ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನುಷ್ಯ ಉತ್ಪಾದಿಸಿದ ತಂಬಾಕಿಗೆ ಆತನೇ ಬಲಿ’

Last Updated 13 ಡಿಸೆಂಬರ್ 2019, 8:42 IST
ಅಕ್ಷರ ಗಾತ್ರ

ದಾವಣಗೆರೆ: ಮನುಷ್ಯ ಉತ್ಪಾದಿಸುವ ತಂಬಾಕಿಗೆ ಆತನೇ ದಾಸನಾಗುತ್ತಿದ್ದಾನೆ. ಕೊನೆಗೆ ಬಲಿಯೂ ಆಗುತ್ತಿದ್ದಾನೆ ಎಂದು ಓರಲ್ ಮೆಡಿಸಿನ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಅಣ್ಣಿಗೇರಿ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಂಯುಕ್ತವಾಗಿ ಚೇತನಾ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೋಟ್ಪಾ ಕಾನೂನು ಅನುಷ್ಠಾನ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ತಂಬಾಕು ಉತ್ಪನ್ನವು 17ನೇ ಶತಮಾನದಲ್ಲಿ ಭಾರತಕ್ಕೆ ಪರಿಚಯವಾಯಿತು. ಅಂದಿನಿಂದಲೂ ಸಮಾಜದ ಎಲ್ಲಾ ವರ್ಗದ ಜನ ತಂಬಾಕನ್ನು ಬಳಸುತ್ತಿದ್ದಾರೆ. ತಂಬಾಕಿನಲ್ಲಿ ನಿಕೋಟಿನ್ ಎಂಬ ರಾಸಾಯನಿಕ ಅಂಶವಿದ್ದು, ಇದು ದೇಹದೊಳಗೆ ಸೇರಿಕೊಂಡು ನಶೆ ಉಂಟು ಮಾಡಿ ತಾತ್ಕಾಲಿಕ ಖುಷಿ ನೀಡುವ ಕಾರಣದಿಂದಾಗಿ ತಂಬಾಕಿನ ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪೂರ್ವಜರು ಆರಂಭಿಸಿದ ತಂಬಾಕು ಬೆಳೆ ಇಂದು ಎಲ್ಲರ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನವಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಮಾಧ್ಯಮಗಳು ತಂಬಾಕು ಬಳಕೆಯನ್ನು ಪ್ರೇರೆಪಿಸುವಂತಹ ಕೆಲಸ ಮಾಡುತ್ತಿವೆ. ಮಾಧ್ಯಮಗಳಲ್ಲಿ ಭಿತ್ತರಿಸುವ ಜಾಹೀರಾತುಗಳು, ಚಲನಚಿತ್ರಗಳಲ್ಲಿ ಧೂಮಪಾನ ಮತ್ತು ಮದ್ಯಪಾನಗಳನ್ನು ಬಳಸುವ ರೀತಿಯು ಯುವಜನರಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ಆಸಕ್ತಿ ಮೂಡಿಸುತ್ತಿವೆ ಎಂದರು.

ಒಂದು ಗುಟ್ಕಾ ಪ್ಯಾಕೆಟ್‌ನಲ್ಲಿ ಸುಮಾರು ಮೂರು ಸಾವಿರ ರಾಸಾಯನಿಕಗಳಿರುತ್ತವೆ. ಇವು ದೇಹದಲ್ಲಿ ಸೇರಿಕೊಂಡು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗುಟ್ಕಾ ಹಾಗೂ ಸಿಗರೇಟ್ ಸೇವನೆಯಿಂದ ಕೇವಲ ಆ ವ್ಯಕ್ತಿಗೆ ಮಾತ್ರವಲ್ಲದೇ ಅವನ ಸುತ್ತಮುತ್ತ ಇರುವ ವ್ಯಕ್ಯಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್ ಕೆ.ಎಚ್ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT