ಶನಿವಾರ, ಸೆಪ್ಟೆಂಬರ್ 25, 2021
26 °C

ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಆಹಾರವನ್ನು ಉತ್ಪಾದಿಸುವ ಕೃಷಿ ಕ್ಷೇತ್ರವು ಇಂದು ದುಃಸ್ಥಿತಿಯತ್ತ ಸಾಗುತ್ತಿದೆ. 1990ರ ದಶಕದಿಂದ 3.5 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ರೈತನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ವ್ಯವಸ್ಥೆ ಸರಿಯಾಗಬೇಕಾದರೆ ರೈತರಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕು. ರೈತರ ಆದಾಯ ದ್ವಿಗುಣಗೊಳ್ಳಬೇಕೆಂಬುದು ಸರ್ಕಾರದ ಒಳ್ಳೆಯ ಚಿಂತನೆಯೇ ಸರಿ. ಆದರೆ ಸರ್ಕಾರ ಕೇವಲ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಘೋಷಿಸಿದರೆ ಸಾಲದು ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ, ಖರೀದಿ ಗ್ಯಾರಂಟಿ ನೀಡಿ, ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಯಾಗಬಾರದು. ರೈತ ಗೌರವಯುತ ಜೀವನ ನಡೆಸಬೇಕಾದರೆ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ, ಖರೀದಿಸಬೇಕೆಂದು ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದರು.

ಪ್ರತಿ ವರ್ಷ ಬೆಲೆ ಘೋಷಣೆಯು ಹಣದುಬ್ಬರ ದರಕ್ಕೆ ಅನುಗುಣವಾಗಿರಲಿ. ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹವಾಗಿಸಬೇಕು. ಈ ಮೇಲ್ಕಂಡ ಅಂಶಗಳನ್ನು ಕಠಿಣ ಕಾನೂನು ರೂಪಿಸುವುದರ ಮೂಲಕ ಜಾರಿಗೊಳಿಸಬೇಕು. ಇಲ್ಲದಿದ್ದರೆ ಭಾರತೀಯ ಕಿಸಾನ್ ಸಂಘವು ಮುಂಬರುವ ಅಧಿವೇಶನದಲ್ಲಿ ಸಂಸದರ ಮೂಲಕ ಒತ್ತಡ ಹೇರಿ ಖಾಸಗಿ ಬಿಲ್ ಮಂಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಪ್ರಾಂತ ಕಾರ್ಯದರ್ಶಿ ಪ್ರವೀಣ್, ಮಹಿಳಾ ಪ್ರಮುಖ ವಸಂತಮ್ಮ, ಕೋಶಾಧ್ಯಕ್ಷ ಎಂ.ಕೆ. ಶಾಂತರಾಜ್, ತಿಪ್ಪೇಶ್, ಮುರುಗೇಶ್, ಹನುಮಂತಪ್ಪ, ಸಂತೋಷ್, ಪ್ರಭು, ನೀಲಕಂಠ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು