ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: ಸಂತ್ರಸ್ತರಿಗೆ ಬೇಕು ಶಾಶ್ವತ ಪರಿಹಾರ

ಹೊನ್ನಾಳಿಯ ಬಾಲರಾಜ್ ಘಾಟ್‌ಗೆ ತಪ್ಪದ ಪ್ರವಾಹ ಭೀತಿ
Last Updated 22 ಜುಲೈ 2022, 4:31 IST
ಅಕ್ಷರ ಗಾತ್ರ

ಹೊನ್ನಾಳಿ: ಪ್ರತಿ ವರ್ಷ ತುಂಗಭದ್ರಾ ನದಿಯ ಪ್ರವಾಹ ಏರಿದಂತೆಲ್ಲ ನಗರದ ಬಾಲರಾಜ್‌ ಘಾಟ್‌ನ ನಿವಾಸಿಗಳ ಹೃದಯದ ಬಡಿತವೂ ಹೆಚ್ಚುತ್ತದೆ. ಮಳೆಗಾಲದಲ್ಲಿ ತುಂಗಾ ಹಾಗೂ ಭದ್ರಾ ಜಲಾಶಯಗಳಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದಾಗ ಇಲ್ಲಿನ 23 ಮನೆಗಳಿಗೆ ನೀರು ನುಗ್ಗುತ್ತಿದೆ. ಮಳೆಗಾಲ ಬಂದಾಗ ಇಲ್ಲಿನ ನಿವಾಸಿಗಳಿಗೆ ‘ನೆರೆ’ಯು ಬರೆ ಹಾಕುತ್ತಿದೆ.

ಕೂಲಿಕಾರ್ಮಿಕರು, ಮಂಡಕ್ಕಿ ಮಾರುವವರು, ಬೀದಿ ವ್ಯಾಪಾರಿಗಳು ಬಾಲರಾಜ್‌ ಘಾಟ್‌ನ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ತುಂಗಭದ್ರಾ ನದಿಗೆ ಪ್ರವಾಹ ಬಂದಾಗ ಇಲ್ಲಿನ ಬಡವರ ಬದುಕು ಮೂರಾಬಟ್ಟೆಯಾಗುತ್ತದೆ.

‘1994–95ರಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿದಾಗ ಈ ಭಾಗದ ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದವು. ಆಗಿನ ಶಾಸಕ ಡಿ.ಬಿ. ಗಂಗಪ್ಪ ಅವರು 1ನೇ ವಾರ್ಡ್‌ನಲ್ಲಿ ಹಾಗೂ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು 2ನೇ ವಾರ್ಡ್‌ನಲ್ಲಿ ಆಶ್ರಯ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಆ ಸಂದರ್ಭದಲ್ಲೇ ಬಾಲರಾಜ್‌ ಘಾಟ್‌ ಪ್ರದೇಶವನ್ನು ‘ನಿಷೇಧಿತ ಪ್ರದೇಶ’ ಎಂದುಆಗಿನ ಉಪವಿಭಾಗಾಧಿಕಾರಿ ಘೋಷಿಸಿದ್ದರು. ಹೀಗಿದ್ದರೂ ಸ್ಥಳೀಯ ಆಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆಪುರಸಭೆ ಸದಸ್ಯ ಧರ್ಮಪ್ಪ.

ತುಂಗಭದ್ರಾ ಬಡಾವಣೆಯಲ್ಲಿ ಆಶ್ರಯ ಮನೆ ಪಡೆದುಕೊಂಡವರ ಪೈಕಿ ಕೆಲವರು ಬಾಲರಾಜ್ ಘಾಟ್ ಅನ್ನು ಬಿಟ್ಟು ಹೋಗಲಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.

‘ಪ್ರವಾಹ ಬಂದಾಗ ತಾಲ್ಲೂಕು ಆಡಳಿತದ ಸೂಚನೆಯಂತೆ ಮನೆಯ ಸಾಮಾನುಗಳನ್ನು ಕಟ್ಟಿಕೊಂಡು ಕಾಳಜಿ ಕೇಂದ್ರಕ್ಕೆ ಹೋಗಬೇಕಾಗುತ್ತಿದೆ. ಈ ವೇಳೆ ಮಂಚ, ಕಪಾಟುಗಳನ್ನು ಸಾಗಿಸುವುದು ಕಷ್ಟದ ಕೆಲಸ’ ಎಂದು ಇಲ್ಲಿನ ನಿವಾಸಿ, ಅಂಗವಿಕಲ ಅಬ್ದುಲ್ ಮತ್ತು ಅವರ ಪತ್ನಿ ನಾಜೀಮಾ ‘ಪ್ರಜಾವಾಣಿ’ ಎದುರುಅಳಲು ತೋಡಿಕೊಂಡರು.

ಪ್ರವಾಹ ಬಂದಾಗ ಎದುರಾಗುವ ಸಂಕಷ್ಟಗಳನ್ನು ಹೇಳಿಕೊಂಡ ಬಾರ್ ಬಿಲ್ಡಿಂಗ್ ಕೆಲಸ ಮಾಡುವ ಮಹಮ್ಮದ್‌ ಅಲಿ, ಯೂಸುಫ್ ಅಲಿ, ಸೈಯದ್ ಜಾಫರ್, ಮಂಡಕ್ಕಿ ಮಾರುವ ಸೈಯದ್ ಶಫಿವುಲ್ಲಾ ಅವರು, ‘ಪ್ರವಾಹ ಬಂದಾಗ ಕಾಳಜಿ ಕೇಂದ್ರಕ್ಕೆ ನಮ್ಮನ್ನು ಕಳುಹಿಸಿಕೊಡುವ ಬದಲು, ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸುತ್ತಾರೆ.

‘ಪ್ರತಿ ವರ್ಷ ಪ್ರವಾಹ ಬಂದಾಗ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಭೇಟಿ ನೀಡಿ ಸಮಾಧಾನ ಹೇಳುತ್ತಿದ್ದಾರೆಯೇ ಹೊರತು, ಇನ್ನೂ ಶಾಶ್ವತ ಪರಿಹಾರ ಕೊಡುವ ಕೆಲಸ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಪಟ್ಟಣ ಪಂಚಾಯಿತಿಯ ಅಧಿಕಾರಿಗಳು, ಸದಸ್ಯರು ಈ ಹಿಂದೆ ಇಲ್ಲಿ ಮನೆ ಕಟ್ಟಿಕೊಳ್ಳಲು ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಪರವಾನಗಿ ಹಾಗೂ ಅನುದಾನ ಕೊಟ್ಟಿದ್ದಾರೆ. ಹೀಗಾಗಿ ಜನ ಇಲ್ಲಿ ಮತ್ತೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ’ ಎಂದು ದೂರುತ್ತಾರೆ ಬಿರಿಯಾನಿ ನಜೀರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT