ಮಾಡುತ್ತಿದ್ದು, ಒಂದು ಬಾರಿ ಅಡಿಕೆ ಬೇಯಿಸಿದರೆ ಕನಿಷ್ಠ ಆರು ದಿನಗಳವರೆಗೆ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಅಡಿಕೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ದರವಿರುವುದರಿಂದ ಮೂರು ತಿಂಗಳಿನಲ್ಲಿ 50–60 ಕ್ವಿಂಟಲ್ ಅಡಿಕೆ ಮಾರಾಟ ಮಾಡಿ ₹1.50 ಲಕ್ಷ ಆದಾಯ ಗಳಿಸಿದ್ದಾರೆ. ಈ ಮೊದಲು ಒಂದು ವರ್ಷದಲ್ಲಿ ಸಂಪಾದನೆ ಮಾಡುತ್ತಿದ್ದ ಹಣ ನಾಲ್ಕೇ ತಿಂಗಳಲ್ಲಿ ಇವರ ಕೈಸೇರಿದೆ. ಸ್ವಂತ ಉದ್ಯೋಗದಿಂದ ಈಗ ಸ್ವಾವಲಂಬಿಗಳಾಗಿದ್ದಾರೆ. ಬೇರೆಯವರ ಕೈಕೆಳಗೆ ದುಡಿಯುತ್ತಿದ್ದ ಇವರು ಈಗ 50 ಮಂದಿಗೆ ಕೆಲಸ ನೀಡಿದ್ದಾರೆ. ಶಿವಕುಮಾರ್ ರೈತರ ತೋಟಗಳಿಗೆ ಹೋಗಿ ಖರೀದಿ ಮಾಡುತ್ತಿರುವುದರಿಂದ  ಬೆಳೆಗಾರರು ಮಾರುಕಟ್ಟೆಗೆ ಅಲೆಯುವುದು ತಪ್ಪಿದೆ.

‘ಕೃಷಿಯಲ್ಲಿ ಖುಷಿ ಕಾಣುತ್ತಿದ್ದೇನೆ. ಬೇರೆ ಯಾವ ಕೆಲಸದಲ್ಲೂ ಇಷ್ಟು ಖುಷಿಯನ್ನು ಕಾಣಲು ಸಾಧ್ಯವಿಲ್ಲ. ಗ್ರಾಮದಲ್ಲಿ ಎಲ್ಲರೂ ನನ್ನನ್ನು ಶ್ಲಾಘಿಸುತ್ತಿದ್ದಾರೆ. ಗ್ರಾಮದ ಅಡಿಕೆ ಬೆಳೆಗಾರರು ಮಾರುಕಟ್ಟೆಗೆ ಹೋಗುವುದನ್ನು ತಪ್ಪಿಸಿದ್ದೇನೆ. ನಾನೇ ತೋಟದ ಬಳಿ ಹೋಗಿ ಅಡಿಕೆ ಖರೀದಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಶಿವಕುಮಾರ್. 

ಶಿವಕುಮಾರ್ ಅವರ ಸಂಪರ್ಕ ಸಂಖ್ಯೆ: 8310871588

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು