ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಆಫ್ರಿಕನ್ ಸ್ವೈನ್ ಫೀವರ್ ಶಂಕೆ; 3 ತಿಂಗಳಲ್ಲಿ 15,000 ಹಂದಿಗಳ ಸಾವು

Last Updated 23 ಅಕ್ಟೋಬರ್ 2022, 5:30 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ದಿನೇ ದಿನೇ ಹಂದಿಗಳು ಅನುಮಾನಾಸ್ಪದವಾಗಿ ಸಾಯುತ್ತಿದ್ದು, ಆಫ್ರಿಕನ್ ಸ್ವೈನ್ ಫೀವರ್ ಶಂಕೆ ವ್ಯಕ್ತವಾಗಿದೆ. ಪರೀಕ್ಷೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಗರದ ರಾಮನಗರ, ಬೂದಾಳು ರೋಡ್, ಬೇತೂರು ರೋಡ್ ಸೇರಿದಂತೆ ನಗರದ ಎಲ್ಲಾ ಭಾಗಗಳಲ್ಲೂ ಪ್ರತಿ ದಿನ ಹಂದಿಗಳು ಸಾವನ್ನಪ್ಪುತ್ತಿದ್ದು, ದುರ್ನಾತ ಬೀರುತ್ತಿವೆ. ಪಾಲಿಕೆ ಸಿಬ್ಬಂದಿ ವಿಲೇವಾರಿ ಮಾಡುತ್ತಿದ್ದಾರೆ. ಮೂರು ತಿಂಗಳಿನಿಂದ ನಗರದಲ್ಲಿ 15,000ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ ಎಂದು ಹಂದಿ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಮೃತ ಹಂದಿಗಳ ಮರಣೋತ್ತರ ಪರೀಕ್ಷೆ ಮಾಡಿರುವ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಹಂದಿಗಳು ಲಿವರ್, ಹೃದಯ ಹಾಗೂ ಕರುಳಿನ ಭಾಗಗಳನ್ನು ಪರೀಕ್ಷೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ದಾವಣಗೆರೆಯ ಶಾಖೆಗೆ ನೀಡಿದ್ದಾರೆ. ಹೆಚ್ಚಿನ ಪರೀಕ್ಷೆಗಾಗಿ ಈ ಶಾಖೆ ಬೆಂಗಳೂರಿನ ಕೇಂದ್ರ ‌ಕಚೇರಿಗೆ ಕಳುಹಿಸಿದೆ. ಇಲ್ಲಿಯೂ ದೃಢಪಟ್ಟರೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಎನ್‌ಐಎಚ್ಎಸ್‌ಎಡಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್) ಕಳುಹಿಸಲಾಗುತ್ತದೆ’ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂತೋಷ್ ‘ಪ್ರಜಾವಾಣಿ’ಗೆ ತಿಳಿಸಿದರು.

‘15 ದಿನಗಳಿಂದಲೂ ಹಂದಿಗಳು ಅನುಮಾನಾಸ್ಪದವಾಗಿ ಮೃತಪಡುತ್ತಿವೆ. ವಾರದ ಹಿಂದೆಯೇ ಹಂದಿಗಳ ದೇಹದ ಭಾಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಎನ್‌ಐಎಚ್ಎಸ್‌ಎಡಿಯಲ್ಲಿ ಆಫ್ರಿಕನ್ ಸ್ವೈನ್ ಫೀವರ್ ದೃಢಪಟ್ಟರೆ ರಾಜ್ಯ ಸರ್ಕಾರವೇ ನೋಟಿಫಿಕೇಷನ್ ಹೊರಡಿಸಿ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡುತ್ತದೆ. ಒಂದು ವಾರ ಇಲ್ಲವೇ 15 ದಿವಸಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ. ಒಂದು ವೇಳೆ ಕಾಯಿಲೆ ದೃಢಪಟ್ಟರೆ ಪಶುಪಾಲನಾ ಇಲಾಖೆಯವರ ಜೊತೆ ಸಂಪರ್ಕಿಸಿ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಇಲ್ಲಿಯವರೆಗೆ ಎಷ್ಟು ಹಂದಿಗಳು ಮೃತಪಟ್ಟಿವೆ ಎಂದು ಅಂದಾಜಿಸಿಲ್ಲ. ದಿನಕ್ಕೆ 10ರಿಂದ 15 ಹಂದಿಗಳು ಮೃತಪಟ್ಟಿವೆ ಎಂದು ಹಂದಿಗಳನ್ನು ವಿಲೇವಾರಿ ಮಾಡುವ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಹಂದಿಗಳ ಸಾಕಣೆಯ ಮಾಲೀಕರು ಈವರೆಗೆ ಮಹಾನಗರ ಪಾಲಿಕೆಗಾಗಲೀ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಾಗಲೀ ಯಾರೂ ದೂರು ನೀಡಿಲ್ಲ. ನಾವೇ ಸ್ವಹಿತಾಸಕ್ತಿಯಿಂದ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ’ ಎಂದು ಸಂತೋಷ್ ಹೇಳುತ್ತಾರೆ.

‘ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಬಳಿ ವರಹಾ ಶಾಲೆ ಮುಗಿಯುವ ಹಂತದಲ್ಲಿದೆ. ಹಂದಿ ಸಾಕಣೆ ಬಗ್ಗೆ ಮಾಲೀಕರಿಗೆ ತರಬೇತಿ ಆಹ್ವಾನಿಸಿದರೂ ಯಾರೂ ಬರುತ್ತಿಲ್ಲ’ ಎಂದು ಹೇಳುತ್ತಾರೆ.

‘ಕೋಟ್ಯಂತರ ರೂಪಾಯಿ ನಷ್ಟ’

‘ಮೂರು ತಿಂಗಳ ಅವಧಿಯಲ್ಲಿ 15,000 ಹಂದಿಗಳು ಮೃತಪಟ್ಟಿವೆ. ಒಂದು ಹಂದಿಗೆ ₹ 4000 ಬೆಲೆ ಬಾಳುತ್ತವೆ. ಇದರಿಂದ ನಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ದನಗಳ ರೀತಿ ಹಂದಿಗಳೂ ಸಾಯುತ್ತಿವೆ. ದೇವರು ಇಂತಹ ಶಿಕ್ಷೆಯನ್ನು ಯಾಕೆ ಕೊಡುತ್ತಾನೋ ಗೊತ್ತಿಲ್ಲ’ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ. ಆನಂದಪ್ಪ

‘ನಗರದಲ್ಲಿ 173 ಹಂದಿ ಮಾಲೀಕರು ಇದ್ದು, 22 ಸಾವಿರ ಹಂದಿಗಳು ನಗರದಲ್ಲಿವೆ. ನಮಗೆ ಹಂದಿಗಳೇ ಜೀವನಾಧಾರವಾಗಿವೆ. ಬುಟ್ಟಿ ಹೆಣೆಯಲು, ಹಗ್ಗ ನೇಯಲು, ಕಸಪೊರಕೆ ತಯಾರು ಮಾಡಲು ಪರಿಕರಗಳೇ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಮುಂದೆ ವಿವಿಧ ಬೇಡಿಕೆಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT