ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸುಲಭ

ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿಕೆ
Last Updated 28 ಜನವರಿ 2023, 6:18 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಜಾವಾಣಿ’ಯಿಂದ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮತದಾರರ ಗುರುತಿನ ಚೀಟಿ, ಮತದಾನ ಮತ್ತು ಚುನಾವಣೆ ಸಂಬಂಧ ಓದುಗರಿಂದ ಹಲವು ಪ್ರಶ್ನೆಗಳು ಎದುರಾದವು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಸಮಾಧಾನದಿಂದಲೇ ಉತ್ತರಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದಿದ್ದರೆ ನಮೂನೆ– 6ರಲ್ಲಿ ಸೇರ್ಪಡೆಗೆ ಅವಕಾಶವಿದೆ. ಆಧಾರ್‌ ಕಾರ್ಡ್‌ ಹಾಗೂ ಇತರೆ ದಾಖಲೆಗಳ ಜೋಡಣೆಗೆ 6ಬಿ, ಹೆಸರು ತೆಗೆದುಹಾಕಲು ನಮೂನೆ–7 ಹಾಗೂ ತಿದ್ದುಪಡಿ, ಸ್ಥಳಾಂತರ ಅಥವಾ ಚುನಾವಣಾ ಗುರುತಿನ ಚೀಟಿ ಕಳೆದುಹೋಗಿದ್ದರೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ಲ್ಲಿ ವೋಟರ್ಸ್ ಹೆಲ್ಪ್‌ಲೈನ್ ಆ್ಯಪ್‌ನಲ್ಲಿಯೂ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

* ಆಮಿಷಕ್ಕೊಳಗಾಗದೇ ಮತದಾನ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಇವೆಯೇ?

– ಮಂಜುನಾಥ್ ಕೈದಾಳೆ, ದಾವಣಗೆರೆ

ಶಿವಾನಂದ ಕಾಪಶಿ: ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆ (ಸ್ವೀಪ್) ಚಟುವಟಿಕೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಸರು ಸೇರ್ಪಡೆ, ಹೆಸರು ತೆಗೆಯುವಿಕೆ, ಮತಗಟ್ಟೆಯ ಸೌಲಭ್ಯ, ವಿದ್ಯುನ್ಮಾನ ಮತಯಂತ್ರಗಳ ಕಾರ್ಯಾಚರಣೆ, ಎಲ್ಲರೂ ಕಡ್ಡಾಯವಾಗಿ ಮತದಾನ ಹಕ್ಕು ಚಲಾಯಿಸುವುದು, ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭಯವಾಗಿ ಮತದಾನ ಮಾಡುವ ಬಗ್ಗೆ ಬೀದಿ ನಾಟಕ, ರೇಡಿಯೊ ಕಾರ್ಯಕ್ರಮ, ಭಿತ್ತಿಪತ್ರಗಳು, ಸಂಚಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ನೈತಿಕ ಮತದಾನದ ಬಗ್ಗೆ ಸಾಮಾಜಿಕ ಕಳಕಳಿಯಿಂದ ಸಂಘ–ಸಂಸ್ಥೆಗಳು ಜಾಗೃತಿ ಮೂಡಿಸಬೇಕು.

* ನಮ್ಮ ಬೇಡಿಕೆಗಳು ಈಡೇರದಿದ್ದರೆ ಮತದಾನ ಏಕೆ ಮಾಡಬೇಕು?

ವಾಸಪ್ಪ, ಮಾಜಿ ಸೈನಿಕ, ಹೊನ್ನಾಳಿ

ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಲೇಬೇಕು. ವೈಯಕ್ತಿಕ ಅಸಮಾಧಾನದಿಂದ ಮತದಾನದಿಂದ ದೂರ ಉಳಿಯುವುದು ತಪ್ಪು.

* ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿದ್ದೇನೆ, ಚುನಾವಣಾ ಗುರುತಿನ ಚೀಟಿ ಬಂದಿಲ್ಲ. ಏನು ಮಾಡಬೇಕು?

– ಬಾಲರಾಜು, ಸರಸ್ವತಿನಗರ ಹಾಗೂ ದೇವರ ಬಸಪ್ಪ, ಚನ್ನಾಪುರ, ಚನ್ನಗಿರಿ ತಾಲ್ಲೂಕು

ನಿಮ್ಮ ಚುನಾವಣಾ ಗುರುತಿನ ಚೀಟಿ ಅಂಚೆ ಮೂಲಕವೇ ನಿಮ್ಮ ಮನೆಗೆ ಬರುತ್ತದೆ. ಒಂದು ವೇಳೆ ಮನೆಗೆ ಬಾರದೇ (ಅನ್‌ಡಿಲವರಿ) ಇದ್ದರೆ ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ನಿಮಗೆ ಕೊಡುತ್ತಾರೆ.

* ನಾವು ಕೂಲಿ ಮಾಡಿಕೊಂಡು ಬೇರೆ ಕಡೆ ವಾಸವಿದ್ದೇವೆ? ಚುನಾವಣೆ ದಿನ ಊರಿಗೆ ವಾಪಸ್‌ ಬಂದು ನೋಡಿದರೆ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲ ಎಂದು ಹೇಳಿದ್ದಾರೆ. ಈ ರೀತಿ ಆದರೆ ಏನು ಮಾಡುವುದು?

– ಸಿದ್ದಪ್ಪ, ಗೊಲ್ಲರಹಟ್ಟಿ, ದ್ಯಾಮಪ್ಪ, ಗಂಜಿಕಟ್ಟೆ, ತಿಪ್ಪೇಸ್ವಾಮಿ, ಮುಷ್ಟೂರು, ಜಗಳೂರು ತಾಲ್ಲೂಕು

ಉದ್ಯೋಗ ಅರಸಿ ತಾತ್ಕಾಲಿಕವಾಗಿ ವಲಸೆ ಹೋಗಿದ್ದರೆ ಪರ್ವಾಗಿಲ್ಲ. ಆದರೆ, ಸತತ ನಾಲ್ಕೈದು ವರ್ಷ ಬೇರೆ ಕಡೆ ನೆಲೆಸಿದ್ದರೆ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲಾಗುತ್ತದೆ. ಊರಲ್ಲೇ ಇರುವ ನಿಮ್ಮ ಕುಟುಂಬದವರಿಗೆ ಹೇಳಿ, ಹೆಸರನ್ನು ತೆಗೆದುಹಾಕದಂತೆ ನೋಡಿಕೊಳ್ಳಬೇಕು. ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಈಗಲೂ ಅವಕಾಶವಿದೆ. ಹತ್ತಿರದ ಅಂಗನವಾಡಿ ಹಾಗೂ ಶಾಲೆಗಳಲ್ಲಿ ವಿಚಾರಿಸಿ, ಬೂತ್‌ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ. ಮತದಾನದ ದಿವಸ ಬಂದು ಕೇಳಿದರೆ ಏನೂ ಮಾಡಲು ಆಗುವುದಿಲ್ಲ. ಈಗಲೇ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಿ.

* ಹಲವು ಮತದಾರರ ಹೆಸರನ್ನು ಬಿಎಲ್ಒಗಳು ಡಿಲೀಟ್ ಮಾಡಿದ್ದಾರೆ. ಪರಿಹಾರ ಸೂಚಿಸಿ?

– ಶಿವು, ವೆಂಕಟೇಶ್, ಹೊಸಕೆರೆ, ಬಸವಾಪಟ್ಟಣ

ಬಿಎಲ್‌ಒಗಳು ಸುಮ್ಮನೆ ಹೆಸರು ತೆಗೆಯುವುದಿಲ್ಲ. ಒಬ್ಬ ಮತದಾರರ ಹೆಸರು ಎರಡು ಕಡೆ ಇದ್ದಾಗ ತೆಗೆದು ಹಾಕುತ್ತಾರೆ. ಬಿಟ್ಟು ಹೋಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಹೆಸರು ಬೇರೆ ವಾರ್ಡ್‌ಗೆ ಸ್ಥಳಾಂತರಗೊಂಡಿದ್ದರೆ ಪರಿಶೀಲಿಸಲಾಗುವುದು.

* ಚುನಾವಣೆ ಸಂದರ್ಭದಲ್ಲಿ ಆಸೆ–ಆಮಿಷಗಳಿಗೆ ಏಕೆ ಬಲಿಯಾಗಬಾರದು?

– ದುರ್ಗಪ್ಪ, ಚನ್ನಗಿರಿ

ಆಸೆ–ಆಮಿಷಗಳಿಗೆ ಒಳಗಾಗುವುದು ಅನೈತಿಕ. ಮತದಾನಕ್ಕೆ ಬೆಲೆ ಹೇಗೆ ಬರುತ್ತದೆ? ಇದು ಕಾನೂನು ಪ್ರಕಾರ ತಪ್ಪು, ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ.

* ತಾಯಿ ನಿಧನರಾಗಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ಏನು ಮಾಡಬೇಕು?

– ಸಂದೀಪ್, ಜಗಳೂರು

ಹತ್ತಿರದ ಮತಗಟ್ಟೆ ಅಧಿಕಾರಿ ಬಳಿ ನಮೂನೆ 7ರಲ್ಲಿ ಅರ್ಜಿ ಕೊಟ್ಟರೆ ಹೆಸರು ತೆಗದುಹಾಕುತ್ತಾರೆ. ತಹಶೀಲ್ದಾರ್ ಇಲ್ಲವೇ ಗ್ರಾಮ ಲೆಕ್ಕಿಗರ ಬಳಿ ಕೊಟ್ಟರೆ ತೆಗೆದು ಹಾಕುತ್ತಾರೆ.

* ಕಾಲೇಜುಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಏನು ಕಾರ್ಯಕ್ರಮಗಳಿವೆ?

– ಹೇಮಾವತಿ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ದಾವಣಗೆರೆ

ಕ್ಷೇತ್ರ ಶಿಕ್ಷಣಾಧಿಕಾರು (ಬಿಇಒ)ಗಳನ್ನು ಚುನಾವಣಾ ಆಯೋಗ ಡೆಡಿಕೇಟೆಡ್ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿರುತ್ತದೆ. ಕಾಲೇಜಿನಲ್ಲಿ ಎಲೆಕ್ಟ್ರೋಲ್‌ ಲಿಟರಸಿ ಕ್ಲಬ್‌ ಮಾಡಿಕೊಂಡು, ಮಕ್ಕಳನ್ನು ಗುಂಪುಗೂಡಿಸಿ ಚುನಾವಣೆ ಬಗ್ಗೆ ಚರ್ಚಿಸಬೇಕು. ಏಕೆ ಮತದಾನ ಮಾಡಬೇಕು ಎಂಬುದು ಅವರಿಗೆ ಗೊತ್ತಾಗುತ್ತದೆ. ಬಿಇಒ ಸಂಪರ್ಕಿಸಿ, ಜಾಗೃತಿ ಮೂಡಿಸಿ.

* ವಿಳಾಸ ಬದಲಾಗಿದ್ದರೆ ಯಾವ ದಾಖಲೆಗಳನ್ನು ಕೊಟ್ಟು ಸರಿಪಡಿಸಿಕೊಳ್ಳಬಹುದು?

ಜಾಕೀರ್ ಹುಸೇನ್, ದಾವಣಗೆರೆ

ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಬಹುದು. ಬ್ಯಾಂಕ್ ಪಾಸ್‌ಬುಕ್‌, ಪಡಿತರ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಪತ್ರ, ಆದಾಯ ತೆರಿಗೆ ಪಾವತಿ ಚೀಟಿ, ಬಾಡಿಗೆ ಕರಾರು ಪತ್ರ, ಇತ್ತೀಚಿನ ನೀರು, ಟೆಲಿಫೋನ್, ವಿದ್ಯುತ್, ಗ್ಯಾಸ್‌ ಬಿಲ್‌ಗಳು, ಪೋಸ್ಟ್ ಆಫೀಸಿನಿಂದ ಬಂದ ವಿಳಾಸದ ಮಾಹಿತಿ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು.

* ಚುನಾವಣೆ ಘೋಷಣೆಗೂ ಮುನ್ನವೇ ಅನಧಿಕೃತ ಫ್ಲೆಕ್ಸ್‌ಗಳ ಭರಾಟೆ ಜೋರಾಗಿದೆ. ಶ್ರೀಮಂತ ಅಭ್ಯರ್ಥಿಗಳು ಹೆಚ್ಚಿನ ಹಣ ಚೆಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸಾಮಾನ್ಯ ಅಭ್ಯರ್ಥಿಗಳ ಪಾಡೇನು?

– ಮಂಜುನಾಥ್ ಕೈದಾಳೆ, ದಾವಣಗೆರೆ

‘ಚುನಾವಣೆ ಅಧಿಸೂಚನೆ ಹೊರಡಿಸಿ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲು ಮಾಡುವ ಯಾವುದೇ ಖರ್ಚು–ವೆಚ್ಚ ನಮ್ಮ ನಿಯಂತ್ರಣಕ್ಕೆ ಬರುವುದಿಲ್ಲ. ಅಧಿಸೂಚನೆ ಹೊರಡಿಸಿದ ಬಳಿಕ ಎಲ್ಲವನ್ನೂ ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ. ಅನಧಿಕೃತ ಫ್ಲೆಕ್ಸ್‌ಗಳನ್ನು ನಿಯಂತ್ರಿಸುವುದು ಆಯಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ’.

* ಚುನಾವಣೆ ಘೋಷಣೆಗೂ ಮುನ್ನವೇ ಅನಧಿಕೃತ ಫ್ಲೆಕ್ಸ್‌ಗಳ ಭರಾಟೆ ಜೋರಾಗಿದೆ. ಶ್ರೀಮಂತ ಅಭ್ಯರ್ಥಿಗಳು ಹೆಚ್ಚಿನ ಹಣ ಚೆಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸಾಮಾನ್ಯ ಅಭ್ಯರ್ಥಿಗಳ ಪಾಡೇನು?

– ಮಂಜುನಾಥ್ ಕೈದಾಳೆ, ದಾವಣಗೆರೆ

‘ಚುನಾವಣೆ ಅಧಿಸೂಚನೆ ಹೊರಡಿಸಿ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲು ಮಾಡುವ ಯಾವುದೇ ಖರ್ಚು–ವೆಚ್ಚ ನಮ್ಮ ನಿಯಂತ್ರಣಕ್ಕೆ ಬರುವುದಿಲ್ಲ. ಅಧಿಸೂಚನೆ ಹೊರಡಿಸಿದ ಬಳಿಕ ಎಲ್ಲವನ್ನೂ ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ. ಅನಧಿಕೃತ ಫ್ಲೆಕ್ಸ್‌ಗಳನ್ನು ನಿಯಂತ್ರಿಸುವುದು ಆಯಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ’.

ಮುಖ್ಯಾಂಶಗಳು

* ಆನ್‌ಲೈನ್ ಅಪ್‌ಡೇಟ್ ಮಾಡಲು Voter Helpline app ಡೌನ್‌ಲೋಡ್ ಮಾಡಿಕೊಳ್ಳಿ

* ಸಮಸ್ಯೆಗಳಿಗೆ ಟೋಲ್ ಫ್ರೀ ಸಂಖ್ಯೆ 1950ಗೆ ಕರೆ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT