ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದೂರು ಗುಡ್ಡ ಮಣ್ಣು ಲೂಟಿ: ಅಧಿಕಾರಿಗಳ ಜಾಣ ಕುರುಡು

ಅಕ್ರಮ ಮಣ್ಣು ಸಾಗಾಣಿಕೆದಾರರಿಂದಾಗಿ ಕರಗುತ್ತಿರುವ ಕುಂದೂರು ಗುಡ್ಡ
Last Updated 19 ಜನವರಿ 2023, 3:50 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಕುಂದೂರು ಗುಡ್ಡದಲ್ಲಿ ಮಣ್ಣು ಲೂಟಿಕೋರರ ಹಾವಳಿ ಹೆಚ್ಚಾಗಿದ್ದು, ದಿನೇ ದಿನೇ ಗುಡ್ಡ ಸವೆದು ಹೋಗುತ್ತಿದೆ. ಎತ್ತರದ ಸ್ಥಳದಲ್ಲಿರುವ ಈ ಗುಡ್ಡದ ಮೇಲೆ ನಿಂತು ಕಣ್ಣು ಹಾಯಿಸಿದರೆ ಕುಂದೂರು ಸೇರಿ 8ರಿಂದ 10 ಗ್ರಾಮಗಳ ದರ್ಶನವಾಗುತ್ತದೆ. 15 ಕಿ.ಮೀ ದೂರದ ಹೊನ್ನಾಳಿಯವರೆಗೂ ಕಣ್ಣು ಹಾಯಿಸಬಹುದು. ಕಂದಾಯ ಇಲಾಖೆಗೆ ಸೇರಿದ ಈ ಗುಡ್ಡದಲ್ಲಿ ದಿನೇ ದಿನೇ ಮಣ್ಣು ಬರಿದಾಗುತ್ತಿದೆ.

ಈ ಗುಡ್ಡದ ಕೆಳಗೆ 300 ಎಕರೆ ಹಿಡುವಳಿ ಜಮೀನು ಇದ್ದು, ಅವುಗಳಿಗೆ ಸಾಗುವಳಿ ಚೀಟಿಯನ್ನು ನೀಡಲಾಗಿದೆ ಎನ್ನಲಾಗಿದೆ. ಅದನ್ನು ಹೊರತುಪಡಿಸಿದರೆ ಉಳಿದ ಕೆಲ ಭಾಗವನ್ನು ವಿದ್ಯುತ್ ಉತ್ಪಾದನೆಗಾಗಿ ಸುಜಲಾನ್ ಕಂಪನಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಲೀಜ್‌ಗೆ ಆಧಾರದಲ್ಲಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸುತ್ತಿಲ್ಲ.

‘ಈ ಗುಡ್ಡದ ಸರ್ವೆ ನಡೆದಿಲ್ಲ. ಐದಾರು ವರ್ಷಗಳಿಂದ ಈ ಗುಡ್ಡವನ್ನು ರಸ್ತೆಯಂಚಿನಿಂದ ಹಂತ ಹಂತವಾಗಿ ಅಗೆದು ತೆಗೆಯುತ್ತಾ ಗುಡ್ಡದ ನೆತ್ತಿಗೆ ಹೋಗುವಂತಹ ಹುನ್ನಾರ ನಡೆದಿದೆ. ಇನ್ನೂ ಹತ್ತಾರು ವರ್ಷಗಳು ಮಣ್ಣಿನ ಲೂಟಿ ಇದೇ ರೀತಿ ಮುಂದುವರಿದರೆ ಈ ಗುಡ್ಡವನ್ನು ಕೇವಲ ಚಿತ್ರಪಟಗಳಲ್ಲಿ ನೋಡಬೇಕಾದೀತು. ಲೂಟಿಕೋರರು ನುಂಗಿ ಮಂಗಮಾಯ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಸಂಘ–ಸಂಸ್ಥೆಗಳ ಹೋರಾಟಗಾರರು ದೂರುತ್ತಿದ್ದಾರೆ.

ಸರ್ಕಾರದ ಖಜಾನೆ ಸೇರದ ರಾಯಧನ: ಈ ಗುಡ್ಡದಲ್ಲಿ ಕೇವಲ ಮಣ್ಣು ಲೂಟಿ ಮಾಡುವುದಲ್ಲದೇ ಮಣ್ಣು ಸಾಗಾಣಿಕೆ ಮಾಡುವವರು ಸರ್ಕಾರಕ್ಕೆ ಒಂದು ನಯಾ ಪೈಸೆಯಷ್ಟು ರಾಯಧನವನ್ನೂ ಪಾವತಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದರಿಂದ ವಾರ್ಷಿಕವಾಗಿ ಸರ್ಕಾರಕ್ಕೆ ₹25 ಲಕ್ಷದಿಂದ ₹ 50 ಲಕ್ಷಕ್ಕೂ ಅಧಿಕ ಆದಾಯ ನಷ್ಟವಾಗುತ್ತಿದೆ.

ಈ ಗುಡ್ಡದ ಮಣ್ಣು ಹೊಸದಾಗಿ ಲೇಔಟ್ ಮಾಡುವವರ ಪಾಲಾಗುತ್ತಿದೆ. ಒಂದು ಲಾರಿಗೆ ಬಾಡಿಗೆಯೂ ಸೇರಿ ₹ 4,000ದಿಂದ ₹5,000ಕ್ಕೆ ಮಾರಿಕೊಳ್ಳಲಾಗುತ್ತಿದೆ. ಈ ಗ್ರಾಮದಿಂದ ಹೊರ ಜಿಲ್ಲೆಗಳಿಗೆ ಸಾಗಿಸುವುದಾದರೆ ₹ 8,000ದಿಂದ ₹ 10,000ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

‘ಕುಂದೂರು ಗ್ರಾಮದ ಗುತ್ತಿಗೆದಾರರು, ತಾಲ್ಲೂಕಿನ ದೊಡ್ಡ ದೊಡ್ಡ ಗುತ್ತಿಗೆದಾರರು, ಕೆಲವು ಜನಪ್ರತಿನಿಧಿಗಳು ಹಾಗೂ ಲ್ಯಾಂಡ್ ಡೆವಲಪರ್ಸ್‌ಗಳು ಇಟಾಚಿಗಳನ್ನು ಬಳಸಿ ಅಕ್ರಮವಾಗಿ ಮಣ್ಣು ತೆಗೆದು ದೊಡ್ಡ ದೊಡ್ಡ ಲಾರಿಗಳಲ್ಲಿ ಸಾಗಿಸುತ್ತಿದ್ದಾರೆ. ಈ ಹಿಂದೆ ಕೆಲವು ತಹಶೀಲ್ದಾರ್‌ಗಳು ಗುಡ್ಡಕ್ಕೆ ಭೇಟಿ ನೀಡಿ ಮಣ್ಣು ಸಾಗಾಣಿಕೆ ಮಾಡದಂತೆ ತಡೆದಿದ್ದರು’ ಎಂದು ರೆವಿನ್ಯೂ ಇನ್‌ಸ್ಪೆಕ್ಟರ್ ರಮೇಶ್ ತಿಳಿಸಿದರು.

‘ಅಕ್ರಮ ಮಣ್ಣು ಸಾಗಾಣಿಕೆದಾರರು ಹಗಲು ಬದಲು ರಾತ್ರಿಯ ವೇಳೆ ಮಣ್ಣು ಸಾಗಾಣಿಕೆ ಮಾಡುವ ದಂಧೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆದ್ದರಿಂದ ತಾಲ್ಲೂಕು ಆಡಳಿತ ಈ ಗುಡ್ಡವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಕಾರ್ಯ ನಡೆಸಬೇಕಾಗಿದೆ. ಗುಡ್ಡದ ಕೆಳಗಿನ ಹಿಡುವಳಿದಾರರಿಗೆ ತೊಂದರೆಯಾಗದಂತೆ, ವಿದ್ಯುತ್ ಉತ್ಪಾದನೆಗೆ ಕಂಪನಿಗೆ ನೀಡಿದ ಗುತ್ತಿಗೆಗೆ ಧಕ್ಕೆ ಬಾರದಂತೆ ಉಳಿದ ಭಾಗವನ್ನು ಇಡಿಯಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಭಾಗದ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳಬೇಕಾಗಿದೆ. ಮಣ್ಣು ಅಕ್ರಮ ಸಾಗಾಣಿಕೆದಾರರ ಮಟ್ಟ ಹಾಕುವಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು’ ಎಂದು ನಾಗರಿಕರು ಒತ್ತಾಯಿಸುತ್ತಾರೆ.

‘ಇಲ್ಲಿನ ಅಕ್ರಮ ಮಣ್ಣು ಸಾಗಾಣಿಕೆ ಕುರಿತು ಕುಂದೂರು ಭಾಗದ ರೆವಿನ್ಯೂ ಇನ್‌ಸ್ಪೆಕ್ಟರ್ ರಮೇಶ್ ಅವರು ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಲೆಕ್ಕಾಧಿಕಾರಿ ಶ್ರೀಕಾಂತ್ ಹೇಳಿದರು.

ಹಲವು ವರ್ಷಗಳಿಂದ ಗುಡ್ಡದ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ಈ ಹಿಂದಿನ ತಹಶೀಲ್ದಾರ್, ನೂತನ ತಹಶೀಲ್ದಾರ್ ಅವರ ಗಮನಕ್ಕೂ ತಂದಿದ್ದೇವೆ. ಗ್ರಾಮ ಲೆಕ್ಕಾಧಿಕಾರಿಗಳಿಂದ ತಹಶೀಲ್ದಾರ್‌ವರೆಗೂ ದೂರು ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಒಂದು ರೀತಿಯಲ್ಲಿ ಸರ್ಕಾರವೇ ಲೂಟಿಕೋರರ ಬೆನ್ನಿಗೆ ನಿಂತಿದೆ ಎನ್ನುವ ಅನುಮಾನ ಬರುತ್ತಿದೆ. ಇಷ್ಟಾದರೂ ಅಲ್ಲಿ ನಿರಂತರವಾಗಿ ಅಕ್ರಮ ಮಣ್ಣು ಸಾಗಾಣಿಕೆ ನಡೆಯುತ್ತಲೇ ಇದೆ’ ಎಂದು ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕು ಕರವೇ ಯುವಸೇನೆ ಅಧ್ಯಕ್ಷ ಮಂಜು, ಪ್ರಧಾನ ಕಾರ್ಯದರ್ಶಿ ಮನೋಜ್‍ಕುಮಾರ್ ಆರೋಪಿಸುತ್ತಾರೆ.

ಕುಂದೂರು ಗುಡ್ಡದ ಮಣ್ಣು ಅಕ್ರಮ ಸಾಗಾಣಿಕೆ ಕುರಿತು ತಾಲ್ಲೂಕು ಕಚೇರಿಗೆ ಈ ಹಿಂದೆ ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇವೆ.
ರಮೇಶ್, ರಾಜಸ್ವ ನಿರೀಕ್ಷಕರು, ಕುಂದೂರು

ನಾನು ಈಚೆಗೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿದ್ದು, ಮಣ್ಣು ಅಕ್ರಮ ಸಾಗಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇನೆ.

ತಿರುಪತಿ ಪಾಟೀಲ್,ತಹಶೀಲ್ದಾರ್, ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT