ಶುಕ್ರವಾರ, ಜನವರಿ 24, 2020
21 °C
ಮನೋ ವಿಕಾಸಕ್ಕೆ ರಂಗಭೂಮಿ ಕಾರಣವಾಗಲಿ: ಸಾಣೇಹಳ್ಳಿಶ್ರೀ

ಜನಮನ ಮುಟ್ಟಿದ ‘ಜನಕ ಜಾತೆ ಜಾನಕಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸೀತೆಯ ಸಂಭ್ರಮ, ವಿಷಾದ, ಪ್ರಶ್ನೆ, ಒಡಲಾಳದ ನೋವು, ಅಭಿಪ್ರಾಯ, ರಾಮಾಯಣದ ಘಟನಾವಳಿಗಳು ‘ಜನಕ ಜಾತೆ ಜಾನಕಿ’ ಮೂಲಕ ಭಾನುವಾರ ಬಿಐಇಟಿಯ ಎಸ್.ಎಸ್‌. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಅನಾವರಣಗೊಂಡಿತು. ಡಾ.ಹೆಲನ್‌ ಮೈಸೂರು ಎರಡುಮುಕ್ಕಾಲು ಗಂಟೆ ಪ್ರದರ್ಶಿಸಿದ ಈ ಸೀತಾ ವೃತ್ತಾಂತದ ‘ಏಕವ್ಯಕ್ತಿ– ಅಭಿವ್ಯಕ್ತಿ’ ಜನಮನ ಮುಟ್ಟಿತು.

ರಾಮನ ವಂಶದ ಹಿನ್ನೆಲೆ, ಸೀತಾ ವಂಶವೃಕ್ಷ, ಸೀತಾ–ರಾಮ ಕಲ್ಯಾಣ, ವನವಾಸ ಪ್ರಾಪ್ತಿ, ಸೀತಾಪಹರಣ, ರಾಮ ಮುದ್ರಿಕಾ ಪ್ರದಾನ, ರಾವಣ ಸಂಹಾರ, ಸೀತಾ ಅಗ್ನಿ ಪ್ರವೇಶ, ರಾಮನ ವಿಶ್ವರೂಪ ದರ್ಶನದ ಸಂಗತಿಗಳ ಅದ್ಭುತ ಅಭಿವ್ಯಕ್ತಿ ನಡೆಯಿತು. ಹೆಲೆನ್‌ ಅವರು 111 ಪಾತ್ರಗಳನ್ನು ಕಟ್ಟಿಕೊಟ್ಟರು.

ಬೆಂಗಳೂರಿನ ರಂಗ ಬದುಕು ಟ್ರಸ್ಟ್‌ ಹಾಗೂ ಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಈ ಏಕವ್ಯಕ್ತಿ ಅಭಿವ್ಯಕ್ತಿಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

‘ಸಂಸ್ಕೃತಿಯನ್ನು ಕಟ್ಟಿಕೊಡುವವರು, ಕಟ್ಟಿಕೊಡಲು ಪ್ರೋತ್ಸಾಹಿಸುವವರು ಬಹಳ ಕಡಿಮೆ. ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ ಅವರ ಪ್ರೋತ್ಸಾಹದಿಂದಾಗಿ ಸಾಣೇಹಳ್ಳಿ, ದಾವಣಗೆರೆ ಸಹಿತ ಹಲವೆಡೆ ಆಧುನಿಕ ರಂಗಮಂದಿರಗಳು ನಿರ್ಮಾಣಗೊಳ್ಳಲು ಸಾಧ್ಯವಾಗಿದೆ’ ಎಂದು ಸಾಣೇಹಳ್ಳಿ ಶ್ರೀ ಹೇಳಿದರು.

ಜನರಲ್ಲಿ ಸಾಂಸ್ಕೃತಿಕ ಒಲವು ಕಡಿಮೆಯಾಗುತ್ತಿದೆ. ಆರ್ಕೆಸ್ಟ್ರಾ ಎಲ್ಲ ಇದ್ದರೆ ಜನ ಮುಗಿಬೀಳುತ್ತಾರೆ. ಮನಸ್ಸನ್ನು ವಿಲಾಸಗೊಳಿಸುವ, ವಿಕಾರಗೊಳಿಸುವತ್ತ ಗಮನ ಹೋಗುತ್ತಿದೆಯೇ ಹೊರತು ಮನೋವಿಕಾಸಗೊಳಿಸುವ ರಂಗಭೂಮಿ ಕಡೆಗೆ ಜನರು ಒಲವು ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಹೆಲನ್‌ ಮೈಸೂರು ಅವರು ಈ ಅದ್ಭುತ ಏಕವ್ಯಕ್ತಿ ಅಭಿವ್ಯಕ್ತಿಯನ್ನು ಸಾಣೇಹಳ್ಳಿಯಲ್ಲಿ ಪ್ರದರ್ಶಿಸಿದ್ದರು. ಜನರು ಕೂಡ ಉತ್ತಮ ಸ್ಪಂದನೆ ನೀಡಿದ್ದರು ಎಂದು ನೆನಪಿಸಿಕೊಂಡರು.

ಬಿಐಇಟಿ ನಿರ್ದೇಶಕ ಪ್ರೊ. ವೃಷಭೇಂದ್ರಪ್ಪ, ಶ್ರೀನಿವಾಸ ಗೌಡ, ಹಿರಿಯ ರಂಗಕರ್ಮಿ ಕೆ. ವೀರಸ್ವಾಮಿ, ಹಾಲಸ್ವಾಮಿ, ಬಾ.ಮಾ. ಬಸವರಾಜಯ್ಯ, ಹೆಲನ್‌ ಅವರ ತಾಯಿ, ಹಿರಿಯ ರಂಗನಟಿ ತೆರೆಸಮ್ಮ ಮೈಸೂರು ಅವರೂ ಇದ್ದರು.

ರಚನೆ, ವಿನ್ಯಾಸ, ಬೆಳಕಿನ ಸಂಯೋಜನೆ ಮತ್ತು ನಿರ್ದೇಶನವನ್ನು ಡಾ. ಎಸ್‌.ಎಲ್.ಎನ್. ಸ್ವಾಮಿ ಮಾಡಿದ್ದರು. ಸಂಗೀತ– ಪ್ರಮೋದ್ ಸಪ್ರೆ ಮತ್ತು ಪ್ರಮೋದ್ ಸಾಗರ್, ಗಾಯನ–ರಮೇಶ್ಚಂದ್ರ, ಕಿರಣ್ ರಾಥೋಡ್ ನಿರ್ವಹಣೆ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು