ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ವಿದ್ಯಾರ್ಥಿಗಳ ಧರಣಿ: ನಟ ಚೇತನ್‌ ಬೆಂಬಲ

ಸನ್ಮಾನ ಸಮಾರಂಭದಲ್ಲಿ ಕಪ್ಪು ಪಟ್ಟಿ‌ ಧರಿಸಿ ಆಕ್ರೋಶ
Last Updated 11 ಜುಲೈ 2020, 13:20 IST
ಅಕ್ಷರ ಗಾತ್ರ

ದಾವಣಗೆರೆ: ಶಿಷ್ಯವೇತನಕ್ಕೆ ಒತ್ತಾಯಿಸಿ ಇಲ್ಲಿನ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿ 13 ನೇ ದಿನವೂ ಮುಂದುವರಿದಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ನಟ ಚೇತನ್‌ ಬೆಂಬಲ ಸೂಚಿಸಿದ್ದಾರೆ.

ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ನಟ ಚೇತನ್‌ ವಿದ್ಯಾರ್ಥಿಗಳನ್ನು ಬೆಂಬಲಿಸಿ ವಿಡಿಯೊದಲ್ಲಿ ಹೇಳಿಕೆ ನೀಡಿದ್ದಾರೆ.

‘ಸರ್ಕಾರ 16 ತಿಂಗಳಿನಿಂದ ಬಾಕಿ ಇರುವ ಶಿಷ್ಯವೇತನ ನೀಡದಿರುವುದು ಸರಿಯಲ್ಲ. ಸರ್ಕಾರ ಹಾಗೂ ಕಾಲೇಜಿನ ಆಡಳಿತ ಮಂಡಳಿ ನಡುವಿನ ಹಗ್ಗ ಜಗ್ಗಾಟದಲ್ಲಿ ಕೊರೊನಾ ವಾರಿಯರ್‌ಗಳಾದ ವೈದ್ಯಕೀಯ ವಿದ್ಯಾರ್ಥಿಗಳು ಬಲಿಪಶುಗಳಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸೇವೆ ಮಾಡುತ್ತಲೇ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ಸರ್ಕಾರಕ್ಕೆ ಕೊರೊನಾ ವಾರಿಯರ್‌ಗಳಾದ ವೈದ್ಯರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಶೀಘ್ರ ಶಿಷ್ಯವೇತನ ನೀಡಲಿ’ ಎಂದು ಅವರು ಒತ್ತಾಯಿಸಿದ್ದಾರೆ.

‘ಚಪ್ಪಾಳೆ ಹೊಡೆದು ವೈದ್ಯರನ್ನು ಹುರಿದುಂಬಿಸಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಜನರೂ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಮೂಲಕ ಜವಾಬ್ದಾರಿ ಮೆರೆಯಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಜಯದೇವ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು 13 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ 16 ತಿಂಗಳುಗಳಿಂದ ಬಾಕಿ ಇರುವ ಶಿಷ್ಯವೇತನ ನೀಡಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದರು.

ಬಳಿಕಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕೈಗೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟಿಸಿದರು. ಸಮಾರಂಭದಲ್ಲಿ ಕೋವಿಡ್‌ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಕೆಲ ವಿದ್ಯಾರ್ಥಿಗಳಿಗೆ ಸನ್ಮಾನ ಆಯೋಜಿಸಲಾಗಿತ್ತು. ಅಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿಯೇ ಸನ್ಮಾನ ಸ್ವೀಕರಿಸಿದರು.

‘ನಮಗೆ ಸನ್ಮಾನ ಬೇಡ. ನ್ಯಾಯಯುತವಾಗಿ ನೀಡಬೇಕಿರುವ ಶಿಷ್ಯವೇತನ ನೀಡಿ’ ಎಂದು ಸಾಂಕೇತಿಕವಾಗಿ ಕೈಗೆ ಕಪ್ಪುಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಟರು, ಜನಸಾಮಾನ್ಯರಿಗೆ ವಿದ್ಯಾರ್ಥಿಗಳ ಕೂಗು ಕೇಳಿಸುತ್ತಿದೆ. ಆದರೆ ಸರ್ಕಾರ ಮಾತ್ರ ಕಿವಿಗೊಡುತ್ತಿಲ್ಲ. ಶಿಷ್ಯವೇತನ ನೀಡುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು. ಒಪಿಡಿ ಸೇವೆ ಬಹಿಷ್ಕಾರ ಮುಂದುವರಿದಿದ್ದು, ಸೋಮವಾರದಿಂದ ತುರ್ತು ಸೇವೆಗಳನ್ನು ಬಹಿಷ್ಕರಿಸುತ್ತೇವೆ’ ಎಂದು ವಿದ್ಯಾರ್ಥಿ ಡಾ. ಹರೀಶ್‌ ತಿಳಿಸಿದರು.

ಡಾ. ನಿಧಿ, ಡಾ. ಪ್ರೀತಂ, ಡಾ. ಈಶ್ವರ್‌, ಡಾ. ರಾಹುಲ್‌ ಸೇರಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT