ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವದ ನೆಲೆಗಟ್ಟಿನಲ್ಲಿ ಹೊಸದಾಗಿ ಜಾತಿ ಗಣತಿಯಾಗಲಿ: ಅಧಿವೇಶನದಲ್ಲಿ ಆಗ್ರಹ

Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ದಾವಣಗೆರೆ: ‘ವೈಜ್ಞಾನಿಕ ಹಾಗೂ ವಾಸ್ತವದ ನೆಲೆಗಟ್ಟಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಗಣತಿ) ಪುನಃ ಮಾಡಬೇಕು. ವೀರಶೈವ–ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು...’

ಇಲ್ಲಿ ಶನಿವಾರ ಶುರುವಾದ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಕೇಳಿಬಂದ ಒಕ್ಕೊರಲ ಆಗ್ರಹವಿದು. 

‘ವೀರಶೈವ–ಲಿಂಗಾಯತ ಸಮುದಾಯದಲ್ಲಿ 90ರಿಂದ 100 ಒಳಪಂಗಡಗಳಿವೆ. ವಾಸ್ತವಾಂಶದ ಆಧಾರಲ್ಲಿ ಹೊಸದಾಗಿ ಜಾತಿ ಗಣತಿ ನಡೆಸಬೇಕು ಎಂಬುದು ನಮ್ಮ ಬೇಡಿಕೆ. ಇದಕ್ಕೆ ಸಮುದಾಯದ ಎಲ್ಲಾ ಶಾಸಕರು ಪಕ್ಷಾತೀತವಾಗಿ ಸಮ್ಮತಿ ಸೂಚಿಸಿದ್ದಾರೆ. ನಾವು ಯಾರ ಹಕ್ಕನ್ನೂ ಕಸಿಯುತ್ತಿಲ್ಲ’ ಎಂದು ಮಹಾಸಭಾದ ಕಾರ್ಯದರ್ಶಿಯೂ ಆಗಿರುವ ಸಚಿವ ಈಶ್ವರ ಖಂಡ್ರೆ ಹೇಳಿದರು. 

‘ರಾಜ್ಯದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರಿಗೆ ಶೇ 5ರಷ್ಟು ಮೀಸಲಾತಿ ಇದೆ. ಸಮುದಾಯದ ಎಲ್ಲಾ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು. ರಾಜ್ಯ ಸರ್ಕಾರ ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು. 

‘ಸಮಾಜ ಅಭಿವೃದ್ಧಿ ಹೊಂದಿದ್ದರೂ, ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲ ಬಾರಿಗೆ ಜಾತಿ ಗಣತಿಯ ಪರವಾಗಿ ಧ್ವನಿ ಎತ್ತಿದ್ದೇ ವೀರಶೈವ ಮಹಾಸಭಾ. ಜಾತಿ ಗಣತಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಡೆಯಬೇಕು. ಈ ಕಾರಣಕ್ಕಾಗಿಯೇ ಹೊಸದಾಗಿ ಜಾತಿ ಗಣತಿ ನಡೆಸುವಂತೆ ಆಗ್ರಹಿಸುತ್ತಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. 

‘ಒಳಪಂಗಡಗಳ ಆಧಾರದಲ್ಲಿ ಮೀಸಲಾತಿ ನೀಡುತ್ತಾ ಹೋದರೆ ಸಮಾಜವನ್ನು ಒಡೆದಂತಾಗುತ್ತದೆ. ಎಲ್ಲಾ ಒಳಪಂಗಡಗಳನ್ನು ಒಟ್ಟುಗೂಡಿಸಿ ಮೀಸಲಾತಿ ಒದಗಿಸುವುದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಒಡಮೂಡುತ್ತದೆ. ರಾಜ್ಯದ 16 ಒಳಪಂಗಡಗಳು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಹೊಂದಿವೆ. ಇತರ ಒಳಪಂಗಡಗಳನ್ನೂ ಆ ಪಟ್ಟಿಗೆ ಸೇರ್ಪಡೆ ಮಾಡಬೇಕು’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಗ್ರಹಿಸಿದರು.

‘ವೀರಶೈವ ಲಿಂಗಾಯತ ಸಮುದಾಯದವರ ಜನಸಂಖ್ಯೆ ಕುಸಿಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಮಿತ ಸಂತಾನ ಇದಕ್ಕೆ ಕಾರಣವಲ್ಲ. ಮಹಾಸಭಾದವರು ಆನ್‌ಲೈನ್ ಮೂಲಕ ಸಮುದಾಯದ ಜನ ಗಣತಿ ನಡೆಸಿ ಸರ್ಕಾರಕ್ಕೆ ಸಲ್ಲಿಸಲಿ’ ಎಂದು ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

‘856’ ನಮ್ಮೆಲ್ಲರ ಕೋಡ್‌ ಆಗಲಿ: ‘ಪ್ರತಿಯೊಂದು ಧರ್ಮಕ್ಕೂ ಒಂದೊಂದು ಕೋಡ್‌ ಇದೆ. ವೀರಶೈವ ಲಿಂಗಾಯತರು 856 ಸಂಖ್ಯೆಯನ್ನು ಕೋಡ್‌ ಆಗಿ ಬಳಸಬೇಕು. ‘8’ ಅಷ್ಟಾವರಣಗಳನ್ನು, ‘5’ ಪಂಚಾಚಾರ್ಯರನ್ನು ಹಾಗೂ ‘6’ ಷಟ್‌ಸ್ಥಳಗಳನ್ನು ಸೂಚಿಸುತ್ತದೆ. ಇವು ನಮ್ಮ ಮೂಲತತ್ವಗಳಾಗಿವೆ’ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. 

ಅಧ್ಯಕ್ಷರ ಮೆರವಣಿಗೆ: ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಶಾಮನೂರು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ದಾವಣಗೆರೆಯಲ್ಲಿ ಶನಿವಾರ ನಡೆದ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಭಾಗವಹಿಸಿದ್ದ ಜನಸ್ತೋಮ

ದಾವಣಗೆರೆಯಲ್ಲಿ ಶನಿವಾರ ನಡೆದ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಭಾಗವಹಿಸಿದ್ದ ಜನಸ್ತೋಮ

–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

Highlights - null

Quote - ತಾತ್ವಿಕ ವಿಚಾರಗಳಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯ ಇರಬಹುದು. ದೊಡ್ಡವ ಸಣ್ಣವ ಎಂಬ ಭಾವನೆ ಬಿಟ್ಟು ಮೊದಲು ನಾವು ಒಂದಾಗಬೇಕು. ಆಗ ಮಾತ್ರ ಸಮುದಾಯ ಒಗ್ಗೂಡಲಿದೆ ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಪೀಠ

Quote - ವೀರಶೈವ ಲಿಂಗಾಯತರಿಗೆ ಶತ್ರುಗಳು ಯಾರು ಎಂದರೆ ವೀರಶೈವ ಲಿಂಗಾಯತರೇ. ಸಮುದಾಯಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು. ಸಮಾಜವು ಅಧಃಪತನದತ್ತ ಸಾಗಲು ಅವರೇ ವೀರಶೈವರೇ ಕಾರಣ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಬೃಹನ್ಮಠ

Cut-off box - ಒಡಕು ಮೂಡಿಸಿ ‘ಕೈ’ ಸುಟ್ಟುಕೊಳ್ಳದಿರಿ  ‘ಈ ಹಿಂದೆ ಕೆಲವರು ವೀರಶೈವ–ಲಿಂಗಾಯತರ ನಡುವೆ ಒಡಕು ಮೂಡಿಸಲು ಹೋಗಿ ಕೈಸುಟ್ಟುಕೊಂಡರು. ಈಗ ಮತ್ತೊಮ್ಮೆ ಅಂತಹ ದುಸ್ಸಾಹಸಕ್ಕೆ ಮುಂದಾದರೆ ಮತ್ತೆ ಕೈಸುಡಲಿದೆ. ಸಮಾಜದ ಜೊತೆ ಚೆಲ್ಲಾಟವಾಡಬೇಡಿ’ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಚ್ಚರಿಸಿದರು. ‘ರಾಜ್ಯದಲ್ಲಿ ವೀರಶೈವ–ಲಿಂಗಾಯತ ಸಮಾಜದ ಜನಸಂಖ್ಯೆ ಶೇ 17ರಷ್ಟಿದೆ ಎಂದು 1990ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗ ವರದಿ ಸಲ್ಲಿಸಿತ್ತು. ಇದು ಶೇ 10.68ಕ್ಕೆ ಕುಸಿದಿದೆ ಎಂದು ಈಗಿನ ಜಾತಿ ಗಣತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಊಹಾಪೋಹಗಳು ಕೇಳಿಬಂದಿವೆ. ಜನಸಂಖ್ಯೆ ಕಡಿಮೆಯಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

Cut-off box - ‘ವ್ಯಕ್ತಿ ನಿಂದನೆಗೂ ಪ್ರಕರಣ ದಾಖಲಿಸುವ ಕಾನೂನು ಜಾರಿಯಾಗಲಿ’ ‘ಜಾತಿ ನಿಂದನೆಯ ಹಾಗೆ ವ್ಯಕ್ತಿ ನಿಂದನೆ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸುವಂತಾಗಬೇಕು. ಇದಕ್ಕಾಗಿ ಕಾನೂನಿನಲ್ಲಿ ಮಾರ್ಪಾಡು ಮಾಡಬೇಕು’ ಎಂದು ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು. ‘ಈಗ ಜಾತಿ ನಿಂದನೆ ವ್ಯಕ್ತಿ ನಿಂದನೆ ಮಾಮೂಲಿಯಾಗಿದೆ. ರಾಜಕಾರಣಿ ಧರ್ಮ ಗುರುಗಳು ಹೀಗೆ ಯಾರೇ ನಿಂದನೆ ಮಾಡಿದರೂ ಅವರ ವಿರುದ್ಧ ಪ್ರಕರಣ ದಾಖಲಿಸುವಂತಾಗಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT