ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಗಿರಿ | ಬರಿದಾದ ಕೆರೆ: ಸೊರಗಿದ ಅಂದ

ಚನ್ನಗಿರಿ ಪಟ್ಟಣದ ಹೃದಯಭಾಗದಲ್ಲಿರುವ ಕೆರೆಯ ಸ್ಥಿತಿ
Published 16 ಜೂನ್ 2024, 8:05 IST
Last Updated 16 ಜೂನ್ 2024, 8:05 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 13ರ ಹೃದಯ ಭಾಗದಲ್ಲಿರುವ ಪುರಾತನ ಕೆರೆ ನೀರಿಲ್ಲದೆ ಸಂಪೂರ್ಣ ಬರಿದಾಗಿದೆ. ಇದರಿಂದ ಕೆರೆಯ ಅಂದ ಕೂಡಾ ಸೊರಗಿದೆ.

ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಈ ಕೆರೆಯನ್ನು ವಾಯುವಿಹಾರ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ 2020– 21ನೇ ಸಾಲಿನಲ್ಲಿ ಅಂದಿನ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ₹3.50 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಈ ಅನುದಾನದಲ್ಲಿ ಕೆರೆಯ ಹೂಳನ್ನು ಎತ್ತಿ ವಾಯುವಿಹಾರಿಗಳಿಗಾಗಿ ಸುಸಜ್ಜಿತವಾದ ವಾಕ್‌ಪಾಥ್‌ ನಿರ್ಮಿಸಲಾಗಿತ್ತು. ರಸ್ತೆಯ ಬದಿಯಲ್ಲಿ ರಂಗು ರಂಗಿನ ವಿದ್ಯುತ್ ದೀಪಗಳನ್ನು ಹಾಕಿ ಆಕರ್ಷಣೀಯ ಸ್ಥಳವನ್ನಾಗಿ ಮಾಡಲಾಗಿತ್ತು.

ಈ ಹಿಂದೆ ಈ ಕೆರೆಗೆ ಪಟ್ಟಣದ ಚರಂಡಿಗಳ ನೀರು ಬಂದು ಸೇರುವಂತೆ ಮಾಡಲಾಗಿತ್ತು. ಇದರಿಂದ ಕೆರೆಯ ನೀರು ಮಲಿನಗೊಳ್ಳುತ್ತದೆ ಎಂಬುದನ್ನು ಮನಗಂಡು ಚರಂಡಿಗಳ ನೀರು ಸೇರದಂತೆ ವ್ಯವಸ್ಥೆ ಮಾಡಲಾಗಿತ್ತು. ಕೆರೆಗೆ ನೀರು ಹರಿಸಲು ಪ್ರತ್ಯೇಕವಾಗಿ ಎರಡು ಕೊಳವೆಬಾವಿಗಳನ್ನು ಕೊರೆಯಿಸಲಾಗಿತ್ತು. ಎರಡು ವರ್ಷ ಈ ಕೆರೆಗೆ ಕೊಳವೆಬಾವಿಗಳ ನೀರನ್ನು ಹರಿಸಲಾಗಿತ್ತು. ಕೆರೆಯಲ್ಲಿ ಸದಾ ನೀರು ಇರುತ್ತಿದ್ದುದರಿಂದ ಇದು ಪಟ್ಟಣದ ನಿವಾಸಿಗಳ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿತ್ತು.

ಪುರಸಭೆಯವರ ಉದಾಸೀನದಿಂದಾಗಿ ಇದುವರೆಗೂ ಕೆರೆಗೆ ಕೊಳವೆಬಾವಿಗಳ ನೀರು ಹರಿಸಿಲ್ಲ. ವಾಯುವಿಹಾರ ಮಾಡಲು ಪಟ್ಟಣದಲ್ಲಿ ಇದೊಂದೇ ಸ್ಥಳ ವ್ಯವಸ್ಥಿತವಾಗಿದ್ದುದರಿಂದ ಪ್ರತಿ ದಿನ ಪಟ್ಟಣದ ಸಾಕಷ್ಟು ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಈಗ ಕೆರೆಯ ಸುತ್ತ ಯಥೇಚ್ಛವಾಗಿ ಗಿಡಗಂಟಿಗಳು ಬೆಳೆದು ನಿಂತಿವೆ. 

‘ಎರಡು ವರ್ಷಗಳ ಹಿಂದೆ ಕೆರೆಗೆ ಕೊಳವೆಬಾವಿಗಳ ನೀರನ್ನು ಹರಿಸಿ ತುಂಬಿಸಲಾಗಿತ್ತು. ಆ ಮೂಲಕ ಕೆರೆಯಲ್ಲಿ ಸದಾ ನೀರಿನ ಸಂಗ್ರಹ ಇರುವಂತೆ ನೋಡಿಕೊಳ್ಳಲಾಗಿತ್ತು. ಈಗ ಕಳೆದೊಂದು ವರ್ಷದಿಂದ ಒಂದು ಹನಿ ನೀರನ್ನೂ ಹರಿಸಿಲ್ಲ. ಹಾಗಾಗಿ ಕೆರೆಯ ಅಂದ ಸೊರಗಿದೆ. ಸಂಜೆ ವೇಳೆ ವಾಯುವಿಹಾರ ಮಾಡುತ್ತಿದ್ದವರೂ ಇತ್ತ ಸುಳಿಯದಂತಾಗಿದೆ. ಪುರಸಭೆಯವರು ಕೆರೆಗೆ ನೀರು ಹರಿಸಿ ಅದರ ಸೊಬಗನ್ನು ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ಪಟ್ಟಣದ ನಿವಾಸಿ ರಾಜಶೇಖರ್ ಒತ್ತಾಯಿಸಿದ್ದಾರೆ. 

ಭರ್ತಿಯಾಗಿದ್ದ ಕೆರೆಯ ನೋಟ (ಸಂಗ್ರಹ ಚಿತ್ರ)
ಭರ್ತಿಯಾಗಿದ್ದ ಕೆರೆಯ ನೋಟ (ಸಂಗ್ರಹ ಚಿತ್ರ)

ದುರಸ್ತಿ ಮಾಡಿಸಿ ಕೆರೆಗೆ ನೀರು ‘ಈ ಸಾಲಿನಲ್ಲಿ ಮಳೆಯ ಕೊರತೆಯಾಗಿದ್ದರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿತ್ತು.  ಎರಡೂ ಕೊಳವೆಬಾವಿಗಳ ಮೋಟರ್‌ಗಳು ಕೆಟ್ಟು ಹೋಗಿವೆ. ಹಾಗಾಗಿ ಕೆರೆಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಕೆರೆ ಸಂಪೂರ್ಣ ಬರಿದಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ  ಮೋಟರ್‌ಗಳನ್ನು ದುರಸ್ತಿ ಮಾಡಿಸಿ ಕೆರೆಗೆ ನೀರು ಬಿಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT