ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕನ್ನಡ ಭವನದಲ್ಲಿ ಸುಸಜ್ಜಿತ, ಉಚಿತ ಗ್ರಂಥಾಲಯವಿದೆ.. ಓದುಗರಿಲ್ಲ..!

ಕನ್ನಡ ಭವನದಲ್ಲಿ 8,000 ಗ್ರಂಥಗಳು, ಕಂಪ್ಯೂಟರ್‌ಗಳು ಲಭ್ಯ
Published 4 ಏಪ್ರಿಲ್ 2024, 6:55 IST
Last Updated 4 ಏಪ್ರಿಲ್ 2024, 6:55 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕವು ಕನ್ನಡಿಗರಿಗಾಗಿ, ಅದರಲ್ಲೂ ಮುಖ್ಯವಾಗಿ ‘ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ಜಿಲ್ಲೆಯ ಯುವಜನತೆಗೆ ಅನುಕೂಲವಾಗಲಿ’ ಎಂಬ ಉದ್ದೇಶದಿಂದ ಇಲ್ಲಿನ ವಿದ್ಯಾನಗರದಲ್ಲಿರುವ ಕನ್ನಡ ಭವನದಲ್ಲಿ ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿದೆ.

ಆದರೆ, ಕನ್ನಡ ರಾಜ್ಯೋತ್ಸವದ ದಿನವಾದ 2012ರ ನವೆಂಬರ್‌ 1ರಿಂದಲೇ ಲಕ್ಷಾಂತರ ರೂಪಾಯಿ ವ್ಯಯಿಸಿ ಕಲ್ಪಿಸಲಾದ ಈ ವ್ಯವಸ್ಥೆಯ ಪ್ರಯೋಜನವನ್ನು ಅಗತ್ಯ ಸಂಖ್ಯೆಯ ಓದುಗರು ಪಡೆದುಕೊಳ್ಳುತ್ತಿಲ್ಲ ಎಂಬ ಕೊರಗು ಪರಿಷತ್‌ನ ಜಿಲ್ಲಾ ಘಟಕದ್ದಾಗಿದೆ.

8,000ಕ್ಕೂ ಅಧಿಕ ಗ್ರಂಥಗಳು:

ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ದ.ರಾ. ಬೇಂದ್ರೆ, ಎಸ್.ಎಲ್‌. ಬೈರಪ್ಪ, ವಿ.ಕೃ ಗೋಕಾಕ, ಗಿರೀಶ ಕಾರ್ನಾಡ್‌, ಚಂದ್ರಶೇಖರ ಕಂಬಾರ, ಲಂಕೇಶ್‌, ತರಾಸು, ಅನಕೃ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ.ಟಿ. ಗಟ್ಟಿ, ಸೇರಿದಂತೆ ನಾಡಿನ ಪ್ರಮುಖ ಸಾಹಿತಿಗಳ ಮಹತ್ವದ ಕೃತಿಗಳೂ, ಸಂಶೋಧನಾ ನಿರತರಿಗೆ ನೆರವಾಗುವ ಆಕರ ಗ್ರಂಥಗಳೂ, ನಿಘಂಟುಗಳೂ, ಸಂಶೋಧನಾ ಗ್ರಂಥಗಳೂ,‌ ಪ್ರಮುಖರ ಆತ್ಮಚರಿತ್ರೆ, ಜಾಗತಿಕವಾಗಿ ಹೆಸರು ಮಾಡಿರುವ ಸಾಧಕರ ಕುರಿತ ಪುಸ್ತಕಗಳು ಮಾತ್ರವಲ್ಲದೆ, ನಾಡಿನ ಇತಿಹಾಸ, ಭೌಗೋಳಿಕ ಹಿನ್ನೆಲೆ, ರಾಜಮಹಾರಾಜರ ಆಳ್ವಿಕೆ, ನೈಸರ್ಗಿಕ ಸಂಪತ್ತು, ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಕ್ಷೇತ್ರದ ಆಗುಹೋಗುಗಳು, ಕ್ರೀಡಾ ಕ್ಷೇತ್ರದ ಸಾಧಕರ ಸಮಗ್ರ ವಿವರಗಳನ್ನು ಒಳಗೊಂಡ ಕೃತಿಗಳು ಇಲ್ಲಿ ಲಭ್ಯವಿವೆ.

ರಾಮಾಯಣ, ಮಹಾಭಾರತ, ಕುರ್ ಆನ್‌, ಬೈಬಲ್‌ ಒಳಗೊಂಡ ಅನೇಕ ಧಾರ್ಮಿಕ ಗ್ರಂಥಗಳು, ಸಣ್ಣಕತೆ, ಕಾದಂಬರಿ, ಕವನ ಸಂಕಲನ, ಪ್ರಬಂಧಗಳನ್ನು ಒಳಗೊಂಡ ಉದ್ಗ್ರಂಥಗಳನ್ನು ಓದುಗರ ಅನುಕೂಲಕ್ಕಾಗಿ ಖರೀದಿಸಿ ಇರಿಸಲಾಗಿದೆ. ಅನೇಕ ಸಾಹಿತ್ಯಾಸಕ್ತರು ಬಡ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಲವು ಗ್ರಂಥಗಳನ್ನು ಈ ಗ್ರಂಥಾಲಯಕ್ಕೆ ದೇಣಿಗೆ ನೀಡಿದ್ದಾರೆ. ಆದರೆ, ಕನ್ನಡ ಸಾಹಿತ್ಯಾಸಕ್ತ ಯುವಜನತೆ ಈ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ವಾಮದೇವಪ್ಪ ಕೋರಿದರು.

ಕನ್ನಡ ಭವನವು ಇಲ್ಲಿನ ಪ್ರಮುಖ ಪ್ರದೇಶವಾದ ವಿದ್ಯಾನಗರದಲ್ಲಿದೆ. ಹಲವು ಶಾಲೆ– ಕಾಲೇಜುಗಳು, 4,000ಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಸಿಸುತ್ತಿರುವ ಸರ್ಕಾರಿ ಪದವಿ ಕಾಲೇಜು ಇದೇ ಪ್ರದೇಶದಲ್ಲಿ ಅನತಿ ದೂರದಲ್ಲಿದೆ. ನಗರದ ಹೈಸ್ಕೂಲ್‌ ಮೈದಾನದ ಬಳಿ ಇರುವ ಸಾರ್ವಜನಿಕ ಕೇಂದ್ರ ಗ್ರಂಥಾಲಯದಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು, ಓದುಗರು ನಿತ್ಯ ತೆರಳುವುದರಿಂದ ಅಲ್ಲಿ ಜಾಗದ ಸಮಸ್ಯೆಯೂ ಎದುರಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳು ಅಲ್ಲಿಗೆ ಹೋಗುವ ಬದಲು ಇಲ್ಲೇ ಲಭ್ಯವಿರುವ ಸೌಲಭ್ಯದ ಸದುಪಯೋಗ ಪಡೆಯುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಪುಸ್ತಕಗಳನ್ನು ಇಲ್ಲೇ ಕುಳಿತು ಓದುವವರಿಗೆ ಸಂಪೂರ್ಣ ಉಚಿತ ಸೌಲಭ್ಯ ಇದೆ. ಒಂದೊಮ್ಮೆ ಇಲ್ಲಿನ ಕೃತಿಗಳನ್ನು ಸಮಗ್ರ ಅಧ್ಯಯನಕ್ಕಾಗಿ ಮನೆಗೆ ತೆಗೆದುಕೊಂಡು ಹೋಗಬೇಕೆಂದು ಬಯಸುವವರಿಂದ ಭದ್ರತಾ ಠೇವಣಿಯ ರೂಪದಲ್ಲಿ ₹ 500 ಇರಿಸಿಕೊಳ್ಳಲಾಗುತ್ತದೆ. ಈ ಹಣವನ್ನು ಮರಳಿ ನೀಡುವ ವ್ಯವಸ್ಥೆಯೂ ಇದೆ ಎಂದು ಅವರು ಹೇಳಿದರು.

ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿರುವ ಡಿಜಿಟಲ್ ಗ್ರಂಥಾಲಯ
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿರುವ ಡಿಜಿಟಲ್ ಗ್ರಂಥಾಲಯ
ಡಿಜಿಟಲ್‌ ಲೈಬ್ರರಿ ಸೌಲಭ್ಯ
2022ರ ನವೆಂಬರ್‌ನಲ್ಲಿ ನಾಲ್ಕು ಕಂಪ್ಯೂಟರ್‌ಗಳನ್ನು ಖರೀದಿಸಿ ಯುವ ಜನರಿಗಾಗಿ ಡಿಜಿಟಲ್‌ ಲೈಬ್ರರಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳು ಸೇರಿದಂತೆ ಕನ್ನಡ ಮತ್ತು ಇಂಗ್ಲಿಷ್‌ನ ಪ್ರಮುಖ ದಿನಪತ್ರಿಕೆಗಳು ‘ಸುಧಾ’ ‘ಮಯೂರ’ ಸೇರಿದಂತೆ ಕನ್ನಡದ ಪ್ರಮುಖ ನಿಯತಕಾಲಿಕೆಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ನಿಯತಕಾಲಿಕೆಗಳು ಈ ಗ್ರಂಥಾಲಯದಲ್ಲಿ ಲಭ್ಯ ಇವೆ. ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ಈ ಸೌಲಭ್ಯ ಸಂಪೂರ್ಣ ಉಚಿತವಾಗಿದೆ. ಉತ್ತಮ ಆಸನ ವ್ಯವಸ್ಥೆ ಕುಡಿಯುವ ನೀರು ಶೌಚಾಲಯ ಉಚಿತ ವೈಫೈ ವ್ಯವಸ್ಥೆ ಡಿಜಿಟಲ್‌ ಲೈಬ್ರರಿ ಬಳಕೆದಾರರಿಗೆ ಉಚಿತ ಇಂಟರ್‌ನೆಟ್‌ ಸೌಲಭ್ಯ ನೀಡಲಾಗಿದೆ. ನೋವಿನ ಸಂಗತಿಯೆಂದರೆ ಇಷ್ಟೆಲ್ಲ ಸೌಲಭ್ಯವಿರುವ ಈ ಗ್ರಂಥಾಲಯದ ಬಳಕೆಗೆ ಯುವಜನರೇ ಬರುತ್ತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರಿಷತ್‌ನ ಸದಸ್ಯತ್ವ ಪಡೆದುಕೊಳ್ಳಲಿ’ : ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅತ್ಯಂತ ಪುರಾತನ ಹಾಗೂ ಪ್ರಮುಖ ಸಂಸ್ಥೆ. ಸಾಹಿತ್ಯಾಸಕ್ತರಾದ ಪ್ರತಿಯೊಬ್ಬ ಕನ್ನಡಿಗರೂ ಈ ಸಂಸ್ಥೆಯ ಸದಸ್ಯತ್ವ ಪಡೆದುಕೊಳ್ಳಬೇಕು. ₹ 410 ಶುಲ್ಕ ಭರಿಸಿದಲ್ಲಿ ಆಜೀವ ಸದಸ್ಯತ್ವ ನೀಡಲಾಗುತ್ತದೆ. ಒಂದು ಗುರುತಿನ ಚೀಟಿಯನ್ನೂ ನೀಡಲಾಗುತ್ತದೆ. ಯುವಜನತೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಸದಸ್ಯತ್ವ ಪಡೆಯಬೇಕು ಎಂದು ಬಿ.ವಾಮದೇವಪ್ಪ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT