ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಮತಿ | ಜನತಾ ದರ್ಶನ: ಸಮಸ್ಯೆ ತೆರೆದಿಟ್ಟ ಗ್ರಾಮಸ್ಥರು

Published 28 ಅಕ್ಟೋಬರ್ 2023, 4:52 IST
Last Updated 28 ಅಕ್ಟೋಬರ್ 2023, 4:52 IST
ಅಕ್ಷರ ಗಾತ್ರ

ಗೋವನಕೋವಿ (ನ್ಯಾಮತಿ): ನ್ಯಾಮತಿ–ಹೊನ್ನಾಳಿ ಅವಳಿ ತಾಲ್ಲೂಕಿನಲ್ಲಿ ಇ-ಸ್ವತ್ತು ಸಮಸ್ಯೆ ಬಗೆಹರಿಸಬೇಕು. ಬಗರ್‌ಹುಕು ಫಾರಂನಲ್ಲಿನ ನಮೂನೆ–57ರ ಸಮಸ್ಯೆ ಇತ್ಯಥ ಪಡಿಸಬೇಕು. ನಕಾಶೆ ಕಂಡ ದಾರಿಯಲ್ಲಿ ಕಾಲು ದಾರಿ, ಬಂಡಿದಾರಿ ಬಿಡಿಸಿಕೊಡಬೇಕು. ಸರ್ಕಾರಿ ಜಾಗದಲ್ಲಿರುವ ಸ್ಮಶಾನ ಜಾಗ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ಗ್ರಾಮದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಎದುರು ಜನರು ಸಮಸ್ಯೆ ತೆರೆದಿಟ್ಟರು.

ಗ್ರಾಮೀಣ ಜನರು ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಜನಸಾಮಾನ್ಯರ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಪರಿಹರಿಸಬೇಕು ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಜನರು ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಅವಳಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಇ-ಸ್ವತ್ತು ಸಮಸ್ಯೆಯಿಂದ ರೈತರು ಮತ್ತು ಸಾರ್ವಜನಿಕರು ಜಮೀನುಗಳ ಮಾರಾಟ, ಖರೀದಿ ಆಗುತ್ತಿಲ್ಲ. ಬ್ಯಾಂಕುಗಳಿಂದ ಸಾಲ ಪಡೆಯಲಾಗುತ್ತಿಲ್ಲ. ವಿಶೇಷವಾಗಿ ಯಕ್ಕನಹಳ್ಳಿ, ಬೀರಗೊಂಡನಹಳ್ಳಿ, ಲಿಂಗಾಪುರ ಕುರುವ ಕಾಂತಪ್ಪ ಬಡಾವಣೆ, ಟಿ.ಜಿ. ಹಳ್ಳಿ, ಹೊಸಮಳಲಿ, ಬಸವೇಶ್ವರ ನಗರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈ ಸ್ವತ್ತು ಬರುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಬೇಕಿದೆ ಎಂದರು.

ತಾಲ್ಲೂಕಿನಲ್ಲಿ ಕೃಷಿ ಮತ್ತು ಆರಣ್ಯ ಭೂಮಿ ವ್ಯಾಪ್ತಿಯ ಕುರಿತು ಸಾಕಷ್ಟು ಗೊಂದಲಗಳಿದ್ದು, ಬಗರ್‌ಹುಕುಂ ಅರ್ಜಿ ಫಾರಂ 52ರ ಸಮಸ್ಯೆಯನ್ನು ಪರಿಹರಿಸಬೇಕಿದೆ. ತಾಲ್ಲೂಕಿನಲ್ಲಿ ಇನ್ನೂ 7 ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರಗಳಾಗಬೇಕಾಗಿದೆ ಎಂದು ಹೇಳಿದರು.

ಇನಾಮು ಗ್ರಾಮಗಳಾದ ಹೊಸಕಟ್ಟೆ, ಹನುಮಸಾಗರ, ಕುಳಗಟ್ಟೆ ಗ್ರಾಮಗಳಲ್ಲಿನ ಸಮಸ್ಯೆ ಬಗೆಹರಿಸಲು ದಾಖಲೆಗಳನ್ನು ರೈತರಿಗೆ ನೀಡುವ ಮೂಲಕ ಬಗೆಹರಿಸುವ ಪ್ರಯತ್ನ ಮಾಡಲಾಗಿದೆ. 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಇಲ್ಲದೇ ಬೆಳೆಹಾನಿಯಾಗಿದೆ. ಸರ್ಕಾರದಿಂದ ಬೆಳೆಹಾನಿ ಪರಿಹಾರ ಕೊಡಿಸುವ ಬಗ್ಗೆ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

33 ಜನ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆಯ ಆದೇಶಪತ್ರಗಳನ್ನು ವಿತರಿಸಲಾಯಿತು.

ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಾಲ್ಲೂಕು ಪಂಚಾಯಿತಿ ಇ.ಒ. ರಾಘವೇಂದ್ರ, ನ್ಯಾಮತಿ ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನೇಶಪ್ಪ, ಉಪಾಧ್ಯಕ್ಷೆ ಶಶಿಕಲಾ ಮತ್ತು ಸದಸ್ಯರು, ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್. ರವಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಜನತಾ ದರ್ಶನ ಕಾಟಾಚಾರವಾಗಬಾರದು: ಜಿಲ್ಲಾಧಿಕಾರಿ

ಜನತಾ ದರ್ಶನ ಕಾರ್ಯಕ್ರಮ ಕಾಟಾಚಾರ ಎಂಬಂತೆ ಆಗಬಾರದು. 3 ದಶಕಗಳಿಂದ ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ಇರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ. ಹೇಳಿದರು. ಜಿಲ್ಲೆಯಲ್ಲಿ ವಿಶೇಷವಾಗಿ ರೈತ ಮಹಿಳೆಯರಿಗೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಒತ್ತು ನೀಡಲಾಗಿದೆ. ಗ್ರಾಮ ಠಾಣಾ ಪೋಡಿ ಈ ಸ್ವತ್ತು ಸ್ಮಶಾನ ಜಾಗ ಹದ್ದುಬಸ್ತು ವಿಧವಾ ವೃದ್ಧಾಪ್ಯ ವೇತನಗಳಂತಹ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುವುದು ಕಾರ್ಯಕ್ರಮಗಳ ಉದ್ದೇಶ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 50 ಅರ್ಜಿಗಳು ಬಂದಿವೆ ಎಂದರು.

[object Object]
ನ್ಯಾಮತಿ ತಾಲ್ಲೂಕು ಆಡಳಿತ ವತಿಯಿಂದ ಶುಕ್ರವಾರ ಗೋವಿನಕೋವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನದಡಿಯಲ್ಲಿ ಸೌಲಭ್ಯ ಪಡೆದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT