ಹರಿಹರ: ಶಾಸಕ ಬಿ.ಪಿ.ಹರೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಾಯತ್ರಿ ಕೆ.ಎಚ್ ಹಾಗೂ ಇಲಾಖೆಯ ತಾಲ್ಲೂಕು ಅಧಿಕಾರಿ ನುಸ್ರತ್ ಪರ್ವಿನ್ ಅವರು ಶನಿವಾರ ಬೆಳಿಗ್ಗೆ ನಗರದ ಗುತ್ತೂರಿನಲ್ಲಿರುವ ಬಿಸಿಎಂ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಹಾಸ್ಟೆಲ್‌ಗೆ ಶುಕ್ರವಾರ ದಿಢೀರ್ ಭೇಟಿ ನೀಡಿದಾಗ, ಅಲ್ಲಿನ ನ್ಯೂನತೆಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದರು. ಸರ್ಕಾರ ನಿಗದಿಪಡಿಸಿದ ರೀತಿ ವಿದ್ಯಾರ್ಥಿಗಳಿಗೆ ಊಟ ನೀಡುತ್ತಿಲ್ಲ ಎಂದು ವಾರ್ಡನ್ ಜಿ.ಕೆ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಶಾಸಕರಿಗೆ ದೂರು ನೀಡಿದ್ದರಿಂದ ಕೋಪಗೊಂಡಿದ್ದ ವಾರ್ಡನ್, ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಎನ್ನಲಾಗಿದ್ದು, ಇದರ ಆಡಿಯೊವನ್ನು ಶಾಸಕರು ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ವಿದ್ಯಾರ್ಥಿಗಳು ಕಳಿಸಿದ್ದರು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಶನಿವಾರ ಮತ್ತೆ ಹಾಸ್ಟೆಲ್‌ಗೆ ಭೇಟಿ ನೀಡಿದ ಶಾಸಕ ಹರೀಶ್, ವಾರ್ಡನ್ ಕುಮಾರ್ ಜತೆ ಮಾತನಾಡಿದರು.
‘ವಾರ್ಡನ್ ತಮ್ಮ ತಪ್ಪು ತಿದ್ದಿಕೊಂಡು ಸರ್ಕಾರದ ನಿಯಮಾನುಸಾರ ಮಕ್ಕಳಿಗೆ ಊಟ ಒದಗಿಸಬೇಕು. ಮತ್ತೆ ಈ ತರಹದ ನ್ಯೂನತೆ ಮರುಕಳಿಸದಂತೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಿಗಾ ಇರಿಸಬೇಕು. ಆಗಾಗ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು’ ಎಂದು ಶಾಸಕರು ತಾಕೀತು ಮಾಡಿದರು.