ಶುಕ್ರವಾರ, ಡಿಸೆಂಬರ್ 4, 2020
24 °C
ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ಅನ್ನದ ಭಾಷೆಯಾಗಿ ರೂಪಿಸಿ: ಶಾಸಕ ಎಸ್‌. ರಾಮಪ್ಪ

 ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಅನಿರ್ವಾಯತೆ ಸೃಷ್ಟಿಯಾಗಿರುವುದು ವಿಪರ್ಯಾಸ. ಸರ್ಕಾರ ಕನ್ನಡ ಭಾಷೆಯನ್ನು ಅನ್ನ ನೀಡುವ ಭಾಷೆಯನ್ನಾಗಿ ರೂಪಿಸಬೇಕು. ಈ ಮೂಲಕ ಭಾಷಾ ಉಳಿವಿಗೆ ಕ್ರಮ ಜರುಗಿಸಬೇಕು ಎಂದು ಶಾಸಕ ಎಸ್‌. ರಾಮಪ್ಪ  ಒತ್ತಾಯಿಸಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ, ಸರ್ಕಾರಿ ಅಧಿಕಾರಿಗಳ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಯಲ್ಲಿ ದಾಖಲಿಸಬೇಕು. ತಾಂತ್ರಿಕ ಹಾಗೂ ವೈದ್ಯಕೀಯ ಶಾಸ್ತ್ರದ ಪಠ್ಯವನ್ನು ಕನ್ನಡದಲ್ಲಿ ಪರಿಷ್ಕರಿಸುವ ಮೂಲಕ ಭಾಷಾ ಬೆಳವಣಿಗೆಗೆ ಪೂರಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಉಪನ್ಯಾಸ ನೀಡಿದ ಮುಖ್ಯಶಿಕ್ಷಕ ಎಸ್.ಎಚ್. ಹೂಗಾರ್, ‘ಮಾತೃಭಾಷೆ ಆಯಾ ಭಾಷಿಕರ ಭಾವುಕ ಸಂಗತಿ. ಪ್ರತಿಯೊಬ್ಬ ಕನ್ನಡಿಗ ಭಾಷೆಯ ಬಗ್ಗೆ ಗೌರವ ಭಾವನೆ ಹೊಂದಿರಬೇಕು. ಕನ್ನಡ ಸಿನಿಮಾ, ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವ ಜತೆಗೆ ಸಾಮಾಜಿಕ ತಾಣಗಳಲ್ಲಿ ಕನ್ನಡ ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು’ ಎಂದರು.

ದ್ವಜಾರೋಹಣ ಮಾಡಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿದರು.

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಂ. ಅಭಿಷೇಕ್ ಹಾಗೂ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸಿದೆ 56 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಂ. ಶ್ರೀದೇವಿ, ಎಪಿಎಂಸಿ ಸಮಿತಿ ಅಧ್ಯಕ್ಷ ಹನುಮಂತ ರೆಡ್ಡಿ, ನಗರಸಭೆ ಸದಸ್ಯ ಎಂ. ಬಾಬುಲಾಲ್, ಪೌರಾಯುಕ್ತೆ ಎಸ್. ಲಕ್ಷ್ಮೀ, ಬಿಇಒ ಯು. ಬಸವರಾಜಪ್ಪ,ಇಒ ಗಂಗಾಧರನ್, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು