ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಮರುಬಳಕೆಯ ಬಗ್ಗೆ ಆವಿಷ್ಕಾರವಾಗಲಿ

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌
Last Updated 8 ಡಿಸೆಂಬರ್ 2018, 15:48 IST
ಅಕ್ಷರ ಗಾತ್ರ

ದಾವಣಗೆರೆ: ಎಲೆಕ್ಟ್ರಾನಿಕ್ಸ್‌ ಕಸ, ಕೈಗಾರಿಕಾ ಕಸ, ಆಸ್ಪತ್ರೆಯ ಕಸ ಮತ್ತು ನಗರದ ಘನತ್ಯಾಜ್ಯವು ರಾಜ್ಯದಲ್ಲಿ ವರ್ಷಕ್ಕೆ 6 ಲಕ್ಷ ಟನ್‌ ಉತ್ಪತ್ತಿಯಾಗುತ್ತದೆ. ಅದರಲ್ಲಿ ಶೇ 2ರಷ್ಟು ಮಾತ್ರ ಮರುಬಳಕೆ ಆಗುತ್ತಿದೆ. ಪೂರ್ಣ ಮರು ಬಳಕೆ ಆರೋಗ್ಯವಂತ ರಾಷ್ಟ್ರವನ್ನಾಗಿ ಮಾಡಲು ವಿದ್ಯಾರ್ಥಿಗಳು ಆವಿಷ್ಕಾರ ಕೈಗೊಳ್ಳಬೇಕು ಎಂದು ಮಾಲಿನ್ಯ ನಿಯರಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ, ಮಾಲಿನ್ಯ ನಿಯಂತ್ರಣ ಮಂಡಳಿಯು ಶಿರಮಗೊಂಡನಹಳ್ಳಿ ಅನಮೋಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 15 ಸಾವಿರ ಟನ್‌ ನಗರ ಕಸ ಉತ್ಪತ್ತಿಯಾಗುತ್ತದೆ. ದಾವಣಗೆರೆಯಲ್ಲಿ 150 ಟನ್‌ ಕಸ ಉತ್ಪತ್ತಿಯಾಗುತ್ತದೆ. ಶೇ 20ರಷ್ಟು ಮರುಬಳಕೆಯಾಗುತ್ತದೆ ಎಂದು ಅಂಕಿ ಅಂಶ ಹೇಳುತ್ತದೆ. ಆದರೆ ನೆಲಭರ್ತಿ ಮಾಡುವುದು ಪುನರ್‌ಬಳಕೆಯಲ್ಲ. ಶೇ 4ರಷ್ಟು ಮಾತ್ರ ಇಲ್ಲಿ ‍ಪುನರ್‌ಬಳಕೆಯಾಗುತ್ತಿದೆ. ಕಸದಿಂದ ಬರುವ ಕೊಳಚೆ ನೀರು, ಪ್ಲಾಸ್ಟಿಕ್‌, ಇತರ ಕಸಗಳನ್ನು ಬೇರ್ಪಡಿಸಿ ಕೃಷಿ, ಇತರ ಕೆಲಸಗಳಿಗೆ ಹೇಗೆ ಬಳಸಬಹುದು ಎಂಬ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ, ‘ಎಲ್ಲ ವಿದ್ಯಾರ್ಥಿಗಳೂ ವಿಜ್ಞಾನಿಗಳೇ ಆಗಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಿ, ಸರಿಯಾದ ಮಾರ್ಗದರ್ಶನ ಮಾಡುವುದು ಅಗತ್ಯ. ವೇಗ ಮತ್ತು ಚುರುಕಿನ ಯುವಪೀಳಿಗೆಯು ನಮ್ಮ ಮುಂದಿದೆ. ಅದಕ್ಕೆ ಸರಿಯಾಗಿ ಶಿಕ್ಷಕರು ವೇಗಗೊಳ್ಳಬೇಕಾದ ಅಗತ್ಯ ಇದೆ’ ಎಂದು ತಿಳಿಸಿದರು.

ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಅಧ್ಯಕ್ಷ ಡಾ. ಬಿ.ಇ. ರಂಗಸ್ವಾಮಿ, ‘ಜನಸಾಮಾನ್ಯರಿಗೆ ಉಪಯೋಗ ಆಗುವುಂಥವುಗಳನ್ನೇ ವಿದ್ಯಾರ್ಥಿಗಳು ಕಂಡು ಹಿಡಿಯುತ್ತಿದ್ದಾರೆ. ಇದು ಭವಿಷ್ಯದ ಭಾರತಕ್ಕೆ ಉಪಯೋಗಕಾರಿ’ ಎಂದರು.

ಅನಮೋಲ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಜಿ. ದಿನೇಶ್‌, ‘ಕಳೆದ 10 ವರ್ಷದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ತಂಡ ಎಂಟು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಅದರಲ್ಲಿ ನಾಲ್ಕು ಬಾರಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದೆ’ ಎಂದು ಹೇಳಿದರು.

ವಿಜ್ಞಾನ ಪರಿಷತ್‌ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಉದಯರತ್ನ ಕುಮಾರ್‌, ವಿಜ್ಞಾನ ವಿಷಯ ಪರಿವೀಕ್ಷಕಿ ಆರ್‌.ಬಿ. ವಸಂತಕುಮಾರಿ, ವಿಜ್ಞಾನ ಪರಿಷತ್‌ ಸದಸ್ಯ ಎನ್‌.ಎಂ.ಕೆ. ಲೋಕೇಶ್‌, ಅನಮೋಲ್‌ ವಿದ್ಯಾಸಂಸ್ಥೆಯ ನಿರ್ದೇಶಕಿ ಯಶಾ ದಿನೇಶ್‌ ಉಪಸ್ಥಿತರಿದ್ದರು.

ಯುವವಿಜ್ಞಾನಿ ಎನ್‌.ಎಚ್‌. ನಂದಿನಿ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಸ್ವಾಗತಿಸಿದರು. ಸಮಾವೇಶ ಸಂಯೋಜಕ ಅಂಗಡಿ ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಸಿದ್ದೇಶ್‌ ವಂದಿಸಿದರು. ವೆಂಕಟೇಶಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯಮಟ್ಟಕ್ಕೆ ಆಯ್ಕೆಗೊಂಡವರು
ಮಕ್ಕಳೇ ವಸ್ತು ಆಯ್ಕೆ ಮಾಡಿಕೊಂಡು ಮೂರು ತಿಂಗಳು ಸಂಶೋಧನೆ ನಡೆಸಿ ಈ ಸಮಾವೇಶದಲ್ಲಿ ಅವುಗಳ ಮಂಡನೆ ಮಾಡಿದ್ದಾರೆ. ಅದರಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದವರ ವಿವರ ನೀಡಲಾಗಿದೆ.

ನಗರ ಹಿರಿಯರ ವಿಭಾಗ: ದಾವಣಗೆರೆ ಜೈನ್‌ ವಿದ್ಯಾಲಯದ ಆರ್‌.ಎಸ್‌. ಶಶಾಂಕ್‌ ಪ್ರಥಮ, ಜಗಳೂರು ಎನ್‌ಎಂಕೆ ಪ್ರೌಢಶಾಲೆಯ ಬಿ.ಜೆ. ವೈಷ್ಣವಿ ದ್ವಿತೀಯ, ದಾವಣಗೆರೆ ಎಸ್‌ಜೆಎಂ ಪ್ರೌಢಶಾಲೆಯ ಎಫ್‌. ಸೀಮಾ ತೃತೀಯ.

ಗ್ರಾಮೀಣ ಹಿರಿಯರ ವಿಭಾಗ: ಅನ್‌ಮೋಲ್‌ ಪಬ್ಲಿಕ್‌ ಸ್ಕೂಲ್‌ನ ಎನ್‌.ವಿ. ಶುಕ್ಲ ಪ್ರಥಮ, ಅತ್ತಿಗೆರೆ ಮಹಾದೇವ ಕೇಸರಿ ಆಂಗ್ಲ ಮಾಧ್ಯಮ ಶಾಲೆಯ ಪಿ.ಎಂ. ಚಂದನ್‌ ದ್ವಿತೀಯ, ಅರಬಗಟ್ಟ ಸರ್ಕಾರಿ ಪ್ರೌಢಶಾಲೆಯ ಎನ್‌.ಎಚ್‌. ಕೀರ್ತನ್‌ ತೃತೀಯ.

ನಗರ ಕಿರಿಯರ ವಿಭಾಗ: ದಾವಣಗೆರೆ ಆರ್‌ವಿಕೆ ಪ್ರೌಢಶಾಲೆಯ ಕೆ.ಎಂ. ಪ್ರಥಮ್‌ ಪ್ರಥಮ, ದಾವಣಗೆರೆ ಸೇಂಟ್‌ ಜೋನ್ಸ್ ಪ್ರೌಢಶಾಲೆಯ ಅನುಷಾ ಎಸ್‌. ಹೆಗಡೆ ದ್ವಿತೀಯ.

ಗ್ರಾಮೀಣ ಕಿರಿಯ ವಿಭಾಗ: ಅನಮೋಲ್‌ ಪಬ್ಲಿಕ್‌ ಸ್ಕೂಲ್‌ನ ವೈ.ಡಿ. ಸಿರಿ ಪ್ರಥಮ, ಕೊಂಡಜ್ಜಿ ಸರ್ಕಾರಿ ಪ್ರೌಢಶಾಲೆಯ ಐ.ಎನ್‌. ದೀಪಾ ದ್ವಿತೀಯ.

ಜೈನ್‌ ವಿದ್ಯಾಲಯದ ಆರ್‌.ಎಸ್‌. ಶಶಾಂಕ್‌ ‘ಜಿಲ್ಲಾ ಬಾಲವಿಜ್ಞಾನಿ’ ಆಗಿ ಆಯ್ಕೆಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT