ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಅವಸಾನದ ಅಂಚು ತಲುಪಿರುವ ಬಾಪೂಜಿ ಹಾಲ್‌

ಕಳ್ಳರ ಕಾಟ, ಸರ್ಕಾರದ ನಿರ್ಲಕ್ಷ್ಯದಿಂದ ದುಃಸ್ಥಿತಿಯಲ್ಲಿರುವ ಕಟ್ಟಡ
Last Updated 2 ಅಕ್ಟೋಬರ್ 2021, 2:40 IST
ಅಕ್ಷರ ಗಾತ್ರ

- ಎಂ. ನಟರಾಜನ್‌

ಮಲೇಬೆನ್ನೂರು: ಇಲ್ಲಿನ ಸ್ವಾಂತಂತ್ರ್ಯ ಪೂರ್ವದ ‘ಬಾಪೂಜಿ ಹಾಲ್‌’ ಸೂಕ್ತ ಪಾಲನೆ ಇಲ್ಲದೆ ಅವಸಾನದ ಅಂಚು ತಲುಪಿದೆ.

ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮಹಾತ್ಮ ಗಾಂಧಿ ಅವರು 1927ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ ಭಾಷಣ ಮಾಡಿದ್ದರು. ಬ್ರಿಟಿಷ್‌ ಸೇನಾಧಿಕಾರಿಗಳು ಇಲ್ಲಿ ಕುದುರೆಗಳನ್ನು ಕಟ್ಟುತ್ತಿದ್ದರು. ಕಾಲಾನುಕ್ರಮದಲ್ಲಿ ಪ್ರವಾಸಿ ಬಂಗಲೆಯಾಗಿತ್ತು.

ದೊಡ್ಡ ಸಭಾಂಗಣ, 4 ಕೊಠಡಿ ಇದ್ದು, ನಾಲ್ಕು ದಿಕ್ಕಿಗೆ ದ್ವಾರಗಳಿವೆ. ತೊಲೆ, ಕಿಟಕಿ, ಬಾಗಿಲುಗಳಿಗೆ ತೇಗದ ಮರ ಬಳಸಲಾಗಿದೆ. ಮಂಗಳೂರು ಹೆಂಚಿನ ಚಾವಣಿ, ಬೆಳಕು ಹಂಚು ಹೊಂದಿಸಿದ್ದು, ನೆಲಕ್ಕೆ ಕಲ್ಲುಹಾಸು ಹಾಕಲಾಗಿದೆ. ಕಟ್ಟಡವನ್ನು ಸುಣ್ಣದ ಗಾರೆಯಲ್ಲಿ ನಿರ್ಮಿಸಲಾಗಿದೆ.

ಹೊಸ ಆರ್‌ಸಿಸಿ ಕಟ್ಟಡಗಳು ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಬಿದ್ದು ಹೋಗಿವೆ. ಹಳೆ ಕಟ್ಟಡವನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಕಟ್ಟಡದ ಕಿಟಕಿ, ಬಾಗಿಲು ಕದ್ದಿದ್ದಾರೆ. ಹೆಂಚುಗಳನ್ನು ಚೂರು ಚೂರು ಮಾಡಿದ್ದಾರೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿದೆ.

ಕಟ್ಟಡದ ನವೀಕರಣಕ್ಕೆ ಪುರಸಭೆಯು ಈಚೆಗೆ ₹ 9 ಲಕ್ಷ ಮೀಸಲಿಟ್ಟಿತ್ತು. ಹೊಸ ಕಟ್ಟಡ ನಿರ್ಮಾಣಕ್ಕೆ ₹ 30 ಲಕ್ಷ ಅನುದಾನ ನೀಡುವುದಾಗಿ ಆದೇಶ ಹೊರಡಿಸಿತ್ತು. ಆದರೆ ಯೋಜನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನನೆಗುದಿಗೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ಜನಪ್ರತಿನಿಧಿಗಳು ನೀಡಿದ ಕಟ್ಟಡ ನವೀಕರಣದ ಭರವಸೆ ಈಡೇರಿಲ್ಲ.

ಹೊನ್ನಾಳಿ ಹಾಗೂ ಹರಪನಹಳ್ಳಿಯಲ್ಲಿ ಬಾಪೂಜಿ ಅವರು ಭೇಟಿ ನೀಡಿದ್ದ ಕಟ್ಟಡದ ರಕ್ಷಣೆ ಮಾಡಲಾಗಿದೆ. ಹರಿಹರ ತಾಲ್ಲೂಕಿನಲ್ಲಿ ಬಾಪೂಜಿ ನೆನಪಿನ ಏಕ ಮಾತ್ರ ಕಟ್ಟಡವನ್ನು ರಕ್ಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

***

ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಧನ ಸಂಗ್ರಹಿಸುವ ಮೂಲಕ ಕಟ್ಟಡ ಕಟ್ಟಲು ಯೋಜನೆ ತಯಾರಿಸುತ್ತೇವೆ.
- ಬೆಣ್ಣೆಹಳ್ಳಿ ಹಾಲೇಶಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ

ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ. ಬಾಪೂಜಿ ಸಭಾಂಗಣ, ಗ್ರಂಥಾಲಯ ನಿರ್ಮಿಸಲು ಸಮಾನಮನಸ್ಕರ ಸಭೆ ನಡೆಸಿ ತೀರ್ಮಾನಿಸಲಾಗುವುದು.

- ಬಿ.ಎಂ. ವಾಗೀಶ್ ಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT