ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನಿಂದ ನಾಡಿಗೆ ನುಗ್ಗುತ್ತಿರುವ ಚಿರತೆಗಳು | ಹೆಚ್ಚಿದ ಮಾನವ– ವನ್ಯಜೀವಿ ಸಂಘರ್ಷ

ಸಾಕುಪ್ರಾಣಿಗಳಿಗೂ, ಮನುಷ್ಯರಿಗೂ ಆತಂಕ
Last Updated 29 ಸೆಪ್ಟೆಂಬರ್ 2022, 3:17 IST
ಅಕ್ಷರ ಗಾತ್ರ

ದಾವಣಗೆರೆ: ಕಾಡಿನಲ್ಲಿ ವಾಸಿಸುವ ಚಿರತೆಗಳು ನಾಡಿನ ಸುತ್ತ ಓಡಾಡುತ್ತಿವೆ. ಇದರಿಂದಾಗಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಇದರಿಂದ ಆತಂಕ್ಕೆಕ ಈಡಾಗಿದ್ದಾರೆ. ರಾತ್ರಿ ಹೊತ್ತು ಒಬ್ಬೊಬ್ಬರೇ ಹೊರಗೆ ಹೋಗಲು ಹೆದರುತ್ತಿದ್ದಾರೆ.

ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿಯಲ್ಲಿ ಇತರ ಆರು ಏಳು ಮಹಿಳೆಯರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಮಲಾಬಾಯಿ ಜೀಕಾನಾಯ್ಕ (55)ಚಿರತೆ ದಾಳಿಯಲ್ಲಿ ಇತ್ತೀಚೆಗಷ್ಟೇ ಸಾವಿಗೀಡಾಗಿರುವುದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.

ಚನ್ನಗಿರಿ ತಾಲ್ಲೂಕು ಮಾದೇನಹಳ್ಳಿಯ ಹಾಲೇಶ್‌ ಅವರ ಬೆಕ್ಕು ನಾಪತ್ತೆಯಾಗಿತ್ತು. ಚಿರತೆಯೊಂದು ಮನೆವರೆಗೆ ಬಂದು ಬೆಕ್ಕನ್ನು ಬೇಟೆಯಾಡಿ ಹೊತ್ತೊಯ್ದಿರುವುದು ಮನೆ ಎದುರು ಅಳವಡಿಸಿದ್ದ ಸಿ.ಸಿ. ಟಿವಿ ಕ್ಯಾಮೆರಾದಿಂದ ಪತ್ತೆಯಾಯಿತು.

ನ್ಯಾಮತಿ ತಾಲ್ಲೂಕು ಜಿನಹಳ್ಳಿಯ ಎ.ಕೆ. ನಾಗರಾಜಪ್ಪ ಅವರ ಕುರಿಯನ್ನು ಚಿರತೆ ಹೊತ್ತೊಯ್ದಿದೆ. ಮಾಯಕೊಂಡದ ಕಂದನಕೋವಿ ಬಳಿ ಯುವಕರಿಬ್ಬರು ರಾತ್ರಿ ಬೈಕ್‌ನಲ್ಲಿ ತೆರಖುವಾಗ ಚಿರತೆಯೊಂದು ಧುತ್ತನೇ ಎದುರಾಗಿ ಭಯ ಉಂಟುಮಾಡಿದೆ.

ಕಳೆದ ಒಂದೂವರೆ ತಿಂಗಳಲ್ಲಿ ಚಿರತೆಗಳು ನಾಡಲ್ಲಿ ಓಡಾಡಿ ಜನರಿಗೆ ತೊಂದರೆ ನೀಡಿರುವ, ಸಾಕು ಪ್ರಾಣಿ ಹೊತ್ತೊಯ್ದಿರುವ ಇನ್ನೂ ಅನೇಕ ಪ್ರಸಂಗಗಳು ನಡೆದಿವೆ.

ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ, ಸಾರಥಿ ಹೊಸೂರು, ಮಾದೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಒಂದೇ ತಿಂಗಳಲ್ಲಿ 20ಕ್ಕೂ ಅಧಿಕ ಸಾಕು ನಾಯಿಗಳು ನಾಪತ್ತೆಯಾಗಿವೆ. ದಾವಣಗೆರೆ ತಾಲ್ಲೂಕು ಆನಗೋಡಿನಲ್ಲಿ ಕಾಡುಹಂದಿಗೆ ಇಟ್ಟಿದ್ದ ಉರುಳಿಗೆ ಚಿರತೆ ಬಿದ್ದು ಸತ್ತೇ ಹೋಗಿತ್ತು.

ಫಲವನಹಳ್ಳಿಯಲ್ಲಿ ಮಹಿಳೆಯನ್ನು ಕೊಂದಿದ್ದ ಚಿರತೆ ಒಂದು ವಾರದ ಬಳಿಕ ಸೆರೆಯಾಗಿತ್ತು. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ, ಕರಡಿ ಕ್ಯಾಂಪ್‌, ಹುಣಸಘಟ್ಟ, ಬೈರನಹಳ್ಳಿ ಸಹಿತ ಸುತ್ತಮುತ್ತಲ ಗ್ರಾಮಗಳಲ್ಲಿ ಓಡಾಡಿ ಆತಂಕ ಸೃಷ್ಟಿಸಿದ್ದ ಚಿರತೆಯೂ ಅರಣ್ಯ ಇಲಾಖೆ ಇಟ್ಟ ಪಂಜರಕ್ಕೆ ಬಿತ್ತು. ಉಕ್ಕಡಗಾತ್ರಿಯ ಗದಿಗೆಪ್ಪ ಅವರ ತೋಟದಲ್ಲಿ ಕಾಣಿಸಿಕೊಂಡ ಚಿರತೆ, ನಿಟಪಳ್ಳಿ, ಕೋಟೆಹಾಳ್‌ ರಸ್ತೆಯ ಬದಿಯಲ್ಲಿ ಕಂಡು ಬಂದಿದ್ದ ಮರಿ ಮತ್ತು ತಾಯಿ ಚಿರತೆ ಹೀಗೆ ವಿವಿಧೆಡೆ ಕಂಡು ಬಂದಿದ್ದ ಚಿರತೆಗಳು ಪಂಜರಕ್ಕೆ ಬಿದ್ದಿಲ್ಲ.

ಕಾಡು ಕ್ಷೀಣಿಸಿದ್ದೇ ಕಾರಣ: ಕಾಡು ಕ್ಷೀಣಿಸುತ್ತಿರುವುದೇ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕಾರಣ. ಚಿರತೆಗಳ ಆವಾಸ ಸ್ಥಾನದಲ್ಲಿ ಆಹಾರ ಲಭಿಸದಿರುವುದು ಅವು ನಾಡಿಗೆ ಬರಲು ಪ್ರೇರೇಪಿಸುತ್ತಿದೆ. ಸಸ್ಯಾಹಾರಿ ಪ್ರಾಣಿಗಳು ಹೇಗೋ ಬದುಕುತ್ತವೆ. ಕಾಡು ಕಡಿಮೆಯಾಗಿದ್ದರಿಂದ ಮಾಂಸಾಹಾರಿ ಪ್ರಾಣಿಗಳು ಆಹಾರದ ಕೊರತೆ ಎದುರಿಸಿ ನಾಡಿಗೆ ನುಗ್ಗುತ್ತವೆ ಎನ್ನುವುದು ಸೂಕ್ಷ್ಮಜೀವ ವಿಜ್ಞಾನ ಪ್ರಾಧ್ಯಾಪಕ ಡಾ.ಎಸ್.ಶಿಶುಪಾಲ ಅವರ ಅಭಿಪ್ರಾಯ.

ದಟ್ಟ ಕಾಡು ಇಲ್ಲದೇ ಹಲವು ಪ್ರಾಣಿಗಳು ನಶಿಸಿ ಹೋಗುತ್ತವೆ. ಚಿರತೆ, ಕಾಡು ಹಂದಿಯಂಥ ಕೆಲವು ಪ್ರಾಣಿಗಳು ದಟ್ಟ ಕಾಡು ಇಲ್ಲದೆಯೂ ಬದುಕಬಲ್ಲವು. ಅವು ನಾಡಿಗೆ ಲಗ್ಗೆ ಇಡುತ್ತವೆ ಎಂದೂ ಅವರು ಹೇಳುತ್ತಾರೆ.

ಕಾಡು ಹೆಚ್ಚಾಗಿದೆ: ಕಾಡಿಗೆ ಹೋಗಿ ಕಟ್ಟಿಗೆ ಕಡಿಯುವುದನ್ನು ನಿಷೇಧಿಸಲಾಗಿದೆ. ಕಾಡು ಬೆಳೆಸಲು ಪ್ರೋತ್ಸಾಹವನ್ನು ನಿರಂತರ ನೀಡಲಾಗುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ 2019ಕ್ಕೆ ಹೋಲಿಕೆ ಮಾಡಿದಾಗ 2022ಕ್ಕೆ 4 ಚದರ ಕಿಲೋಮೀಟರ್‌ ಕಾಡು ಹೆಚ್ಚಾಗಿದೆ ಎಂದು ಸರ್ವೆ ಆಫ್‌ ಇಂಡಿಯಾದ ವರದಿ ತಿಳಿಸಿದೆ. ಕಾಡು ಹೆಚ್ಚಾದಾಗ ಪ್ರಾಣಿಗಳಿಗೆ ಸುರಕ‌್ಷಿತ ತಾಣ ದೊರೆಯುವುದೇನೋ ನಿಜ, ಆದರೆ ಆಹಾರಕ್ಕೆ ನಾಡಿಗೆ ಬರುವುದು ಅನಿವಾರ್ಯವಾಗಲಿದೆ. ಈ ಕಾರಣವೂ ಚಿರತೆಗಳು ನಾಡಿಗೆ ನುಗ್ಗುತ್ತಿರುವುದಕ್ಕೆ ಕಾರಣ ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌ ‘ಪ್ರಜಾವಾಣಿ’ಗೆ
ತಿಳಿಸಿದರು.

ಅರಣ್ಯ ಹೆಚ್ಚಾದರೂ ಮಾನವನ ಹಸ್ತಕ್ಷೇಪ ಕಡಿಮೆಯಾಗಿಲ್ಲ. ಪ್ರಾಣಿಗಳು ಓಡಾಡುವ ಪ್ರದೇಶಗಳನ್ನು ಕೃಷಿ ಮತ್ತಿತರ ಕಾರಣಕ್ಕೆ ಅತಿಕ್ರಮಿಸಿದಾಗ ಅವುಗಳ ಓಡಾಟಕ್ಕೆ ಮಾರ್ಗ ಇಲ್ಲವಾಗುತ್ತದೆ. ಇದು ಮಾನವ, ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬುದು ಅವರ ವಿವರಣೆ.

ಸಂಘರ್ಷ ನಿಯಂತ್ರಿಸಲು ‘ಕಾಳಭೈರವ’

ಮಾನವ– ವನ್ಯಜೀವಿ ಸಂಘರ್ಷ ಇದ್ದೇ ಇರುತ್ತದೆ. ಅದರ ನಿಯಂತ್ರಣಕ್ಕೆ ಅರಣ್ಯ ಇಲಾಖೆ ‘ಕಾಳಭೈರವ’ ತಂಡ ಅಣಿಗೊಳಿಸಿದೆ. ಪ್ರತಿ ಅರಣ್ಯ ವಲಯದಲ್ಲಿ ಕಾಳಭೈರವ ತಂಡ 8–10 ಪಂಜರ, ಬಲೆ, ಸ್ವರಕ್ಷಣೆಯ ಆಯುಧಗಳ ಸಹಿತ ದಿನದ 24 ಗಂಟೆ ಸನ್ನದ್ಧವಾಗಿರುತ್ತವೆ ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌ ಮಾಹಿತಿ ನೀಡಿದರು.

ನಾಡಿಗೆ ನುಗ್ಗಿದ ಕರಡಿಗಳು

ಜಗಳೂರು ತಾಲ್ಲೂಕಿನಲ್ಲಿ ಕರಡಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಗಾಗ ನಾಡಿಗೆ ಬರುತ್ತವೆ. ತಿಂಗಳ ಹಿಂದಷ್ಟೇ ಕೆಳಗೋಟೆ ಗ್ರಾಮದಲ್ಲಿ ಬಸವರಾಜ್ (55) ಎಂಬ ರೈತನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿತ್ತು. ನಾಯಿಗಳು ಪ್ರತಿದಾಳಿ ಮಾಡಿ ಕರಡಿಯನ್ನು ಓಡಿಸಿದ್ದರಿಂದ ಬಸವರಾಜ್‌ ಬದುಕುಳಿದರು. ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯಿಂದ ಬೈರನಹಳ್ಳಿಗೆ ಹೋಗುವ ರಸ್ತೆಯಲ್ಲಿಯೂ ಕರಡಿ ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT