ಸೋಮವಾರ, ಮಾರ್ಚ್ 1, 2021
29 °C

ಬೋನಿಗೆ ಬಿದ್ದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹರಪನಹಳ್ಳಿ: ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಗುರುವಾರ ನಾಲ್ಕು ವರ್ಷದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ.

ಕಡತಿ, ವಟ್ಲಹಳ್ಳಿ, ಮತ್ತೂರು, ನಂದ್ಯಾಲ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಮತ್ತೂರು ಗ್ರಾಮದ ಅಂಬ್ಲಿ ಶಿವರಾಮಪ್ಪ ಅವರಿಗೆ ಸೇರಿದ ಕಣದಲ್ಲಿ ಬೋನಿಯಲ್ಲಿ ನಾಯಿಯೊಂದನ್ನು ಕೂಡಿಹಾಕಿ ಚಿರತೆ ಸೆರೆಗೆ ಬಲೆ ಬೀಸಿದ್ದರು. ಅದರಂತೆ ನಾಯಿ ಮೇಲೆ ದಾಳಿ ನಡೆಸಲು ಬಂದಿದ್ದ ಚಿರತೆ ಬೋನಿಗೆ ಬಿದ್ದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ದಾವಣಗೆರೆ ಬಳಿಯಿರುವ ಆನಗೋಡು ಪ್ರಾಣಿ ಸಂಗ್ರಾಹಾಲಯಕ್ಕೆ ಕಳುಹಿಸಿದ್ದಾರೆ.

ಎರಡು, ಮೂ‌‌‌ರು ತಿಂಗಳಿಂದ ಕಡತಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ಪದೇ ಪದೇ ಕಾಣಿಸಿಕೊಂಡು ಜಾನುವಾರು, ನಾಯಿ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಅಲ್ಲದೇ ಕಡತಿ ಗ್ರಾಮದಲ್ಲಿ ಕಬ್ಬು ಕಾಟಾವು ಹಾಗೂ ಜಮೀನಿಗೆ ತೆರಳಿದ ಜನರ ಮೇಲೆ ಹೆಣ್ಣು ಚಿರತೆ ತನ್ನ ಮರಿಗಳೊಂದಿಗೆ ದಾಳಿಗೆ ಯತ್ನಿಸಿತ್ತು. ಇದರಿಂದ ಆತಂಕಗೊಂಡಿದ್ದ ಜನರು ರಾತ್ರಿವೇಳೆ ಒಂಟಿಯಾಗಿ ತೆರಳದಂತಹ ಸ್ಥಿತಿ ನಿರ್ಮಾಣವಾಗಿತ್ತು.

ಈಗ ಬೋನಿಗೆ ಬಿದ್ದಿರುವ ಚಿರತೆ ಗಂಡಾಗಿದ್ದು, ಕಡತಿಯಲ್ಲಿ ಮರಿಗಳೊಂದಿಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಬೇಕಿದೆ. ಈ ಭಾಗದಲ್ಲಿ ಇನ್ನು ಹಲವು ಚಿರತೆ ವಾಸವಾಗಿದ್ದು, ಅವುಗಳ ಬಂಧನಕ್ಕೆ ಬೋನು ಇಡಬೇಕು ಎಂದು ಮತ್ತೂರು, ಕಡತಿ, ನಂದ್ಯಾಲ, ವಟ್ಲಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನೂಳಿದ ಚಿರತೆಗಳ ಸೆರೆಗೆ ಅರಣ್ಯ ಇಲಾಖೆಯವರು ಮತ್ತೆ ಬೋನು ಅಳವಡಿಸುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮದ ಜಿ.ಪ್ರಕಾಶ್ ತಿಳಿಸಿದರು.

ಅರಣ್ಯ ಸಿಬ್ಬಂದಿ ಲಕ್ಷ್ಮಣ, ಅಶೋಕ, ಶಿವಕುಮಾರ, ಮಂಜುನಾಥ, ಕೊಟ್ರೇಶ್, ಅಂಬ್ಲಿ ಶಿವರಾಮಪ್ಪ ಹಾಗೂ ಗ್ರಾಮಸ್ಥರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು