ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರೈತರು, ವ್ಯಾಪಾರಿಗಳಿಗೆ ತಪ್ಪದ ಬವಣೆ

ಪುಷ್ಪ ಹರಾಜು ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆ
Last Updated 8 ಏಪ್ರಿಲ್ 2022, 6:05 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಭಾರತ್ ಕಾಲೊನಿಯ ಪುಷ್ಪ ಹರಾಜು ಕೇಂದ್ರದಲ್ಲಿ ಪುಷ್ಪಗಳೇನೋ ನಳನಳಿಸುತ್ತಿವೆ. ಆದರೆ, ಕೇಂದ್ರವು ಕಾರ್ಯಾರಂಭಿಸಿ ಒಂದೂವರೆ ವರ್ಷ ಕಳೆದರೂ ಸೂಕ್ತ ಸಾರಿಗೆ ಸೌಲಭ್ಯ, ಕುಡಿಯುವ ನೀರು, ವಿದ್ಯುತ್‌ ದೀಪ, ನೆರಳಿನ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಲ್ಲ. ರೈತರು, ವ್ಯಾಪಾರಿಗಳ ಬವಣೆ ಹೇಳತೀರದಾಗಿದೆ.

ಈ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಹಾಗೂ ಹಳೆ ಬಸ್‌ನಿಲ್ದಾಣದ ಸಮೀಪ ಸಗಟು ಹೂವಿನ ವ್ಯಾಪಾರ ನಡೆಯುತ್ತಿತ್ತು. ಸಂಚಾರ ದಟ್ಟಣೆ ನಿಯಂತ್ರಿಸಲು, ಒಂದೇ ಸೂರಿನಡಿ ಹೂವು ಮಾರಾಟ ಮಾಡುವುದರಿಂದ ರೈತರು, ಖರೀದಿದಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹ 2.50 ಕೋಟಿ ವೆಚ್ಚದಲ್ಲಿ ಪುಷ್ಪ ಹರಾಜು ಕೇಂದ್ರ ನಿರ್ಮಿಸಲಾಗಿದೆ.

ಆದರೆ, ಕೇಂದ್ರವು ನಗರದ ಕೇಂದ್ರ ಭಾಗದಿಂದ ದೂರ ಎಂಬ ಕಾರಣಕ್ಕೆ ಆರಂಭದಲ್ಲಿ ಹೂವಿನ ವ್ಯಾಪಾರಿಗಳು ಬಂದಿರಲಿಲ್ಲ. ಪುಷ್ಪ ಹರಾಜು ಕೇಂದ್ರದಲ್ಲಿ ವಹಿವಾಟು ನಡೆಸುವುದಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ತೀರ್ಪು ವ್ಯಾಪಾರಿಗಳ ಪರವಾಗದೇ ಸರ್ಕಾರದ ಪರ ಬಂದಿದ್ದರಿಂದ ವ್ಯಾಪಾರಿಗಳಿಗೆ ನೋಟಿಸ್‌ ನೀಡಿ ಪಿಬಿ ರಸ್ತೆಯಲ್ಲಿರುವ ರೈತ ಭವನ (ತಾಲ್ಲೂಕು ಕಚೇರಿ) ಪಕ್ಕದಲ್ಲಿದ್ದ ಮಳಿಗೆಗಳಿಂದ ಪುಷ್ಪ ಹರಾಜು ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ.

‘ಪ್ರತಿದಿನ ರಾತ್ರಿ 12ರಿಂದ ಬೆಳಿಗ್ಗೆ 6 ಗಂಟೆವರೆಗೆ ಕಟ್ಟಿದ ಹೂವಿನ ವ್ಯಾಪಾರ ನಡೆಯುತ್ತದೆ. ಕಟ್ಟಿದ ಹೂವನ್ನು ಶಿವಮೊಗ್ಗ, ಭದ್ರಾವತಿ, ಉಡುಪಿ, ಮಂಗಳೂರು, ಬೆಳ್ತಂಗಡಿ, ಕಾರವಾರ, ರಾಯಚೂರು, ಸಿಂದಗಿ, ಭಟ್ಕಳ, ಹೊನ್ನಾವರ, ಶಿರಸಿ ಮುಂತಾದ ಪ್ರದೇಶಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೇ ಈ ಪ್ರದೇಶಗಳ ವ್ಯಾಪಾರಸ್ಥರೂ ನೇರವಾಗಿ ಕೇಂದ್ರಕ್ಕೆ ಬಂದು ಖರೀದಿಸಿ ಹೋಗುತ್ತಾರೆ. ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಬಿಡಿ ಹೂವಿನ ವ್ಯಾಪಾರ ನಡೆಯುತ್ತದೆ. ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ತುಮಕೂರು., ಹೂವಿನಹಡಗಲಿ, ಹರಪನಹಳ್ಳಿ ಇತರ ಪ್ರದೇಶಗಳಿಂದ ದುಂಡುಮಲ್ಲಿಗೆ, ನಂದಿ ಮೊಗ್ಗು, ನಂದಿ ಬಟ್ಟಲು, ಸುಗಂಧರಾಜ, ಸೇವಂತಿ, ಕನಕಾಂಬರ, ತಾವರೆ, ಗುಲಾಬಿ, ಕಾಕಡ, ಕಣಗಲು, ಸೂಜಿ ಮಲ್ಲಿಗೆ, ಡೆಕೊರೇಷನ್‌ ಹೂಗಳನ್ನು ರೈತರು ಕೇಂದ್ರಕ್ಕೆ ತರುತ್ತಾರೆ. ಹಗಲಿಗಿಂತ ರಾತ್ರಿ ವಹಿವಾಟೇಜೋರು. ಕೇಂದ್ರವು ನಗರದಿಂದ ದೂರದಲ್ಲಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಆಟೊದವರು ಹೆಚ್ಚುವರಿ ಹಣ ಕೇಳುತ್ತಾರೆ. ನಾವೂ ಬೇರೆ ಊರುಗಳಿಗೆ ಹೂವುಗಳನ್ನು ಬಸ್‌ ಮೂಲಕ ಕಳುಹಿಸಬೇಕೆಂದರೆ ಆಟೊಗಳನ್ನೇ ಆಧರಿಸಬೇಕು. ರೈತರು, ವ್ಯಾಪಾರಿಗಳು ಮತ್ತು ನಮಗೆ ಸಾಗಣೆ ವೆಚ್ಚದ ಹೊರೆಯಾಗಿದ್ದು, ಏನೂ ಉಳಿಯುವುದಿಲ್ಲ. ಕೇಂದ್ರಕ್ಕೆ ಬರುವ ರೈತರು, ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ’ ಎನ್ನುತ್ತಾರೆ ಮಾಯಾಂಬಿಕ ಫ್ಲವರ್‌ ಸ್ಟಾಲ್‌ನ ವೈ.ಜಿ. ಸಿದ್ದೇಶ್‌.

‘ಹೂವಿನ ವ್ಯಾಪಾರಿಗಳನ್ನು ಕೇಂದ್ರಕ್ಕೆ ಸ್ಥಳಾಂತರಗೊಳಿಸುವ ಸಂದರ್ಭದಲ್ಲಿ ಮೂರು ತಿಂಗಳುಗಳ ಒಳಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಕೇಂದ್ರಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಬೀದಿದೀಪಗಳು ಇದ್ದರೂ ಒಂದೂ ಉರಿಯುವುದಿಲ್ಲ. ಕಗ್ಗತ್ತಲಲ್ಲಿ ನಡುರಾತ್ರಿ ಕೇಂದ್ರಕ್ಕೆ ಬರುವ ನಮಗೆ ಸೂಕ್ತ ರಕ್ಷಣೆ ಇಲ್ಲ. ಕುಡಿಯುವ ನೀರು ಇಲ್ಲ. ಶೌಚಾಲಯವಿದ್ದರೂ ನಿರ್ವಹಣೆ ಇಲ್ಲದ ಕಾರಣ ಆಗಾಗ ಕಟ್ಟಿಕೊಳ್ಳುತ್ತಿರುತ್ತದೆ. ಕ್ಯಾಂಟೀನ್‌ ಬಂದ್‌ ಆಗಿದ್ದು, ದೂರದ ಊರುಗಳಿಂದ ಬರುವ ರೈತರು, ವ್ಯಾಪಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಊಟ, ತಿಂಡಿಗಾಗಿ ಮತ್ತೆ ನಗರಕ್ಕೆ ಬರಬೇಕಾದ ಸ್ಥಿತಿ ಇದೆ. ಕೋಲ್ಡ್‌ ಸ್ಟೋರೇಜ್‌ ಸುಸ್ಥಿತಿಯಲ್ಲಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ನಮ್ಮ ಕಷ್ಟ ಅವರಿಗೆ ಅರಿವಾಗುತ್ತಿಲ್ಲ. ಪಿ.ಬಿ. ರಸ್ತೆಯಲ್ಲಿ ಸೂಕ್ತವಾದ ಸ್ಥಳವನ್ನು ಗುರುತಿಸಿ ಕೇಂದ್ರವನ್ನು ಅಲ್ಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಸಗಟು ಹೂವಿನ ವ್ಯಾಪಾರಿಗಳ ಸಮಿತಿ ಅಧ್ಯಕ್ಷ ವಿ. ಚಂದ್ರಶೇಖರ್‌.

‘ದೂರ ದೂರದ ಊರುಗಳಿಂದ ಹೆಚ್ಚಿನ ರೈತರು ಇಲ್ಲಿಗೆ ಹೂವನ್ನು ತರುತ್ತಾರೆ. ಆದರೆ, ಅವರ ಅಭಿಪ್ರಾಯವನ್ನೇ ಪಡೆಯದೆ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ಮೊದಲು ಬಸ್‌ನಿಲ್ದಾಣಕ್ಕೆ ಸಮೀಪದಲ್ಲಿ ಕೇಂದ್ರ ಇದ್ದಿದ್ದರಿಂದ ಸಾಗಣೆ ಕಷ್ಟವಾಗಿರಲಿಲ್ಲ. ಇಂದು ಕೇಂದ್ರಕ್ಕೆ ಹೂವನ್ನು ತರಬೇಕೆಂದರೆ ಆಟೊವನ್ನು ಹಿಡಿಯಬೇಕು. ಕೇಂದ್ರವು ಹೊರವಲಯದಲ್ಲಿರುವುದರಿಂದ ಕೆಲ ಆಟೊದವರು ಬರಲು ನಿರಾಕರಿಸುತ್ತಾರೆ. ಮತ್ತೆ ಕೆಲವರು ಸರಿರಾತ್ರಿಯಲ್ಲಿ ವಾಪಸ್‌ ಬರುವಾಗ ಬೇರೆ ಬಾಡಿಗೆ ಸಿಗುವುದಿಲ್ಲವೆಂದು ₹ 150, ₹ 200 ಬಾಯಿಗೆ ಬಂದತೆ ಹಣ ಕೇಳುತ್ತಾರೆ. ಸಾವಿರಾರು ರೂಪಾಯಿ ವ್ಯಯಿಸಿ ಕಷ್ಟಪಟ್ಟು ಬೆಳೆದ ಹೂವಿನ ಸಾಗಣೆ ವೆಚ್ಚವೇ ಅಧಿಕವಾದರೆ ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಚನ್ನಗಿರಿ ತಾಲ್ಲೂಕಿನ ಭೀಮನೆರೆ ರೈತ ಎಚ್‌.ಆರ್‌. ಪಟೇಲ್‌.

ಮಹಿಳೆಯರಿಗೇ ಕಡುಕಷ್ಟ

ರೈತ ಮಹಿಳೆಯರೂ ರಾತ್ರಿ ವೇಳೆ ಕೇಂದ್ರಕ್ಕೆ ಹೂವನ್ನು ತರುತ್ತಾರೆ. ಅಲ್ಲದೇ ನಗರದ ವಿವಿಧ ಭಾಗಗಳಿಂದಲೂ ಮಹಿಳಾ ಹೂವಿನ ವ್ಯಾಪಾರಿಗಳು ಕೇಂದ್ರಕ್ಕೆ ಬಂದು ಕಟ್ಟಿದ ಇಲ್ಲವೇ ಬಿಡಿ ಹೂವನ್ನು ಖರೀದಿಸಿ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಈ ಪೈಕಿ ವೃದ್ಧೆಯರು, ವಿಧವೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಇವರು ಕೇಂದ್ರಕ್ಕೆ ಬಂದು ಹೋಗಲು ಸೂಕ್ತ ರಕ್ಷಣೆಯಾಗಲೀ, ವಿಶ್ರಾಂತಿ ಪಡೆಯಲು ಕೊಠಡಿಯಾಗಲೀ ಇಲ್ಲ.

‘ಯಾವುದೋ ಮೂಲೆಯಲ್ಲಿ ಕೇಂದ್ರ ಇರುವುದರಿಂದ ಕತ್ತಲಲ್ಲಿ ಬರಲು ಹೆದರಿಕೆಯಾಗುತ್ತದೆ. ಹಲವು ವರ್ಷಗಳಿಂದ ಹೂವಿನ ವ್ಯಾಪಾರದಿಂದಲೇ ಜೀವನ ಸಾಗಿಸುತ್ತಿದ್ದು, ಈಗಲೂ ಅನಿವಾರ್ಯವಾಗಿ ಮಾಡುತ್ತಿದ್ದೇವೆ. ಬಹಳ ಜನ ಹೆದರಿ ಈ ಕೆಲಸವನ್ನೇ ಬಿಟ್ಟಿದ್ದಾರೆ. ಹಬ್ಬದ ಸಂದರ್ಭಗಳಲ್ಲಿ ಮಾತ್ರ ವ್ಯಾಪಾರ ಮಾಡುತ್ತಾರೆ. ಮಹಿಳೆಯರ ಹಿತದೃಷ್ಟಿಯಿಂದ ಮುಖ್ಯರಸ್ತೆಗೆ ಕೇಂದ್ರವನ್ನು ಸ್ಥಳಾಂತರಿಸಬೇಕು’ ಎಂದು ಮನವಿ ಮಾಡುತ್ತಾರೆ ನಿಟುವಳ್ಳಿಯ ಲಕ್ಷ್ಮೀದೇವಿ ಮತ್ತು ನಿಂಗಮ್ಮ.

ಪುಷ್ಪ ಕೇಂದ್ರದಲ್ಲಿ ಆರೋಗ್ಯ ಕೇಂದ್ರ

ಸಗಟು ಹೂವಿನ ವ್ಯಾಪಾರಕ್ಕೆ ಸೀಮಿತವಾಗಿರಬೇಕಿದ್ದ ಕೇಂದ್ರದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಠಡಿಯನ್ನು ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ಸಗಟು ಹೂವಿನ ವ್ಯಾಪಾರಿಗಳ ಸಮಿತಿ ಅಧ್ಯಕ್ಷ ವಿ. ಚಂದ್ರಶೇಖರ್‌.

ಕೋವಿಡ್‌ ಸಂದರ್ಭದಲ್ಲಿ ಕೊರೊನಾ ಸೋಂಕಿತರು ಅಲ್ಲಲ್ಲಿ ಕೂರುತ್ತಿದ್ದರಿಂದ ತುಂಬಾ ತೊಂದರೆಯನ್ನು ಎದುರಿಸಬೇಕಾಯಿತು. ಅಧಿಕಾರಿಗಳು ತಮ್ಮ ಮನಬಂದಂತೆ ನಡೆದುಕೊಳ್ಳುವ ಪ್ರವೃತ್ತಿಯನ್ನು ಕೈಬಿಟ್ಟು ಆರೋಗ್ಯ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಅವರು.

ಕೇಂದ್ರದ ಮುಂಭಾಗದಲ್ಲಿರುವ ಜಾಗದಲ್ಲಿ ತಗಡಿನ ಮಳಿಗೆಗಳನ್ನು ನಿರ್ಮಿಸಿದ್ದು, ಅಲ್ಲಿ ವ್ಯಾಪಾರ ನಡೆಸುವಂತೆ ಹೇಳುತ್ತಾರೆ. ಬಿಸಿಲ ಜಳಕ್ಕೆ ಹೂಗಳು ಬಾಡುವುದರಿಂದ ಅಲ್ಲಿ ವ್ಯಾಪಾರ ನಡೆಸಲು ಬರುವುದಿಲ್ಲ. ಜಾಗದ ಕೊರತೆಯ ಕಾರಣ ಹಬ್ಬದ ಸಂದರ್ಭಗಳಲ್ಲಿ ಫ್ಲೈಓವರ್‌ ಬಳಿ ಬಂದು ವ್ಯಾಪಾರ ನಡೆಸಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಅವರು.

***

ಪುಷ್ಪ ಹರಾಜು ಕೇಂದ್ರಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ. ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಚೌಕಿ ನಿರ್ಮಾಣ, ಸಿಸಿಟಿವಿ ಕ್ಯಾಮೆರಾ ಅಳವಡಿಸಲು, ಎಟಿಎಂ ಪಾಯಿಂಟ್‌, ಕೇಂದ್ರದ ಆವರಣಕ್ಕೆ ಚಾವಣಿ, ರೈತರು ತಂಗಲು ವಿಶ್ರಾಂತಿ ಕೊಠಡಿ, ಮೊಬೈಲ್‌ ವಾಹನ, ಹೆಚ್ಚುವರಿ ಮಳಿಗೆಗಳನ್ನು ನಿರ್ಮಿಸುವ ಯೋಜನೆ ಇದೆ.

ಡಾ.ಡಿ. ಗಿರಿನಾಯ್ಕ, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT