ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಪೀಠಗಳು ಸಮ ಸಮಾಜ ನಿರ್ಮಿಸಲಿ

ಹರಜಾತ್ರಾ ಮಹೋತ್ಸವದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ
Last Updated 16 ಜನವರಿ 2021, 3:22 IST
ಅಕ್ಷರ ಗಾತ್ರ

ದಾವಣಗೆರೆ: ಸಮಾಜಕ್ಕೆ ಮಾರ್ಗದರ್ಶನ ಮಾಡಲು ಗುರುಪೀಠಗಳು ಅಗತ್ಯ. ಗುರುಪೀಠಗಳುಸಮಾನತೆ ಸಮಾಜ ನಿರ್ಮಿಸಲು ಮುಂದಾಗಬೇಕು. ಜಾತಿರಹಿತ ಸಮಾಜ ನಿರ್ಮಿಸಲು ಪೂರಕವಾಗಿ ಮಠಗಳು ಕೆಲಸ ಮಾಡಬೇಕು ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶುಕ್ರವಾರ ನಡೆದ ಹರಜಾತ್ರಾ ಮಹೋತ್ಸವ ಹಾಗೂ ವಚನಾನಂದ ಸ್ವಾಮೀಜಿ ತೃತೀಯ ವರ್ಷದ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಾನು ಗುರುಪೀಠಗಳ ವಿರೋಧಿ ಅಲ್ಲ. ಕನಕಗುರುಪೀಠವನ್ನು ನನ್ನ ಮುಂದಾಳತ್ವದಲ್ಲಿ ಮಾಡಿದ್ದೆ. ಸಮ ಸಮಾಜ ನಿರ್ಮಾಣ ಪೀಠಗಳ ಗುರಿ ಆಗಬೇಕು’ ಎಂದರು.

‘ಸಮಾಜದಲ್ಲಿ ಇನ್ನೂ ಸಾಮಾಜಿಕ, ಆರ್ಥಿಕ ಅಸಮಾನತೆ, ಜಾತಿ ವ್ಯವಸ್ಥೆ, ವರ್ಗ ಸಂಘರ್ಷ ಇದೆ. ಇದನ್ನು ದೇವರು ಮಾಡಿಲ್ಲ. ನಾವು ನಮ್ಮ ಸ್ವಾರ್ಥಕ್ಕೆ ಮಾಡಿಕೊಂಡಿದ್ದೇವೆ. ಸಮಾಜದಲ್ಲಿ ಮನುಸ್ಮೃತಿ ಮೂಲಕ ವರ್ಣ ವ್ಯವಸ್ಥೆ ಹುಟ್ಟುಹಾಕಲಾಯಿತು. ಇಲ್ಲಿ ಬಹುಸಂಖ್ಯಾತರು ಇರುವುದು ಶೂದ್ರರು. ಅವರೆಲ್ಲರೂ ಉತ್ಪಾದನೆ ಮಾಡುವ ಕಾಯಕ ಮಾಡುತ್ತಾರೆ. ಅದನ್ನು ಲಾಭ ಪಡೆಯುವವರು ಉತ್ಪಾದನೆ ಮಾಡದ ಜನ. ಇದಕ್ಕಾಗಿ ಬಸವಣ್ಣ ಕಾಯಕಕ್ಕೆ ಮಹತ್ವ ಕೊಟ್ಟಿದ್ದರು’ ಎಂದು ಹೇಳಿದರು.

‘ಇವನಾರವ.. ಇವನಮ್ಮವ ಎಂದು ಬಸವಣ್ಣ ಹೇಳಿದ್ದರು. ಇದನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಾವು ಹುಟ್ಟುವಾಗ ವಿಶ್ವಮಾನವರು. ಬೆಳೆಯುತ್ತಾ ಅಲ್ಪಮಾನವರಾಗುತ್ತೇವೆ. ಕಿತ್ತೂರು ಚನ್ನಮ್ಮಳ ನೆಚ್ಚಿನ ಬಂಟ ಕುರುಬನಾದ ಸಂಗೊಳ್ಳಿ ರಾಯಣ್ಣ. ಅವರು ಜಾತಿ ನೋಡಲಿಲ್ಲ. ನಾವು ಜಾತಿ ನೋಡದೆ ಮನುಷ್ಯರಾಗಬೇಕು’ ಎಂದು ಸಲಹೆ ನೀಡಿದರು.

ಬಸವಣ್ಣನ ಮಾರ್ಗದಲ್ಲಿ ವಚನಾನಂದ ಸ್ವಾಮೀಜಿ ನಡೆಯುತ್ತಾರೆ ಎಂಬ ವಿಶ್ವಾಸ ಇದೆ. ಜಾತಿ ರಹಿತ, ಸಮಾನತೆಯ ನವಸಮಾಜ ನಿರ್ಮಾಣವಾಗಬೇಕು. ಆಗ ಮಾತ್ರ ಬಸವಣ್ಣ, ಬುದ್ಧರ ಮಾತುಗಳು ಸಾರ್ಥಕ ಆಗುತ್ತವೆ ಎಂದರು.

ವಚನಾನಂದ ಸ್ವಾಮೀಜಿ, ‘ಪೀಠಾರೋಹಣ ಮಾಡುವ ಮುಂಚೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಲವು ಕಡೆ ಯೋಗ ಪ್ರದರ್ಶನ ನೀಡುವಾಗ ಸಹಕಾರ ನೀಡಿದವರು ಸಿದ್ದರಾಮಯ್ಯ. ಅವರ ಹಿಂದೆ ಪಂಚಮಸಾಲಿ ಗುರುಪೀಠ ಇರುತ್ತದೆ’ ಎಂದು ಹೇಳಿದರು.

ಶಾಸಕ ಎಂ.ಬಿ. ಪಾಟೀಲ, ‘ವಚನಾನಂದ ಸ್ವಾಮೀಜಿ ಅವರ ಯೋಗ ಶಿಕ್ಷಣದಿಂದ ದೇಶ–ವಿದೇಶಗಳ ಜನರು ಪ್ರಭಾವಿತರಾಗಿದ್ದಾರೆ. ಪಂಚಮಸಾಲಿ ಸಮಾಜವನ್ನು ಸ್ವಾಮೀಜಿ ಸಂಘಟಿಸುತ್ತಿದ್ದಾರೆ. ಅವರಲ್ಲಿ ಸಮಾಜವನ್ನು ಮುನ್ನಡೆಸುವ ಸಾಮರ್ಥ್ಯ, ದಿವ್ಯ ಶಕ್ತಿ ಇದೆ. ಸಮಾಜದ ಅಭಿವೃದ್ಧಿಗೆ ನೀರಾವರಿ ಸಚಿವನಾಗಿದ್ದಾಗ ಹಲವು ಕಾರ್ಯಕ್ರಮ ನೀಡಿದ್ದೆ’ ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ‘ಮಠಗಳ ಅಸ್ತಿತ್ವಕ್ಕೆ ದೈವಿ ಸಂಕಲ್ಪ ಕಾರಣ. ಸ್ವಾಮೀಜಿ ಆಗಲು ವಿಶಿಷ್ಟ ವ್ಯಕ್ತಿತ್ವ ಅಗತ್ಯ. ಯೋಗದ ವ್ಯಕ್ತಿತ್ವ, ದಿವ್ಯ ಸಾಮರ್ಥ್ಯ ಇರುವುದರಿಂದಲೇ ವಚನಾನಂದ ಸ್ವಾಮೀಜಿ ಪೀಠಾಧಿಪತಿ ಆಗಿದ್ದಾರೆ. ಧರ್ಮ ಪ್ರಚಾರ, ಸಮಾಜದ ಸಂಘಟನೆ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರ ಕಾರ್ಯ ನಿರಂತರವಾಗಿ ಸಾಗಲಿ’ ಎಂದು ಆಶಿಸಿದರು.

ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ಪೀಠಾರೋಹಣ ಉದ್ಘಾಟಿಸಿದರು. ಶಾಸಕರಾದ ಎಸ್‌.ರಾಮಪ್ಪ, ಪಿ.ಟಿ. ಪರಮೇಶ್ವರ ನಾಯ್ಕ್, ವಿಧಾನಪರಿಷತ್‌ ಸದಸ್ಯ ಕೆ. ಗೋವಿಂದರಾಜು, ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿಗಳಾದ ಪಿ.ಡಿ. ಶಿರೂರು, ಬಾವಿ ಬೆಟ್ಟಪ್ಪ, ಪಂಚಮಸಾಲಿ ಸಂಘದ ಕಾರ್ಯಾಧ್ಯಕ್ಷ ಜೆ.ಪಿ. ಪಾಟೀಲ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹೊಳೆಸಿರಿಗೆರೆ ನಾಗನಗೌಡರು ಸೇರಿ ಸಮಾಜದ ಮುಖಂಡರು, ಸಮಾಜದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT