ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂ ಹೈಡ್‌ಔಟ್‌ನಲ್ಲಿ ಕರಾವಳಿಯ ಸವಿ

ಘಮಘಮಿಸುವ ಕುಚಲಕ್ಕಿ ಅನ್ನ, ಮೀನು ಸಾರು
Last Updated 17 ಡಿಸೆಂಬರ್ 2018, 13:50 IST
ಅಕ್ಷರ ಗಾತ್ರ

ದಾವಣಗೆರೆ: ಬೆಣ್ಣೆದೋಸೆ, ಮಂಡಕ್ಕಿ ನರ್ಗಿಸ್‌ಗೆ ಪ್ರಸಿದ್ಧವಾದ ದಾವಣಗೆರೆಯಲ್ಲಿ ಕರಾವಳಿಯ ಮೀನಿನ ಘಮಲು ಹರಡುತ್ತಿದೆ. ಮಂಗಳೂರಿನ ಕುಚಲಕ್ಕಿ ಅನ್ನ, ಮೀನು ಸಾರಿಗಾಗಿ ಜನ ಎಡತಾಕುತ್ತಿದ್ದಾರೆ.

ಪಿ.ಬಿ. ರೋಡ್‌ನಲ್ಲಿ ಅರುಣ ಚಿತ್ರಮಂದಿರ ಬಳಿಯ ಪಿಸಾಳೆ ಕಾಂಪೌಂಡ್‌ನಲ್ಲಿ ಇರುವ ನ್ಯೂ ಹೈಡ್‌ಔಟ್‌ ಹೋಟೆಲ್‌ ಈ ಸವಿಯನ್ನು ಉಣಬಡಿಸುತ್ತಿದೆ.

ಬಂಗ್ಡೆ, ‍ಪಾಂಫ್ರೆಟ್‌, ಅಂಜಲ್‌, ಸಿಗಡಿ (ಪ್ರಾನ್ಸ್), ಬೊಲಿಂಜಿಲ್‌ (ಬೆಳಂಜೆ) ಮುಂತಾದ ಸಮುದ್ರದ ಮೀನುಗಳ ಭಿನ್ನರುಚಿಯನ್ನು ಇಲ್ಲಿ ನೀಡಲಾಗುತ್ತಿದೆ. ರವಾ ಫ್ರೈ, ತವಾ ಫ್ರೈ, ಮಸಾಲ ಫ್ರೈ ಅಲ್ಲದೆ ಪುಳಿಮುಂಚಿ ಮಸಾಲ ಕೂಡ ಗ್ರಾಹಕರನ್ನು ಸೆಳೆಯುತ್ತಿದೆ. ಮಲೆನಾಡು ಮತ್ತು ಕರಾವಳಿ ಕಡೆಗಳಿಂದ ಬಂದು ನಗರದಲ್ಲಿ ನೆಲೆಸಿರುವವರು ಈ ಫ್ರೈಗಳಿಗಾಗಿ ಈ ಹೋಟೆಲ್‌ಗೆ ಬರುತ್ತಿದ್ದಾರೆ.

ಜತೆಗೆ ಮಂಗಳೂರು ಶೈಲಿಯ ಕೋರಿರೊಟ್ಟಿ, ಚಿಕನ್‌ ಸುಕ್ಕ, ಚಿಕನ್‌ ‍ಪುಳಿಮುಂಚಿ, ನೀರುದೋಸೆ, ಸಿಗಡಿಚಟ್ನಿ ಬಾಯಲ್ಲಿ ನೀರೂರಿಸುತ್ತವೆ.

ಇದಲ್ಲದೇ ಸ್ಥಳೀಯ ಶೈಲಿಯ ಧಮ್‌ ಬಿರಿಯಾನಿ, ಮಟನ್‌ ಕೈಮ, ಮಟನ್‌ ಮಸಾಲ, ಚಿಕನ್‌ ಮಸಾಲಗಳು, ಕಾಟ್ಲ ಫ್ರೈ ಸ್ಥಳೀಯರನ್ನು ಸೆಳೆಯುತ್ತಿವೆ. ಇದರೊಟ್ಟಿಗೆ ಕಬಾಬ್‌, ಲಾಲಿಪಾಪ್‌ ಇತರ ಸಾಮಾನ್ಯ ಐಟಂಗಳೂ ಇವೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಂತೋಷ್‌ ಹೆಗ್ಡೆ ಈ ಹೋಟೆಲ್‌ ನಡೆಸುತ್ತಿದ್ದರೆ, ಅವರ ಭಾವ ಸಂತೋಷ್‌ ಕರಾವಳಿ ಶೈಲಿಯ ಅಡುಗೆ ತಯಾರಿಸುತ್ತಾರೆ. ರಾಜಣ್ಣ ಅವರು ಸ್ಥಳೀಯ ಶೈಲಿಯ ಅಡುಗೆ ತಯಾರಕರಾಗಿದ್ದಾರೆ.

ಸಂತೋಷ್‌ ಹೆಗ್ಡೆ ದಾವಣಗೆರೆಯಲ್ಲಿ 12 ವರ್ಷಗಳಿಂದ ಇದ್ದು, ಮಂಗಳೂರು ಶೈಲಿಯ ಮಾಂಸಾಹಾರಿ ಊಟ ನೀಡಲು ಇತ್ತೀಚೆಗಷ್ಟೇ ನಿರ್ಧರಿಸಿದ್ದರು. ಗ್ರಾಹಕರು ಈ ರುಚಿಯನ್ನು ಸ್ವೀಕರಿಸಿದ್ದರಿಂದ ಹೆಗ್ಡೆ ಅವರ ಪ್ರಯತ್ನ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

‘ಮಂಗಳೂರು, ಉಡುಪಿಯ ಬಹಳಷ್ಟು ಮಂದಿ ದಾವಣಗೆರೆಯಲ್ಲಿ ವಿವಿಧ ಉದ್ಯೋಗದಲ್ಲಿ, ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಕುಚಲಕ್ಕಿ ಅನ್ನ, ಮೀನು ಸಾರು ನೀಡುತ್ತಿದ್ದೇವೆ ಎಂದು ಗೊತ್ತಾಗಿ ಅವರೇ ಹುಡುಕಿಕೊಂಡು ಬರುತ್ತಿದ್ದಾರೆ. ಇದರ ಜತೆಗೆ ಸ್ಥಳೀಯರ ರುಚಿಗೆ ಅನುಗುಣವಾದ ಅಡುಗೆಯನ್ನೂ ಮಾಡುತ್ತಿರುವುದರಿಂದ ಇಲ್ಲಿನವರಿಗೂ ಇಷ್ಟವಾಗಿದೆ’ ಎಂಬುದು ಸಂತೋಷ್‌ ಹೆಗ್ಡೆ ಅವರ ಅಭಿಪ್ರಾಯವಾಗಿದೆ.

‘ಬೆಳಿಗ್ಗಿನ ಉಪಾಹಾರ ಇರುವುದಿಲ್ಲ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10.30ರ ವರೆಗೆ ನಮ್ಮ ಹೋಟೆಲ್‌ ತೆರೆದಿರುತ್ತದೆ. ಅಲ್ಲದೇ ಹೋಮ್‌ ಡೆಲಿವರಿ, ಪಾರ್ಟಿ ಆರ್ಡರ್‌ಗಳನ್ನೂ ಮಾಡುತ್ತಿದ್ದೇವೆ’ ಎಂದು ಹೆಗ್ಡೆ ತಿಳಿಸಿದರು.

ಊಟಕ್ಕೆ 94486 36370 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT