ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಲವ್ ಜಿಹಾದ್‌ ಜಾಲಕ್ಕೆ ಸಿಲುಕಿದವರ ನೆರವಿಗೆ ಸಹಾಯವಾಣಿ’

Published 30 ಮೇ 2024, 7:12 IST
Last Updated 30 ಮೇ 2024, 7:12 IST
ಅಕ್ಷರ ಗಾತ್ರ

ದಾವಣಗೆರೆ: ಲವ್ ಜಿಹಾದ್ ಜಾಲಕ್ಕೆ ಸಿಲುಕಿ ತೊಂದರೆಗೆ ಒಳಗಾಗುವ ಹಿಂದೂ ಯುವತಿಯರಿಗೆ ನೆರವಾಗಲು ಶ್ರೀರಾಮ ಸೇನೆ ಸಂಘಟನೆಯು ಸಹಾಯವಾಣಿ ಆರಂಭಿಸಿದೆ.

‘ದಿನದ 24 ಗಂಟೆಯೂ ಸಹಾಯವಾಣಿ ಕೆಲಸ ಮಾಡಲಿದ್ದು, ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಿ ನೆರವು ಪಡೆಯಬಹುದು. ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರೆ ಸಂಬಂಧಿಸಿದ ಜಿಲ್ಲಾ ತಂಡಗಳು ಸಹಾಯಕ್ಕೆ ಧಾವಿಸುತ್ತವೆ. ಆ ಮಹಿಳೆಯರಿಗೆ ಕಾನೂನು ಸಲಹೆ, ಶಿಕ್ಷಣಕ್ಕೆ ಸಹಾಯ, ಸ್ವಯಂ ಉದ್ಯೋಗ ಕಲ್ಪಿಸುವುದು ಸೇರಿ ಅವರಿಗೆ ಅಗತ್ಯವಿರುವ ನೆರವು ನೀಡಲಾಗುವುದು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲವ್ ಜಿಹಾದ್ ಕ್ಯಾನ್ಸರ್‌ನಂತೆ ವ್ಯಾಪಿಸಿದ್ದು, ದೇಶದಲ್ಲಿ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ದೇಶದಲ್ಲಿ ಪ್ರತಿ ದಿನ 172 ಯುವತಿಯರು ನಾಪತ್ತೆಯಾಗುತ್ತಿದ್ದಾರೆ, 169 ಯುವತಿಯರ ಅಪಹರಣವಾಗುತ್ತಿದೆ. ಆ್ಯಸಿಡ್ ದಾಳಿಗಳು ನಡೆಯುತ್ತಿವೆ’ ಎಂದು ತಿಳಿಸಿದರು.

‘ಹೋಪ್ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ 2023ರಲ್ಲಿ 153 ಹಿಂದೂ ಯುವತಿಯರ ಕೊಲೆಗಳಾಗಿದ್ದು, ಅವರಲ್ಲಿ ಶೇ 24.5ರಷ್ಟು ಬಾಲಕಿಯರು, ಶೇ 17.5ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವತಿಯರ ಕೊಲೆಗಳು ನಡೆದಿದ್ದು, ಯುವಕರು ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ. ಅಶ್ಲೀಲ ವಿಡಿಯೋ ಮಾಡುವುದು, ಫೋಟೋ ತೆಗೆಯುವುದು, ಮಾದಕ ವಸ್ತುಗಳ ಜಾಲಕ್ಕೆ ತಳ್ಳುವುದು ಹೀಗೆ ವಿವಿಧ ರೀತಿಯಲ್ಲಿ ಅವರ ಶೋಷಣೆಯಾಗುತ್ತಿದೆ’ ಎಂದು ಹೇಳಿದರು.

‘ಶ್ರೀರಾಮ ಸೇನೆಯು 20 ವರ್ಷಗಳಿಂದ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುತ್ತ ಬಂದಿದೆ. ಕಳೆದ 2-3 ತಿಂಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಈಚೆಗೆ ನಡೆದ ನೇಹಾ ಹತ್ಯೆಯೇ ಸಾಕ್ಷಿ’ ಎಂದು ಹೇಳಿದರು.

‘ದೇಶದಲ್ಲಿ 2014-19ರ ಅವಧಿಯಲ್ಲಿ 21,684 ಯುವತಿಯರು ನಾಪತ್ತೆಯಾಗಿದ್ದಾರೆ. 2019-21ರ ಅವಧಿಯಲ್ಲಿ 13.13 ಲಕ್ಷ ಮಹಿಳೆಯರ ಅಪಹರಣ, ಅತ್ಯಾಚಾರ ಘಟನೆಗಳು ನಡೆದಿವೆ ಎಂದು ಅಂಕಿ ಅಂಶ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಣಿ ಸರ್ಕಾರ್ ಮಾತನಾಡಿ,

‘ದಾವಣಗೆರೆ ಜಿಲ್ಲೆಯಲ್ಲೂ ಲವ್ ಜಿಹಾದ್ ಹಾವಳಿ ಇದ್ದು, ಪ್ರತಿಷ್ಠಿತ ಕುಟುಂಬದ ಮಹಿಳೆಯೇ ಇದರ ಜಾಲಕ್ಕೆ ಬಲಿಯಾಗಿದ್ದಾರೆ. ಇದರ ವಿರುದ್ಧ ಜಾಗೃತಿ ಮೂಡಿಸಲಾಗುವುದು. ಕಾಲೇಜುಗಳು, ಹೋಟೆಲ್, ಜೂಸ್ ಸ್ಟಾಲ್ ಇನ್ನಿತರ ಕಡೆಗಳಲ್ಲಿ ಅರಿವು ಮೂಡಿಸುವ ಸ್ಟಿಕ್ಕರ್ ಅಂಟಿಸಲಾಗುವುದು’ ಎಂದು ಹೇಳಿದರು.

ಸಂಘಟನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಮುಖಂಡರಾದ ಪಿ. ಸಾಗರ್, ಬಿ.ಜಿ. ರಾಹುಲ್, ಶ್ರೀಧರ್, ಶಶಿಕುಮಾರ್, ಶಿವರಾಜ ಪೂಜಾರಿ, ಸುನಿಲ್ ವಾಲಿ, ರಾಜು, ಸಿದ್ಧಾರ್ಥ, ವಿನಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT