ದಾವಣಗೆರೆ: ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿರುವ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಿವೆ. ಆ ಪೈಕಿ ಮಾಯಕೊಂಡ ಮೀಸಲು ಕ್ಷೇತ್ರದ ಆಕಾಂಕ್ಷಿಗಳಾಗಿದ್ದ ಕೆಲವರಿಗೆ ತೀವ್ರ ಅಸಮಾಧಾನವಾಗಿದೆ. ಮುಂದಿನ ನಡೆಯ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧರಿಸುವುದಾಗಿ ಹೇಳಿದ್ದಾರೆ.
ದಾವಣಗೆರೆ ದಕ್ಷಿಣದಿಂದ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಿಂದ ಅವರು ಮಾತ್ರವಲ್ಲದೇ ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವೀರಣ್ಣ, ಮುಸ್ಲಿಂ ಸಮುದಾಯದ ಇಬ್ರಾಹಿಂ ಕಲೀವುಲ್ಲಾ, ಸಾದಿಕ್ ಪೈಲ್ವಾನ್, ಸೈಯದ್ ಖಾಲಿದ್ ಅಹ್ಮದ್, ಮಹಮ್ಮದ್ ಇಕ್ಬಾಲ್ ಆಕಾಂಕ್ಷಿಗಳಾಗಿದ್ದರಾದರೂ, ಯಾರಲ್ಲೂ ಅಸಮಾಧಾನ ಕಂಡು ಬಂದಿಲ್ಲ.
ದಾವಣಗೆರೆ ಉತ್ತರ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಒಬ್ಬರೇ ಆಕಾಂಕ್ಷಿ ಆಗಿದ್ದರಿಂದ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲು ಯಾವುದೇ ಸಮಸ್ಯೆ ಇರಲಿಲ್ಲ.
ಎಸ್‌ಸಿ ಮೀಸಲು ಕ್ಷೇತ್ರ ಮಾಯಕೊಂಡಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಬಸವರಾಜ್ (ಬಸವಂತಪ್ಪ) ಹೆಸರು ಅಂತಿಮಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ 14 ಆಕಾಂಕ್ಷಿಗಳಿದ್ದರು. ಅದರಲ್ಲಿ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದುದೇ ಅಸಮಾಧಾನಕ್ಕೆ ಮೂಲವಾಗಿದೆ.
‘ಕ್ಷೇತ್ರದಾದ್ಯಂತ ಸಂಚರಿಸಿ ಕೆಲಸ ಮಾಡಿದ್ದೆ. ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ, ಸಿಕ್ಕಿಲ್ಲ. ಮುಂದೇನು ಮಾಡಬೇಕು ಎಂದು ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಭಿಮಾನಿಗಳು, ಕಾರ್ಯಕರ್ತರ ಜತೆಗೆ ಚರ್ಚಿಸಿ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು’ ಎಂದು ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು ನಾವು. ಆದರೆ, ಬೇರೆಯವರಿಗೆ ಟಿಕೆಟ್ ಸಿಕ್ಕಿದೆ. ಸಮಾನ ಮನಸ್ಕರ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಪ್ರತಿಕ್ರಿಯಿಸಿದ್ದಾರೆ.
‘ನಾಲ್ಕು ದಶಕಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. 8 ಬಾರಿ ಆಕಾಂಕ್ಷಿಯಾಗಿದ್ದೆ. ಈ ಬಾರಿ ದೆಹಲಿವರೆಗೆ ನನ್ನ ಹೆಸರು ಹೋಗಿತ್ತು. ಆಮೇಲೆ ಹೇಗೆ ತಪ್ಪಿತು ಎಂಬುದು ಗೊತ್ತಿಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ಎಂಬುದಷ್ಟೇ ನನ್ನ ಇಚ್ಛೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ. ಬಸವರಾಜ್ ತಿಳಿಸಿದ್ದಾರೆ.
ಇವರಲ್ಲದೇ ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ, ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಆನಂದಪ್ಪ ಎಚ್., ಇನ್ನೊಬ್ಬ ಆಕಾಂಕ್ಷಿಯಾಗಿದ್ದ ದುಗ್ಗಪ್ಪ ಎಚ್. ಅವರ ಮುಂದಿನ ನಡೆ ನಿಗೂಢವಾಗಿದ್ದು, ಕಾಂಗ್ರೆಸ್‌ನ ಜಿಲ್ಲಾ ನಾಯಕರಿಗೆ ತಲೆನೋವು ತಂದಿದೆ.
ಬಿ.ಎಚ್. ವೀರಭದ್ರಪ್ಪ, ವೀರೇಶ್ ನಾಯ್ಕ್ ಬಿ.ಎನ್., ರಾಘವೇಂದ್ರ ನಾಯ್ಕ್, ಕಾಶಿನಾಥ ಯಂಕನಾಯ್ಕ, ಎಲ್.ಕೆ. ನಾಯ್ಕ, ವಕೀಲ ಅನಂತನಾಯ್ಕ ಎನ್., ಚಂದ್ರಶೇಖರಪ್ಪ ಬಿ.ಜಿ. ಅವರು ಅರ್ಜಿ ಸಲ್ಲಿಸಿದ್ದರಾದರೂ ಟಿಕೆಟ್ ದೊರೆಯದೇ ನಿರಾಸೆಗೊಳಗಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.