ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡರನಾಯ್ಕನಹಳ್ಳಿ: ಸಮೃದ್ಧಿ ಕೋರುವ ಜೋಕುಮಾರನ ‘ಅಳಲು’

ಆಧುನಿಕತೆಯ ಆಡಂಬರದಲ್ಲೂ ದಟ್ಟವಾಗಿರುವ ನಂಬಿಕೆ
Published : 12 ಸೆಪ್ಟೆಂಬರ್ 2024, 5:47 IST
Last Updated : 12 ಸೆಪ್ಟೆಂಬರ್ 2024, 5:47 IST
ಫಾಲೋ ಮಾಡಿ
Comments

ಕಡರನಾಯ್ಕನಹಳ್ಳಿ: ಆಧುನಿಕತೆಯ ನಡುವೆ ಬಹುತೇಕ ಸಾಂಪ್ರದಾಯಿಕ ಆಚರಣೆ, ಹಬ್ಬಗಳು ಕಣ್ಮರೆಯಾಗುತ್ತಿವೆ. ಆದರೆ, ಜೋಕುಮಾರನ ಆಚರಣೆ ಮಾತ್ರ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನಿಂದ ಜೋಕುಮಾರನ ಮೂರ್ತಿ ಮಾಡಿ, ಬೇವಿನ ಸೊಪ್ಪನ್ನು ಹೊದಿಸಿ, ಬುಟ್ಟಿಯಲ್ಲಿ ಇಟ್ಟುಕೊಂಡು ಮಹಿಳೆಯರು, ಯುವತಿಯರು ಹೊತ್ತುಕೊಂಡು ಏಳು ದಿನ ಮನೆಮನೆಗೆ ತೆರಳಿ, ಹಾಡು ಹಾಡುತ್ತ ದವಸಧಾನ್ಯ ಪಡೆದುಕೊಂಡು ಹೋಗುವರು.

ಗಂಗಾಮತಸ್ಥರ ಮನೆಯಲ್ಲಿ ಭಾದ್ರಪದ ಶುದ್ಧ ಅಷ್ಟಮಿಯ ದಿನದಂದು ಜೋಕುಮಾರಸ್ವಾಮಿ ಹುಟ್ಟುತ್ತಾನೆ. ಈ ಬಾರಿ ಬುಧವಾರ ಜೋಕುಮಾರ ಹುಟ್ಟಿದ್ದು, ಗುರುವಾರದಿಂದ ಜೋಕುಮಾರ ಸ್ವಾಮಿಯನ್ನು ಮಹಿಳೆಯರು ಪುಟ್ಟಿಯಲ್ಲಿ ಹೊತ್ತುಕೊಂಡು ಈ ಭಾಗದ ಗ್ರಾಮಗಳ ಮನೆಗಳಿಗೆ ಪೂಜೆಗೆ ತೆರಳುತ್ತಾರೆ. ಜಿಗಳಿ, ಯಲವಟ್ಟಿ, ಕಮಲಾಪುರ, ಧೂಳೆಹೊಳೆ, ಹುಲಿಗಿನ ಹೊಳೆ, ಹೊಳೆಸಿರಿಗೆರೆ ಗ್ರಾಮಗಳಲ್ಲಿ ಮಹಿಳೆಯರಾದ ಪ್ರಮೀಳಮ್ಮ, ಚನ್ನಮ್ಮ, ನಿಂಗಮ್ಮ, ಮಂಜಮ್ಮ, ಶ್ವೇತಮ್ಮ, ಚೈತ್ರಮ್ಮ, ಯಲ್ಲಮ್ಮ, ಮಂಜಮ್ಮ ಈ ಕಾಯಕದಲ್ಲಿ ತೊಡಗಿದ್ದಾರೆ.

ಭೂಲೋಕದಲ್ಲಿ ಸುಖವಾಗಿ ಉಂಡುಟ್ಟು ಹೋದ ಗಣಪತಿ ಶಿವನಿಗೆ ಭೂಲೋಕದಲ್ಲಿ ಎಲ್ಲರೂ ಸುಖವಾಗಿದ್ದಾರೆ ಎಂದು ಹೇಳುತ್ತಾನೆ. ಗಣಪತಿ ಬೆನ್ನಲ್ಲೇ ಬಂದ ಜೋಕುಮಾರ ಭೂಲೋಕದಲ್ಲಿ ಏಳು ದಿನವಿದ್ದು, ರೈತರು ಮಳೆ ಇಲ್ಲದೆ, ಬೆಳೆ ಇಲ್ಲದೆ ರೋಧಿಸುತ್ತಿರುವುದನ್ನು ಕಂಡು ಶಿವನಿಗೆ ತಿಳಿಸುತ್ತಾನೆ. ಆಗ ಬೆಟ್ಟ ಗುಡ್ಡೆಗಳೆಲ್ಲ ಹಸಿರಾಗಿರುವಂತೆ ಶಿವನು ಮಳೆಯನ್ನು ಸುರಿಸುತ್ತಾನೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ತಿಗಣೆ ಮೊದಲಾದ ಕ್ರಿಮಿಗಳ ಹಾವಳಿ ತಪ್ಪಲೆಂದು, ದನಕರುಗಳು ಇದ್ದರೆ ಹೈನುಗಾರಿಕೆ ಹೆಚ್ಚಾಗಲಿ ಎಂದು, ಹೆಣ್ಣು ಮಕ್ಕಳು ಮೆಣಸಿನಕಾಯಿ ಎಣ್ಣೆ– ಬೆಣ್ಣೆ, ಉಪ್ಪು, ಕಾಳು– ಕಡಿಯನ್ನು ಜೋಕುಮಾರನಿಗೆ ನೀಡುವ ವಿಶಿಷ್ಟ ಸಂಪ್ರದಾಯ ಇದೆ.

ಪ್ರತಿಯಾಗಿ ಜೋಕುಮಾರನ ಹೊತ್ತು ತಂದ ಹೆಣ್ಣುಮಕ್ಕಳು ಅಂಬಲಿಯ ಪ್ರಸಾದದ ಜೊತೆಗೆ ಬೇವಿನ ಸೊಪ್ಪನ್ನು ಮನೆಯವರಿಗೆ ಕೊಡುವರು. ರೈತರು ಜೋಕುಮಾರನ ಬೇವಿನ ಸೊಪ್ಪನ್ನು ತೆಗೆದುಕೊಂಡು ಹೋಗಿ ತಮ್ಮ ಹೊಲದ ಬೆಳೆಗಳಿಗೆ ಚೆಲ್ಲುವರು. ಜೋಕುಮಾರನ ಬೇವಿನಸೊಪ್ಪನ್ನು ಚೆಲ್ಲಿದರೆ ಬೆಳೆಗಳಿಗೆ ಹುಳು ಮುಟ್ಟುವುದಿಲ್ಲವೆಂಬುದು ರೈತರ ನಂಬಿಕೆ. ದವಸ–ಧಾನ್ಯ ರಾಶಿ ಮಾಡುವಾಗ ಅದರಿಂದ, ‘ಹುಲುಸು’ ಜಾಸ್ತಿಯಾಗಿ ರಾಶಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.

ಏಳು ದಿನಗಳವರಿಗೆ ‘ಅಳಲು’ ಇರುತ್ತದೆ. ಇದಕ್ಕೆ ‘ಜೋಕುಮಾರನ ಅಳಲು’ ಎಂದು ಜನಪದರು ಕರೆಯುತ್ತಾರೆ.

ಏಳು ದಿನಗಳ ಕಾಲ ಮಹಿಳೆಯರು ಜೋಕುಮಾರನ ಹಾಡುಗಳನ್ನು ಹಾಡುತ್ತಾ ಮನೆಮನೆ ಪೂಜೆಗೆ ತೆರಳುತ್ತಾರೆ. ಜನಪದ ಹಾಡುಗಳು ಈ ಮೂಲಕ ಜೀವಂತಿಕೆ ಪಡೆದಿರುವುದೇ ಸಂತೋಷಕರ
ಕುಂದೂರು ಮಂಜಪ್ಪ ಹವ್ಯಾಸಿ ಬರಹಗಾರರು ಹೊಳೆ ಸಿರಿಗೆರೆ
ಮಳೆ ಬೆಳೆ ಸಮೃದ್ಧಿಯಿಂದ ಕೂಡಿರಲಿ ಎಂಬ ಸಂಕಲ್ಪದೊಂದಿಗೆ ಜೋಕುಮಾರ ಸ್ವಾಮಿಯನ್ನು ಹೊರುತ್ತೇವೆ. ಸಂಪ್ರದಾಯವನ್ನು ಶ್ರದ್ಧಾ ಭಕ್ತಿಯಿಂದ ಮುಂದುವರಿಸಿಕೊಂಡು ಹೋಗುವ ಕಾಯಕ ನಮ್ಮದು
ಪ್ರಮೀಳಮ್ಮ ಜೋಕುಮಾರ ಸ್ವಾಮಿ ಹಾಡುಗಾರ್ತಿ ಹೊಳೆ ಸಿರಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT