ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಧಾರ್‌ಗಾಗಿ ಬೆಳಿಗ್ಗೆ ಐದು ಗಂಟೆಯಿಂದ ನಾಡಕಚೇರಿ ಮುಂದೆ ಜನರ ಸಾಲು

ಮೂರು ದಿನಗಳಿಂದ ತಾಂತ್ರಿಕದೋಷದಿಂದ ಆಧಾರ್ ಸ್ಥಗಿತ
Published 13 ಜೂನ್ 2024, 12:39 IST
Last Updated 13 ಜೂನ್ 2024, 12:39 IST
ಅಕ್ಷರ ಗಾತ್ರ

ಆನವಟ್ಟಿ: ಬೆಳ್ಳಂಬೆಳಿಗ್ಗೆ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯ ಬಿಟ್ಟು ಆಧಾರ್ ಕಾರ್ಡ್ ಮಾಡಿಸುವುದಕ್ಕಾಗಿ, ಬೆಳಿಗ್ಗೆ ಐದು ಗಂಟೆಗೆ ಬಂದು ಕಾಯುವ ಪರಿಸ್ಥಿತಿ ಬಂದೊದಗಿದೆ. ದಿನವಿಡೀ ಕಾದರೂ ಈ ಕಾರ್ಯ ಆಗುತ್ತದೆ ಎನ್ನುವ ಗ್ಯಾರಂಟಿ ಇಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ಆನವಟ್ಟಿ ಸೇರಿ ಸುತ್ತಲ ಹಳ್ಳಿಯ ಜನರದ್ದಾಗಿದೆ.

ಹೊಸ ಆಧಾರ್ ಮಾಡಿಸುವವರು, ತಿದ್ದುಪಡಿ ಮಾಡಿಸುವವರು ವಿವಿಧ ಹಳ್ಳಿಗಳಿಂದ ಬೆಳಿಗ್ಗೆ ಐದು ಗಂಟೆಗೆ ಟೋಕನ್‍ ಪಡೆಯುವುದಕ್ಕೆ ನಾಡಕಚೇರಿ ಮುಂದೆ ಹಾಜರಿರುತ್ತದೆ. ಟೋಕನ್‍ ಪಡೆದ ನಂತರ ಆಧಾರ್ ಮಾಡಿಸಲು ಮರುದಿನ ಬರಬೇಕು. ಮೂರು ದಿನಗಳಿಂದ ತಾಂತ್ರಿಕ ತೊಂದರೆಯಿಂದ ಆಧಾರ್ ಕಾರ್ಯ ಸ‍್ಥಗಿತವಾಗಿದ್ದು, ಕಚೇರಿ ಮುಂದೆ ಅಂಟಿಸಿರುವ ನೋಟಿಸ್‍ ನೋಡಿ ಬೇಸರದಿಂದ ಹೋಗುತ್ತಿರುವ ಜನರು ವ್ಯವಸ್ಥೆ ಖಂಡಿಸಿ ಹಿಡಿಶಾಪ ಹಾಕುತ್ತಿದ್ದಾರೆ.

‘ನಾವು ರೈತರು. ಬೆಳಿಗ್ಗೆ ಹೋಲದಲ್ಲಿ ಕೆಲಸವಿರುತ್ತದೆ. ಆಧಾರ್ ಕಾರ್ಡ್ ಮಾಡುವವರು 10 ಗಂಟೆಗೆ ಬರುತ್ತಾರೆ. ಹಳ್ಳಿಗಳಿಂದ ಬಹಳ ಜನ ಬರುವುದರಿಂದ ಟೋಕನ್‍ ಸಿಗುವುದಿಲ್ಲ. ಹಾಗಾಗಿ ಬೆಳಿಗ್ಗೆ ಐದು ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತೇವೆ. ನಮ್ಮ ಕೆಲಸ ಕಾರ್ಯ ಹಾಳಾಗದಂತೆ ಸಂಜೆ ನಾಲ್ಕು ಗಂಟೆಯ ನಂತರ ಟೋಕನ್‍ ನೀಡುವಂತೆ ಆಗಬೇಕು. ಮರುದಿನ 10 ಗಂಟೆಗೆ ಬಂದು ಆಧಾರ್ ಮಾಡಿಸಿಕೊಳ್ಳುತ್ತೇವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ’ ಎಂದು ಕೃಷಿಕ ಲೋಕಪ್ಪ ಹುಣಸವಳ್ಳಿ ಒತ್ತಾಯಿಸಿದರು.

‘ಹತ್ತು ವರ್ಷದೊಳಗಿನ ಮಕ್ಕಳು ಜೂನ್ 14ರ ಒಳಗೆ ಆಧಾರ್ ತಿದ್ದುಪಡಿ ಮಾಡಿಸಿಕೊಳ್ಳದೆ ಇದ್ದರೆ ಸಾವಿರ ದಂಡ ಕಟ್ಟುಬೇಕಾಗುತ್ತದೆ ಎಂದು ಒಂದು ಕಡೆ ಸರ್ಕಾರ ಹೇಳುತ್ತದೆ. ಇಲ್ಲಿ ನೋಡಿದರೆ ಮೂರು ದಿನದಿಂದ ಆಧಾರ್ ಕಚೇರಿಯ ಬಾಗಿಲ ಮೇಲೆ ನೋಟಿಸ್‍ ಅಂಟಿಸಿದ್ದಾರೆ. ಅದರ ಮೇಲೆ ದಿನಾಂಕ ಹಾಕಿಲ್ಲ. ಯಾವಾಗ ಬರಬೇಕು ಎಂದೂ ತಿಳಿಸಿಲ್ಲ. ತಾಂತ್ರಿಕ ದೋಷದಿಂದ ಆಧಾರ್ ನಿಲ್ಲಿಸಲಾಗಿದೆ ಎಂಬುದರ ವಿವರ ಹಾಕಿದ್ದಾರೆ. ಜನ ಬಹಳ ಬರುವುದರಿಂದ ಪೋಸ್ಟ್ ಆಫೀಸ್‍ ಸೇರಿ ಇತರ ಸರ್ಕಾರಿ ಕಚೇರಿಗಳಲ್ಲೂ ಆಧಾರ್ ಸೇವೆ ದೊರೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಈ ಕಚೇರಿಯಲ್ಲಿ ದಿನಕ್ಕೆ 20 ಆಧಾರ್ ಮಾತ್ರ ಮಾಡಲಾಗುತ್ತದೆ’ ಎಂದು ಕೃಷಿಕ ಮಕ್‍ಬುಲ್‍ ಸಾಬ್‍ ದ್ವಾರಳ್ಳಿ ಅಕ್ರೋಶ ವ್ಯಕ್ತಪಡಿಸಿದರು.

‘ಮಗಳಿಗೆ ಆಧಾರ್ ಕಾರ್ಡ್ ಇಲ್ಲದೆ ಹಾಸ್ಟೆಲ್‍ನಲ್ಲಿ ಪ್ರವೇಶ ಸಿಗುತ್ತಿಲ್ಲ. ಮೂರು ದಿನಗಳಿಂದ ಬರುತ್ತಿದ್ದೇನೆ. ಅದೇ ಬೋರ್ಡ್ ನೋಡಿ ಹೋಗುವಂತೆ ಆಗಿದೆ’ ಎಂದು ಹೆಸರು ಬಹಿರಂಗಗೊಳಿಸು ಇಚ್ಚಿಸದ ತಂದೆ ಆಳಲು ತೋಡಿಕೊಂಡರು.

‘ಸರತಿ ಸಾಲಿನಲ್ಲಿ ಬಂದವರಿಗೆ ಆಧಾರ್ ಮಾಡಿಕೊಂಡುತ್ತಿದ್ದೇವೆ. ದಿನಕ್ಕೆ 20 ಆಧಾರ್ ಮಾಡಲು ಸಾಧ್ಯ. ಅದರಲ್ಲೂ ಕರೆಂಟ್‍ ಹೋದರೆ ಅದರಲ್ಲೂ ಉಳಿದುಕೊಂಡು ಬಿಡುತ್ತವೆ. ಸರ್ವರ್‌ನ ತಾಂತ್ರಿಕ ದೋಷದಿಂದ ಆಧಾರ್ ಮಾಡಲು ಆಗುತ್ತಿಲ್ಲ. ಎರಡು ದಿನಗಳಲ್ಲಿ ಸರಿ ಹೋಗುತ್ತದೆ ಎಂದು ಭಾವಿಸಿದ್ದೆವು. ಇನ್ನೂ ಸರಿಯಾಗಿಲ್ಲ. ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ. ಕೂಡಲೇ ಆಧಾರ್ ಸೇವೆ ಪ್ರಾರಂಭಿಸುತ್ತೇವೆ’ ಎನ್ನುವರು ಕಂಪ್ಯೂಟರ್‌ ಆಪರೇಟರ್ ಮಂಜುನಾಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT